ಮುರಗಮಲೆ ಪಶು ಆಸ್ಪತ್ರೆ ಬಳಿ ಅನೈರ್ಮಲ್ಯ

FotoJet
Published on

ಶುಚಿತ್ವ ಕಾಪಾಡುವಂತೆ ಸ್ಥಳೀಯ ನಿವಾಸಿಗಳು, ರೈತರು ಅಗ್ರಹ

ಚಿಂತಾಮಣಿ: ತಾಲೂಕಿನ ಹೋಬಳಿ ಕೇಂದ್ರ ಮುರಗಮಲೆ ಪಶು ಆಸ್ಪತ್ರೆ ಬಳಿ ಅನೈರ್ಮಲ್ಯ ತಾಂಡವವಾಡುತ್ತಿದ್ದು, ಅಧಿಕಾರಿಗಳ ವಿರುದ್ಧ ನಾಗರಿಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಪ್ರತಿನಿತ್ಯ ಚಿಕಿತ್ಸೆಗಾಗಿ ಹೋಬಳಿಯ ಗ್ರಾಮಸ್ಥರು ಜಾನವಾರುಗಳನ್ನು ಆಸ್ಪತ್ರೆಗೆ ತರುತ್ತಾರೆ. ಕೆಲ ಸಂದರ್ಭಗಳಲ್ಲಿ ಹಸುಗಳ ಹೊಟ್ಟೆಯೊಳಗಿನ ತ್ಯಾಜ್ಯವನ್ನು ಹೊರತೆಗೆದು, ಆಸ್ಪತ್ರೆಯ ಮುಂದೆಯೇ ಬಿಸಾಡುವುದರಿಂದ, ಅದರ ದುರ್ನಾತಕ್ಕೆ ಅಕ್ಕಪಕ್ಕದ ನಿವಾಸಿಗಳು ಮತ್ತು ಆಸ್ಪತ್ರೆ ಮುಂಭಾಗದ ರಸ್ತೆಯಲ್ಲಿ ಓಡಾಡುವುವರು ಕಿರಿಕಿರಿ ಅನುಭವಿಸುತ್ತಿದ್ದು, ಮೂಗು ಮುಚ್ಚಿಕೊಂಡೇ ಓಡಾಡುವಂತಾಗಿದೆ.

ಆಸ್ಪತ್ರೆಯ ಕಟ್ಟಡಕ್ಕೆ ಕಾಂಪೌಂಡ್ ಇಲ್ಲದ ಪರಿಣಾಮ ಆಸ್ಪತ್ರೆಯ ಮುಂಭಾಗದಲ್ಲಿಯೇ ಚಿಕಿತ್ಸೆ ನಿಡುತ್ತಿದ್ದು, ಹಲವು ಬಾರಿ ಹಸುಗಳ ದೇಹದಿಂದ ತೆಗೆದ ಕೆಟ್ಟ ಭಾಗವನ್ನು ನಾಯಿಗಳು ಎಳೆದಾಡಿಕೊಂಡು ರಸ್ತೆ ಮತ್ತು ಸಮೀಪದ ನಿವಾಸಿಗಳ ಮನೆಯ ಬಳಿ ತಂದು ಹಾಕುತ್ತಿವೆ. ಈ ಬಗ್ಗೆ ಸದರಿ ಆಸ್ಪತ್ರೆಯ ಪಶುವೈದ್ಯರ ಗಮನಕ್ಕೆ ತಂದರೆ ಸಿಬ್ಬಂದಿ ಕೊರತೆ ನೆಪ ಹೇಳುತ್ತಾರೆ ವಿನಃ ಸ್ವಚ್ಛತೆಗೆ ಮುಂದಾಗುತ್ತಿಲ್ಲ. ಶುಚಿತ್ವದ ಬಗ್ಗೆ ಪ್ರಶ್ನಿಸಿದರೆ ದರ್ಪದಿಂದ ವರ್ತಿಸುತ್ತಾರೆ. ಈ ಬಗ್ಗೆ ಗ್ರಾಮ ಪಂಚಾಯಿತಿ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಆಸ್ಪತ್ರೆ ಸುತ್ತಮುತ್ತಲಿನ ನಿವಾಸಿಗಳು ಆರೋಪಿಸುತ್ತಿದ್ದಾರೆ. ಇನ್ನಾದರೂ ಮೇಲಧಿಕಾರಿಗಳು ಎಚ್ಚೆತ್ತುಕೊಂಡು ಆಸ್ಪತ್ರೆ ಆವರಣದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡದಿದ್ದರೆ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net