

ಬೇಲೂರು: ತಾಲೂಕಿನ ಬಂಟೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಂಟೇನಹಳ್ಳಿ, ದೇವರಾಜಪುರದ ರಸ್ತೆ ಬದಿಯಲ್ಲಿ ಪ್ಲಾಸ್ಟಿಕ್, ಮಾಂಸ ಸೇರಿದಂತೆ ಇತರ ತ್ಯಾಜ್ಯವನ್ನು ಹಾಕಿರುವುದರಿಂದ ರಸ್ತೆಯಲ್ಲಿ ಸಾರ್ವಜನಿಕರು ಓಡಾಡದ ಸ್ಥಿತಿ ನಿರ್ಮಾಣವಾಗಿದೆ.
ಸಾರ್ವಜನಿಕರ ಅನಾರೋಗ್ಯಕ್ಕೆ ಕಾರಣವಾಗುವ ತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲಿ ಹಾಕಬಾರದು ಎಂಬ ಉದ್ದೇಶದಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ಗ್ರಾಮ ಪಂಚಾಯಿತಿಗೊಂದು ಘನತ್ಯಾಜ್ಯ ಘಟಕ ನಿರ್ಮಾಣಕ್ಕೆ ಮುಂದಾಗಿ ವರ್ಷಗಳೇ ಕಳೆದಿದೆ. ಆದರೆ ಬಂಟೇನಹಳ್ಳಿ ಗ್ರಾಮ ಪಂಚಾಯಿತಿಯಿಂದ ಘಟಕ ನಿರ್ಮಿಸಿದ್ದರೂ ಕಾರ್ಯಾರಂಭ ಮಾಡದ ಕಾರಣ ಅಂಗಡಿ, ಮುಂಗಟ್ಟು ಹಾಗೂ ಮಾಂಸದಂಗಡಿಗಳ ಮಾಲೀಕರು, ಕೆಲ ಸಾರ್ವಜನಿಕರು ತಮ್ಮಲ್ಲಿ ಸಿಗುವ ತ್ಯಾಜ್ಯ ವಸ್ತುಗಳನ್ನೆಲ್ಲ ಬೇಲೂರು-ಹಳೇಬೀಡು ರಸ್ತೆಯ ಕಾವೇರಿ ನೀರಾವರಿ ನಿಗಮದ ಯಗಚಿ ಯೋಜನಾ ವಿಭಾಗದ ಕಚೇರಿ ಸಮೀಪದ ಬಂಟೇನಹಳ್ಳಿ, ದೇವರಾಜಪುರದವರೆಗಿನ ಎರಡೂ ಕಡೆಯ ರಸ್ತೆ ತಂದು ಹಾಕಲಾಗುತ್ತಿದೆ.
ಈ ನಡುವೆ ಕೆಲ ಮಾಂಸದಂಗಡಿಯವರು ಕೋಳಿ, ಕುರಿ ಸೇರಿದಂತೆ ಇತರ ತ್ಯಾಜ್ಯವನ್ನು ಮನಸ್ಸಿಗೆ ಬಂದಂತೆ ಬೇಲೂರು-ಹಳೇಬೀಡು ರಸ್ತೆ ಬದಿಯಲ್ಲೇ ಹಾಕುತ್ತಿರುವುದರಿಂದ ಸಾಂಕ್ರಾಮಿಕ ರೋಗಗಳ ಉತ್ಪತ್ತಿಗೆ ಕಾರಣವಾಗುತ್ತಿದೆ. ಜತೆಗೆ ಈ ಭಾಗದ ಸಾರ್ವಜನಿಕರ ಆರೋಗ್ಯ ಸಮಸ್ಯೆಗೂ ಕಾರಣವಾಗುತ್ತಿದೆ. ಈ ಬಗ್ಗೆ ಬಂಟೇನಹಳ್ಳಿ ಗ್ರಾಮ ಪಂಚಾಯಿತಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸ್ಥಳೀಯರು. ಈ ರಸ್ತೆಯಲ್ಲಿ ಸಂಚರಿಸುವ ಸಾರ್ವಜನಿಕರು, ವಾಹನಗಳ ಸವಾರರು ಮೂಗು ಮುಚ್ಚಿ ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ನಿತ್ಯ ಇದೇ ರಸ್ತೆಯಲ್ಲೆ ಪ್ರಯಾಣಿಸುವ ಜನ ಪ್ರತಿನಿಧಿಗಳಿಗೆ ಇಲ್ಲಿನ ತ್ಯಾಜ್ಯದ ರಾಶಿ ಕಣ್ಣಿಗೆ ಬಿದ್ದಿಲ್ಲದಿರುವುದು ದುರಂತವೇ ಸರಿ. ವಿಶೇಷವೆಂದರೆ ತ್ಯಾಜ್ಯ ತಿನ್ನಲು ಬರುವ ನಾಯಿಗಳು ತ್ಯಾಜ್ಯವನ್ನೆಲ್ಲ ರಸ್ತೆಯ ಅಕ್ಕಪಕ್ಕಕ್ಕೆ ಹಾಕಿ ಪರಿಸರಕ್ಕೆ ಹಾನಿ ಮಾಡುತ್ತಿವೆ. ಇದರಿಂದ ಈ ಭಾಗದ ನಾಗರಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಆದ್ದರಿಂದ ಬಂಟೇನಹಳ್ಳಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇತ್ತ ಗಮನಹರಿಸಿ ಇಲ್ಲಿ ತ್ಯಾಜ್ಯ ತಂದು ಹಾಕದಂತೆ ಎಚ್ಚರ ವಹಿಸಬೇಕು. ಜತೆಗೆ ಕಸ ಮತ್ತು ತ್ಯಾಜ್ಯ ಹಾಕುವವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾದರೆ ತ್ಯಾಜ್ಯ ಹಾಕುವುದನ್ನು ತಡೆಗಟ್ಟುವುದರ ಜತೆಗೆ ಸ್ವಚ್ಛತೆಗೆ ಆದ್ಯತೆ ನೀಡಬಹುದಾಗಿದೆ ಎಂಬುದು ನಾಗರಿಕರ ಆಗ್ರಹ.
