

ಚಿಕ್ಕಮಗಳೂರು: ಪಕ್ಷದ ಆದೇಶ ಉಲ್ಲಂಘಿಸಿ ನಗರಸಭೆ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿದಿರುವ ವರಸಿದ್ಧಿ ವೇಣುಗೋಪಾಲ್ ಅವರನ್ನು ತಕ್ಷಣ ಬಿಜೆಪಿಯಿಂದ ಅಮಾನತುಪಡಿಸಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ ತಿಳಿಸಿದರು.
ನಗರದ ಪ್ರೆಸ್ ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರಸಭೆ ಅಧ್ಯಕ್ಷರ ಅವಧಿ ಹಂಚಿಕೆ ವಿಚಾರದಲ್ಲಿ ಪಕ್ಷದ ನಾಯಕರು ಹಾಗೂ ಕೋರ್‌ಕಮಿಟಿ ತೀರ್ಮಾನವನ್ನು ವರಸಿದ್ಧಿ ವೇಣುಗೋಪಾಲ್ ಉಲ್ಲಂಘಿಸಿದ್ದಾರೆ. ಅಲ್ಲದೆ ಅಧ್ಯಕ್ಷ ಸ್ಥಾನಕ್ಕೆ ನೀಡಿದ ರಾಜೀನಾಮೆಯನ್ನು ಕೊನೇ ಘಳಿಗೆಯಲ್ಲಿ ಹಿಂದಕ್ಕೆ ಪಡೆದು ಪಕ್ಷವನ್ನು ಮುಗುರುಕ್ಕೀಡುಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಪಕ್ಷದಿಂದ ಅಮಾನತು ಮಾಡಲಾಗಿದೆ. ಇಂದಿನಿಂದ ವರಸಿದ್ಧಿ ವೇಣುಗೋಪಾಲ್‌ಗೂ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.
ವರಸಿದ್ಧಿ ವೇಣುಗೋಪಾಲ್ ಸಾರ್ವಜನಿಕವಾಗಿಯೂ ಹಲವಾರು ಸಂದರ್ಭಗಳಲ್ಲಿ ಪಕ್ಷವನ್ನ ಇಕ್ಕಟ್ಟಿಗೆ ಸಿಕ್ಕಿಸಿ, ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದರು. ಬಿಜೆಪಿ ಅಂಬೇಡ್ಕರ್ ಬಗ್ಗೆ ಅಪಾರವಾದ ಶ್ರದ್ಧೆ, ಗೌರವ ಇಟ್ಟುಕೊಂಡಿದೆ. ಅನಾವಶ್ಯಕವಾಗಿ ಪಕ್ಷದ ಹಿರಿಯ ನಾಯಕರ ಜತೆ ಚರ್ಚಿಸದೇ ನಗರದ ಜಿಮ್‌ವೊಂದಕ್ಕೆ ಹೆಸರಿಡುವ ವಿಚಾರದಲ್ಲಿ ವಿವಾದವನ್ನುಂಟು ಮಾಡಿದ್ದರು. ಆದರೆ ಪಕ್ಷದ ಎಲ್ಲಾ ಸದಸ್ಯರು ಜೈ ಭೀಮ್ ಹೆಸರಿಡಬೇಕು ಎಂದು ನಿರ್ಣಯಿಸಿದರು ಎಂದು ದೂರಿದರು.
ಟ್ರೇಡ್ ಲೈಸೆನ್ಸ್ ತೆರಿಗೆ ಹೆಚ್ಚುಗೊಳಿಸುವ ವಿಚಾರ, ತಳ್ಳುವ ಗಾಡಿ ವ್ಯಾಪಾರಸ್ಥರಿಗೆ ತೊಂದರೆ, ಹೀಗೆ ಪಕ್ಷಕ್ಕೆ ಮುಜುಗುರ ಉಂಟುಮಾಡುವ ಹಲವು ಸಂದರ್ಭಗಳನ್ನು ನಿರ್ಮಾಣ ಮಾಡಿದ್ದರು ಎಂದು ತಿಳಿಸಿದರು.
ಸಾರ್ವಜನಿಕವಾಗಿ ಕೆಲವು ಸಂಘ, ಸಂಸ್ಥೆಗಳು ನಗರಸಭೆಗೆ ಬಂದ ಸಂದರ್ಭದಲ್ಲೂ ಗೌರವ ನೀಡುತ್ತಿರಲಿಲ್ಲ. ಈ ಎಲ್ಲ ವಿಚಾರಗಳ ಬಗ್ಗೆ ಹಲವಾರು ಬಾರಿ ಅವರ ಗಮನಕ್ಕೆ ತಂದರೂ ಅದನ್ನು ಸರಿಪಡಿಸುವುದಾಗಲಿ ಮತ್ತು ಮಾನ್ಯತೆ ಕೊಡುವುದಾಗಲಿ ಮಾಡಲಿಲ್ಲ. ಆದ್ದರಿಂದ ಅವರನ್ನು ಅಮಾನತುಗೊಳಿಸಲಾಗಿದೆ ಎಂದರು.
ನಗರಸಭೆ ಸದಸ್ಯ ಟಿ.ರಾಜಶೇಖರ್ ಮಾತನಾಡಿ, ನಗರಸಭೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಸಭೆಗೆ ಜಿಲ್ಲಾಧಿಕಾರಿಗಳು ದಿನಾಂಕ ನಿಗದಿಪಡಿಸಬೇಕು. ಅವಿಶ್ವಾಸಕ್ಕೆ ಜಯಸಿಗುತ್ತದೆ ಎನ್ನುವ ವಿಶ್ವಾಸ ನಮಗಿದೆ. ಅವಿಶ್ವಾಸ ಗೆಲ್ಲಲು ಮೂರನೇ ಎರಡರಷ್ಟು ಸದಸ್ಯರ ಬೆಂಬಲ ಬೇಕಾಗುತ್ತದೆ. ಆ ಪ್ರಕಾರ 26 ಸದಸ್ಯರ ಸಹಮತ ಅಗತ್ಯವಿದೆ. ಈಗಾಗಲೇ 21 ಜನರು ಸಹಿ ಹಾಕಿ ಕೊಟ್ಟಿದ್ದಾರೆ. ಇನ್ನೂ ಕಾಂಗ್ರೆಸ್‌ನ ಐದಾರು ಮಂದಿ ಅಸಮಾದಾನಿತರು ನಾವು ಅವಿಶ್ವಾಸದ ಪರ ಮತ ಚಲಾಯಿಸುವುದಾಗಿ ತಿಳಿಸಿದ್ದಾರೆ. ಈ ನಡುವೆ ಅವರ ಪಕ್ಷದ ಒತ್ತಡವೂ ಇದೆ ಎನ್ನಲಾಗುತ್ತಿದೆ. ಅವಿಶ್ವಾಸ ಸಭೆ ನಡೆದ ನಂತರ ಎಲ್ಲವೂ ಸ್ಪಷ್ಟವಾಗಲಿದೆ ಎಂದು ತಿಳಿಸಿದರು.