

ಮಂಡ್ಯ: ಪಾಂಡವಪುರ ರೈಲ್ವೆ ನಿಲ್ದಾಣದ ವೇದಿಕೆ ನ.2ರಲ್ಲಿ ಶನಿವಾರ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಸುಮಾರು 35 ರಿಂದ 40 ವರ್ಷದವನಾಗಿದ್ದು, 5.6 ಅಡಿ ಎತ್ತರ, ದುಂಡು ಮುಖ ಹಾಗೂ ಸಾಧಾರಣ ಮೈಕಟ್ಟು ಹೊಂದಿದ್ದಾನೆ. ಬಲಗೈ ಮೇಲೆ ಆಂಜನೇಯಸ್ವಾಮಿ ದೇವರ ಹಚ್ಚೆ, ಭುಜದ ಹತ್ತಿರ ಹಾವಿನ ಜತೆ ಇರುವ ತ್ರಿಶೂಲ ಹಾಗೂ ಜ್ಯೋತಿ ಎಂದು ಹಚ್ಚೆ ಇದೆ. ಎಡಗೈ ಮೇಲೆ ಶೃತಿ, ಎದೆಯ ಮೇಲೆ ಹೃದಯ ಚಿತ್ರವಿದ್ದು, ಅದರೊಳಗೆ ಜ್ಯೋತಿ ಎಂದು ಹಚ್ಚೆ ಹಾಕಿಸಿಕೊಂಡಿದ್ದಾನೆ.
ಮೃತನ ಮೈಮೇಲೆ ಪಿಂಕ್ ಬಣ್ಣದ ತುಂಬು ತೋಳಿನ ಅಂಗಿ, ಇದರಲ್ಲಿ ಹಳದಿ ನೀಲಿ ಬಣ್ಣದ ಉದ್ದದ ಗೆರೆ ಇವೆ. ಕಪ್ಪು ಬಣ್ಣದ ಫಾರ್ಮಲ್ ಪ್ಯಾಂಟ್, ಕಾಫಿ ಬಣ್ಣದ ಟವಲ್ ಧರಿಸಿದ್ದನು. ಮೃತದೇಹವನ್ನು ಮಿಮ್ಸ್ ಶವಾಗಾರಕ್ಕೆ ರವಾನಿಸಲಾಗಿದೆ. ವಾರಸುದಾರರಿದ್ದರೆ ಮಂಡ್ಯ ರೈಲ್ವೆ ಪೊಲೀಸರನ್ನು ಸಂಪರ್ಕಿಸಬಹುದೆಂದು ಪ್ರಕಟಣೆ ತಿಳಿಸಿದೆ.