ಬೇಲೂರು-ಹಳೇಬೀಡು ವಿಶ್ವವಿಖ್ಯಾತ ಅದರಲ್ಲೂ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿದ ಸುಂದರ ಪ್ರವಾಸಿ ತಾಣ. ಇಲ್ಲಿಗೆ ನಿತ್ಯ ಸಾವಿರಾರು ಪ್ರವಾಸಿಗರು ದೇಶ ವಿದೇಶಗಳಿಂದ ಆಗಮಿಸುತ್ತಾರೆ. ಬೇಲೂರಿನಲ್ಲಿನ ಶಿಲ್ಪಕಲೆಯನ್ನು ವೀಕ್ಷಿಸಿದ ಪ್ರವಾಸಿಗರು ಹಳೇಬೀಡಿಗೆ ತೆರಳಿಗೆ ಅಲ್ಲಿನ ಶಿಲ್ಪ ಸೌಂದರ್ಯವನ್ನು ವೀಕ್ಷಿಸುವುದು ಸಾಮಾನ್ಯ. ಆದರೆ ಹಳೇಬೀಡು ದೇಗುಲ ನೋಡಿದವರು ಬೇಲೂರಿಗೆ, ಬೇಲೂರು ದೇಗುಲವನ್ನು ನೋಡಿದವರು ಹಳೇಬೀಡಿಗೆ ತೆರಳುವುದು ಸಾಮಾನ್ಯ.
ಆದರೆ ಬೇಲೂರು-ಹಳೇಬೀಡಿಗೆ ಬರುವವರು ಮತ್ತು ಹೋಗುವವರು ಇದೇ ಬಂಟೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲೆ. ಆದರೆ ಹಳೇಬೀಡು ಭಾಗದಿಂದ ಬೇಲೂರಿಗೆ ಬರುವ ಸಂದರ್ಭ ಪ್ರವಾಸಿಗರು ದೇವರಾಜಪುರ-ಬಂಟೇನಹಳ್ಳಿ ಮೂಲಕವೇ ಬರಬೇಕಿದೆ. ಇವರಿಗೆ ಮೊದಲು ಸ್ವಾಗತ ಕೋರುವುದೇ ರಸ್ತೆಯ ಇಕ್ಕೆಲಗಳಲ್ಲಿ ರಾಶಿ ಬಿದ್ದಿರುವ ಕಸಕಡ್ಡಿ, ಪ್ಲಾಸ್ಟಿಕ್ ಹಾಗೂ ಮಾಂಸದ ತ್ಯಾಜ್ಯಗಳು. ಇದನ್ನು ನೋಡಿದ ಪ್ರವಾಸಿಗರು ಇಂತಹ ಪ್ರವಾಸಿ ತಾಣದಲ್ಲೂ ಸ್ವಚ್ಛತೆ ಇಲ್ಲದಿರುವುದಕ್ಕೆ ಬೇಸರ ವ್ಯಕ್ತಪಡಿಸಿ ತೆರಳುವುದು ಸಾಮಾನ್ಯವಾಗಿದೆ.
