ನೆರವಿಗೆ ಬಾರದ ಕಾರ್ಯಾಂಗ, ಶಾಸಕಾಂಗ

priya
Published on

ಕೋಲಾರ: ಜಿಲ್ಲೆಯಲ್ಲಿ ಪುಸ್ತಕ ಮನೆಯನ್ನು ಕಟ್ಟಿ, ಸುಮಾರು 60 ದಶಕಗಳಿಂದ ಸಾಹಿತ್ಯ ಕ್ಷೇತ್ರಕ್ಕೆ ಶ್ರಮಿಸುತ್ತಿರುವ ಸಾಹಿತಿಗೆ ಸೂರು ಕಲ್ಪಿಸುವಲ್ಲಿ ಶಾಸಕಾಂಗ, ಕಾರ್ಯಾಂಗ ಮುಂದೆ ಬಂದಿಲ್ಲ ಎಂದು ಸಾಹಿತಿ ಹರಿಹರ ಪ್ರಿಯ ಅಸಮಾಧಾನ ಹೊರ ಹಾಕಿದರು.

ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕುವೆಂಪು ಅವರೊಂದಿಗೆ ನಾನು 15-&17 ವರ್ಷದ ಬಾಲ್ಯದಿಂದಲೂ ಒಟನಾಟ ಇಟ್ಟುಕೊಂಡಿದ್ದೆ, ಹಲವು ವರ್ಷಗಳಿಂದ ಶ್ರಮಿಸಿ ಪ್ರಕಟಿಸಿರುವ ಪುಸ್ತಕವನ್ನು ಹಂಪಿ ವಿಶ್ವವಿದ್ಯಾಲಯವು ಕಸಿದಿರುವುದನ್ನು ಕಂಡು ಹೃದಯಾಘಾತಕ್ಕೆ ಒಳಗಾದೆ ಎಂದರು.

ಮೂಲ ಕೃತಿ ರಚಿಸಿರುವ ನನ್ನ ಅನುಮತಿ ಇಲ್ಲದೆ ನಾನು ಸಂಗ್ರಹಿಸಿ ಪ್ರಕಟಿಸಿರುವುದನ್ನು ಕಸಿದು ತಮ್ಮ ಪುಸ್ತಕದಲ್ಲಿ ಪ್ರಕಟಿಸಿದ್ದಾರೆ. ಇದನ್ನು ಕೃತಿಚೌರ್ಯ ಎನ್ನುತ್ತಾರೆ. ಈ ರೀತಿ ಬೇರೆ ಪುಸ್ತಕಗಳಿಂದ ಕಾಪಿ ಮಾಡುವ ಅಧಿಕಾರ ಇಲ್ಲದಿದ್ದರೂ ಉಲ್ಲಂಘಿಸಿದ್ದು, ಇಂತಹ ಕೆಲಸ ಮಾಡುವವರಿಗೆ ಹಂಪಿ ವಿವಿ ಸಂಬಳ ನೀಡುತ್ತಿತ್ತೇನೋ ಎಂದು ವ್ಯಂಗ್ಯವಾಡಿದರು.

ರಾಷ್ಟ್ರಕವಿ ಕುವೆಂಪು ಅವರು ಸಾಹಿತಿಗಳಿಗೆ ಹಾಗೂ ಆತ್ಮೀಯರೊಂದಿಗೆ ತಮ್ಮ ಭಾವನೆ, ಅಭಿರುಚಿ ಹಂಚಿಕೊಂಡು ಬರೆದಿರುವ 76 ಪತ್ರಗಳನ್ನು ಕ್ರೋಡಿಕರಿಸಿ ಪ್ರಕಟಿಸಿದ್ದ ಪುಸ್ತಕವನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯ ನನ್ನ ಅನುಮತಿ ಇಲ್ಲದೇ ಪ್ರಕಟಿಸಿರುವುದರ ವಿರುದ್ಧ ನ್ಯಾಯಾಲಯಕ್ಕೆ ಹೋಗಿದ್ದು, ತೀರ್ಪು ನಮ್ಮಪರವಾಗಿದೆ ಎಂದು ಸಂತಸ ವ್ಯಕ್ತಪಡಿಸಿದರು.

5 ವರ್ಷ ಕಾನೂನು ಹೋರಾಟದಲ್ಲಿ ಕೋಲಾರದವರೆ ಆದ ಹೈಕೋರ್ಟ್​ ವಕೀಲ ಎಂ .ಶಿವಪ್ರಕಾಶ್​ ವಾದ ಮಂಡಿಸಿದರು. ನ್ಯಾಯಾಲಯವು ಅಂತಿಮ ತೀರ್ಪು ನೀಡಿದೆ. ಸಾಕ್ಷಧಾರಗಳನ್ನು ಪರಿಶೀಲಿಸಿದ ನ್ಯಾಯಾಲಯವು ಕುವೆಂಪು ಬರೆದಿರುವ ಪತ್ರಗಳನ್ನು ಸಂಗ್ರಹಿಸಿರುವುದು ಪುಸ್ತಕ ಮನೆ ಹರಿಹರ ಪ್ರಿಯರು. ಅವರಿಂದ ಹಂಪಿ ವಿವಿ ಕಾಪಿ ಮಾಡಿರುವುದು ಕಾಪಿರೈಟ್​ ಕಾಯ್ದೆ ಉಲ್ಲಂಘನೆಯಾಗಿದೆ ಎಂದು ಸ್ಪಷ್ಟಪಡಿಸಿದೆ ಎಂದರು.

