

ಬೆಂಗಳೂರು: ವಿಪತ್ತು ನಿರ್ವಹಣೆ ಸಂದರ್ಭದಲ್ಲಿ ಏಕೀಕೃತ ಸಹಾಯವಾಣಿ ವ್ಯವಸ್ಥೆ ರೂಪಿಸಬೇಕಾದ ಅಗತ್ಯ ಇದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ಎನ್‌ಡಿಎಂಎ) ಜಂಟಿ ಸಲಹೆಗಾರ ಪವನ್ ಕುಮಾರ್ ಸಿಂಗ್ ತಿಳಿಸಿದರು.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಬುಧವಾರ ನಡೆದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಹಾಗೂ ಮೈಸೂರು ಜಿಲ್ಲೆಗಳ ಜಿಲ್ಲಾ ವಿಪತ್ತು ನಿರ್ವಹಣಾ ಸಿದ್ಧತೆ ಹಾಗೂ ನಿರ್ವಹಣೆ ಪ್ರಕರಣಗಳ ಬಗ್ಗೆ ಪ್ರಾತ್ಯಕ್ಷಿಕೆ ವೀಕ್ಷಿಸಿ ಅವರು ಮಾತನಾಡಿದರು.
ಪ್ರವಾಹ ಸೇರಿ ಇನ್ನಿತರ ಪ್ರಕೃತಿ ವಿಕೋಪ ಅವಘಡಗಳ ಸಂದರ್ಭದಲ್ಲಿ ಸಂಬಂಧಿಸಿದ ಇಲಾಖೆಗಳು ಸಂತ್ರಸ್ತರಿಗೆ ತ್ವರಿತವಾಗಿ ಸ್ಪಂದಿಸಬೇಕು. ವಿವಿಧ ಇಲಾಕೆಗಳೊಂದಿಗೆ ಸಮನ್ವಯ ಸಾಧಿಸಿ ಪರಿಹಾರ ಕಾರ್ಯವನ್ನು ಕೈಗೊಳ್ಳಬೇಕು. ವೇಗದ ಸಂವಹನಕ್ಕಾಗಿ ಏಕೀಕೃತ ಸಹಾಯವಾಣಿ ಬಳಸುವುದು ಸೂಕ್ತ ಎಂದು ಅವರು ತಿಳಿಸಿದರು.
ಎನ್‌ಡಿಎಂಎ ಹಿರಿಯ ಸಂಶೋಧನಾಧಿಕಾರಿ ಅಭಿಷೇಕ್ ಶರ್ಮಾ ಅವರು ಪ್ರಾತ್ಯಕ್ಷಿಕೆ ಮೂಲಕ ವಿಪತ್ತು ನಿರ್ವಹಣಾ ಕ್ರಿಯಾಯೋಜನೆ, ಮಾರ್ಗಸೂಚಿಗಳ ಬಗ್ಗೆ ವಿವರಿಸಿ ರಾಜ್ಯ ಹಾಗೂ ಜಿಲ್ಲಾ ವಿಪತ್ತು ನಿರ್ವಹಣೆ ಪ್ರಾಧಿಕಾರಗಳೊಂದಿಗೆ ಸಹಕಾರ ಮತ್ತು ಮಾರ್ಗದರ್ಶನ ಒದಗಿಸುವ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಹಿರಿಯ ಸಮಾಲೋಚಕ ಕುನಾಲ್ ಚಕ್ರವರ್ತಿ, ಬೆಂಗಳೂರು ನಗರ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್ ನಾಯಕ್ ಸೇರಿ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.