ಕಸಾಪ ಅಧ್ಯಕ್ಷರ ನಡೆಗೆ ಅಸಮಾಧಾನ

Kannada ratha
Published on

ಸಿದ್ದಾಪುರ: ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಭುವನಗಿರಿಯಲ್ಲಿ ಭಾನುವಾರ ಜರುಗಿದ ಕನ್ನಡ ಜ್ಯೋತಿ ರಥ ಉದ್ಘಾಟನಾ ಸಭಾಕಾರ್ಯಕ್ರಮದ ವೇದಿಕೆಯಲ್ಲಿ ಜಿಲ್ಲೆಯ ಪ್ರಸಿದ್ಧ ಸಾಹಿತಿಗಳು ಹಾಗೂ ಕಲಾವಿದರ ಉಪಸ್ಥಿತಿ ಇಲ್ಲದಿರುವ ಕುರಿತು ಚರ್ಚೆಗೆ ಗ್ರಾಸವಾಗಿದೆ.

ತಹಸೀಲ್ದಾರ್ ಕಚೇರಿಯಲ್ಲಿ ಕಸಾಪ ಅಧ್ಯಕ್ಷ ಮಹೇಶ ಜೋಶಿ ಅವರು ನಡೆಸಿದ್ದ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗಿತ್ತು. ಆಮಂತ್ರಣ ಪತ್ರಿಕೆಯಲ್ಲಿ ಕೇವಲ ಜನಪ್ರತಿನಿಧಿಗಳ ಹಾಗೂ ಅಧಿಕಾರಿಗಳ ಹೆಸರಿದ್ದು, ಯಾವುದೇ ಸಾಹಿತಿಗಳ ಹಾಗೂ ಕಲಾವಿದರ ಹೆಸರು ಇಲ್ಲವಲ್ಲ ಎಂದು ಪತ್ರಕರ್ತರು ಪ್ರಶ್ನಿಸಿದ್ದರು. ‘ಖುದ್ದಾಗಿ ಸಾಹಿತಿಗಳು, ಕಲಾವಿದರನ್ನು ಆಮಂತ್ರಿಸುತ್ತೇನೆ. ಶಿಷ್ಟಾಚಾರದಂತೆ ಆಮಂತ್ರಣ ಪತ್ರಿಕೆ ಮುದ್ರಿಸಲಾಗಿದೆ’ ಎಂದು ಹೇಳಿದ್ದರು.

ಆದರೆ, ಭಾನುವಾರ ಕಾರ್ಯಕ್ರಮದಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಕಸಾಪ ವಿವಿಧ ಜಿಲ್ಲೆಯ ಪದಾಧಿಕಾರಿಗಳು ಮಾತ್ರ ವೇದಿಕೆಯಲ್ಲಿದ್ದರು.

ಇದಕ್ಕೂ ಸುಮ್ಮನಾಗಿದ್ದ ಜನ, ಸಭಾ ಕಾರ್ಯಕ್ರಮದ ಆರಂಭದಲ್ಲಿ ನಾಡಗೀತೆಗೆ ಪುಟಾಣಿ ಕಲಾವಿದೆ ಮಾಡುತ್ತಿದ್ದ ಯಕ್ಷಗಾನ ನೃತ್ಯವನ್ನು ಜೋಶಿ ಸೂಚನೆಯ ಮೇರೆಗೆ ಅರ್ಧಕ್ಕೆ ಮೊಟಕುಗೊಳಿಸಿದ್ದು, ನೆರೆದವರಲ್ಲಿ ಮತ್ತಷ್ಟು ಬೇಸರ ಮೂಡಿಸಿತು. ಕೆಲವರು ಖಂಡಿಸುವುದಕ್ಕೆ ಮುಂದಾಗಿದ್ದರು. ಆದರೆ, ಇದು ನಮ್ಮ ಕನ್ನಡದ ಕಾರ್ಯಕ್ರಮ ಎಂದು ಸುಮ್ಮನಿದ್ದರು.

ಭಾಷಣದಲ್ಲಿ ಮಹೇಶ ಜೋಶಿ ಅವರು, ಸಿದ್ದಾಪುರ ತಾಲೂಕು ಕನ್ನಡ ನಾಡಿನ ಸಂಸ್ಕೃತಿ ಉಳಿಸಿಕೊಳ್ಳುವುದರ ಜತೆಗೆ ಅಚ್ಚ ಕನ್ನಡ ಮಾತನಾಡುವ ಕನ್ನಡಿಗರಿದ್ದಾರೆ. ಕಾರಣ ತಾಲೂಕನ್ನು ಕರ್ನಾಟಕದ ಪ್ರತಿನಿಧಿ ಎಂದರೆ ತಪ್ಪಾಗಲಾರದು ಎಂದು ಹೇಳಿದ್ದರು. ವೇದಿಕೆಯ ಮೇಲೆ ಹೇಳುವುದು ಒಂದು ಮಾಡುವುದು ಒಂದು ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net