ಮಾಲೂರು ಹೊರವಲಯದಲ್ಲಿ ಕರ್ನಾಟಕ ಹೌಸಿಂಗ್​ ಬೋರ್ಡ್​ನವರು ನೀಡಿರುವ ಮನೆಯಲ್ಲಿದ್ದೇನೆ. ಇದರ ಪಕ್ಕದಲ್ಲಿಯೇ ಒಂದು ಶೆಡ್​ ನಿರ್ಮಿಸಿ ಪುಸ್ತಕದ ಮನೆಯನ್ನಾಗಿ ಪರಿವರ್ತಿಸಿಕೊಂಡಿದ್ದು, ಪುಸ್ತಕಗಳ ಸಂರಕ್ಷಣೆ ಒಂದು ಸವಾಲಾಗಿದೆ. ಸೌಲಭ್ಯಗಳ ಕೊರತೆಗಳ ನಡುವೆಯೂ ಪುಸ್ತಕಗಳನ್ನು ಸಂರಕ್ಷಿಸಿಕೊಂಡು ಬಂದಿದ್ದು, ಈ ಬಗ್ಗೆ ಜಿಗುಪ್ಸೆ ಹೊಂದಿ ಪುಸ್ತಕಗಳನ್ನು ಸುಟ್ಟು ಹಾಕಲು ಹಾಗೂ ನಾನೇ ಆತ್ಮಹತ್ಯೆ ಮಾಡಿಕೊಳ್ಳಲು ಚಿಂತಿಸಿದ್ದೆ ಎಂದರು.

ಸ್ವಂತ ಸೂರೂ ಇಲ್ಲ

ಜೀವನದಲ್ಲಿ ಸ್ವಯಂ ಸಂಪಾನೆಯಿಂದ ಮಾಡಿರುವ ಆಸ್ತಿ ಪುಸ್ತಕ ಮನೆಯಾಗಿದೆ ಹೊರತು ನನಗೆ ಒಂದು ಸ್ವಂತ ಸೂರು ಸಹ ಇಲ್ಲ. ನಾನಿರುವುದು ನನ್ನ ಮಗಳ ಮನೆಯಾಗಿದೆ. ನಮ್ಮ ಪೂರ್ವಿಕರು ಇದೇ ತಾಲೂಕಿನ ಹೊಳಲಿ ಗ್ರಾಮದವರು. ಈಗ ಮಾಲೂರಿನಲ್ಲಿ ವಾಸವಾಗಿದ್ದಾರೆ. ಕಳೆದ 60 ವರ್ಷದ ಶ್ರಮದಿಂದ ಸುಮಾರು 5 ಲಕ್ಷ ಪುಸ್ತಕಗಳನ್ನು ಸಂಗ್ರಹಿಸಿರುವೆ ಎಂದು ತಿಳಿಸಿದರು.

ಆರ್​.ಎಲ್​.ಜಾಲಪ್ಪ ಮಂಡಳಿ ಕಾಳಜಿ

ಆರ್​.ಎಲ್​.ಜಾಲಪ್ಪ ಆಡಳಿತ ಮಂಡಳಿಯು ನಮ್ಮ ಪುಸ್ತಕ ಮನೆಗೆ ಆಗಮಿಸಿ ಆರ್ಥಿಕವಾಗಿ 1 ಲಕ್ಷ ರೂ. ಚೆಕ್​ ನೀಡಿ ನಿಮ್ಮನ್ನು ಸಂಸ್ಥೆ ದತ್ತು ಪಡೆದಿದೆ ಎಂದಿದೆ. ಆರೋಗ್ಯದ ಸಮಸ್ಯೆಗಳನ್ನು ಪರಿಹರಿಸಿ ಸೂಕ್ತವಾದ ಚಿಕಿತ್ಸೆ, ಔಷಧ, ಪರಿಕರಗಳು ಸೇರಿ ಎಲ್ಲ ರೀತಿಯ ಸೌಲಭ್ಯವನ್ನು ಕಲ್ಪಿಸುತ್ತಿದೆ. ಆದರೆ ಇದೇ ರೀತಿ ಕಾಳಜಿ ಸರ್ಕಾರಕ್ಕೆ ಯಾಕಿಲ್ಲ ಎಂದು ಪ್ರಶ್ನಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net