ತಾಲೂಕಿನ ಬಂಟೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಂಟೇನಹಳ್ಳಿ ಹಾಗೂ ದೇವರಾಜಪುರ ಗ್ರಾಮಸ್ಥರು ಹಾಗೂ ಮಾಂಸದಂಗಡಿಯ ಕೆಲವರು ಮನೆಯಲ್ಲಿ ಮತ್ತು ಅಂಗಡಿ-ಮುಂಗಟ್ಟುಗಳಲ್ಲಿ ಸಿಗುವ ಕಸ ಕಡ್ಡಿ, ಪ್ಲಾಸ್ಟಿಕ್ ತ್ಯಾಜ್ಯವನ್ನು ಬೇಲೂರು-ಹಳೇಬೀಡು ರಸ್ತೆಯ ಎರಡು ಬದಿಯ ಅಕ್ಕಪಕ್ಕದಲ್ಲಿ ತಂದು ಸುರಿಯುತ್ತಿರುವುದರಿಂದ ಈ ಭಾಗದ ಜನರ ಆರೋಗ್ಯದ ಮೇಲೆ ದೊಡ್ಡ ದುಷ್ಪರಿಣಾಮ ಬೀರುತ್ತಿದೆ. ಹಾಗಾಗಿ ತ್ಯಾಜ್ಯವನ್ನು ನಿರ್ದಿಷ್ಟ ಸ್ಥಳದಲ್ಲಿ ಹಾಕಿ ಸ್ವಚ್ಛತೆ ಕಾಪಾಡುವಂತೆ ಮಾಂಸದಂಗಡಿಗಳಿಗೆ ಗ್ರಾಮ ಪಂಚಾಯಿತಿ ತಿಳಿ ಹೇಳಬೇಕು. ಇದಕ್ಕೂ ಅವರು ಬಗ್ಗದಿದ್ದಲ್ಲಿ ಅಂಗಡಿಗೆ ನೀಡಿರುವ ಲೈಸನ್ಸ್ ರದ್ದುಪಡಿಸಿ ಅವರ ವಿರುದ್ಧ ಕ್ರಮಕ್ಕೆ ಮುಂದಾದರೆ ಅವರೇ ಸ್ವಚ್ಛತೆಗೆ ಆದ್ಯತೆ ನೀಡುತ್ತಾರೆ. ಈ ಬಗ್ಗೆ ಅಧಿಕಾರಿಗಳು ಮುಂದಾಗಬೇಕಿದೆ.
ರಾಜಶೇಖರ್ ಬಂಟೇನಹಳ್ಳಿ ಗ್ರಾಮಸ್ಥ
ಬಂಟೇನಹಳ್ಳಿ ಹಾಗೂ ದೇವರಾಜಪುರದ ರಸ್ತೆಯ ಎರಡೂ ಕಡೆ ಕಸ ಕಡ್ಡಿ, ಪ್ಲಾಸ್ಟಿಕ್ ಮತ್ತು ಕೋಳಿ ಮಾಂಸದ ತ್ಯಾಜ್ಯ ಸುರಿಯಲಾಗಿದೆ. ರಸ್ತೆ ಪಕ್ಕ ಹಾಗೂ ಎಲ್ಲಿಯೂ ಕಸ ಹಾಕದಂತೆ ಗ್ರಾಮ ಪಂಚಾಯಿತಿಯಿಂದ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು. ನಿಗದಿತ ಸ್ಥಳದಲ್ಲಿ ಕಸ ಹಾಕಿದರೆ ವಿಲೇವಾರಿ ಮಾಡಲು ಸುಲಭವಾಗುತ್ತದೆ. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಅಧಿಕಾರಿಗಳು ರಸ್ತೆ ಪಕ್ಕದಲ್ಲಿ ಕಸ ಹಾಕುವವರ ವಿರುದ್ಧ ಕ್ರಮ ಕೈಗೊಂಡರೆ ಎಲ್ಲರಿಗೂ ಅನುಕೂಲ.
ಉಮೇಶ್ ನಾಟಿ ವೈದ್ಯ, ಸೋಂಪುರ
ಬಂಟೇನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಚನಾಯಕನಹಳ್ಳಿಯಲ್ಲಿ ಘನ ತ್ಯಾಜ್ಯ ಘಟಕವಿದೆ. ಆದರೆ ಅಲ್ಲಿಗೆ ತೆರಳಲು ಸರಿಯಾದ ರಸ್ತೆ ಇಲ್ಲದ ಕಾರಣ ಅಲ್ಲಿ ತ್ಯಾಜ್ಯ ಸಂಗ್ರಹಿಸಿ ವಿಂಗಡಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ತ್ಯಾಜ್ಯವನ್ನು ಕೆಲವರು ಎಲ್ಲೆಂದರಲ್ಲಿ ಸುರಿಯುತ್ತಿದ್ದಾರೆ. ಆದರೆ ಈಗ ರಸ್ತೆಗೆ ಜಾಗ ಗುರುತು ಮಾಡಿದ್ದು, ಕರಾಬ್ ಜಾಗವಾಗಿರುವುದರಿಂದ ಮುಂದಿನ ಕೆಲವೇ ದಿನಗಳಲ್ಲೆ ರಸ್ತೆಗೆ ಅಡ್ಡಲಾಗಿರುವ ಕಲ್ಲುಗಳನ್ನು ತೆರವುಗೊಳಿಸಿ, ಕಸ ಸಂಗ್ರಹಿಸಿ ಘನತ್ಯಾಜ್ಯ ಘಟಕ ಆರಂಭಿಸಲಾಗುತ್ತದೆ. ರಸ್ತೆ ಬದಿಯಲ್ಲಿರುವ ಕಸ ಕಡ್ಡಿ, ಪ್ಲಾಸ್ಟಿಕ್ ತೆರವು ಮಾಡಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು.
ಸಂತೋಷ್ ಅಭಿವೃದ್ಧಿ ಅಧಿಕಾರಿ, ಬಂಟೇನಹಳ್ಳಿ ಗ್ರಾಮ ಪಂಚಾಯಿತಿ