

ವಿಜಯವಾಣಿ ಸುದ್ದಿಜಾಲ ಧಾರವಾಡ
ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಮತ್ತು ಶಿವಲೀಲಾ ಕುಲಕರ್ಣಿ ಅವರ ಏಳಿಗೆ ಸಹಿಸದ ಬಿಜೆಪಿಯವರು ವೃಥಾ ಆರೋಪ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಸದಸ್ಯ ಶಿವಶಂಕರ ಹಂಪಣ್ಣವರ ಹೇಳಿದ್ದಾರೆ.
ಪ್ರಕಟಣೆ ನೀಡಿರುವ ಅವರು, ಕಾಂಗ್ರೆಸ್ ಮುಖಂಡರ ಬೆಳವಣಿಗೆಯಿಂದ ಕೆಲವರು ಹೊಟ್ಟೆಕಿಚ್ಚು ಪಡುತ್ತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹಗಲಿರುಳು ಸಂಚರಿಸಿ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಲಕರ್ಣಿ ಅವರ ಗೆಲುವಿನಲ್ಲಿ ಶಿವಲೀಲಾ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ನಂತರ ಶಾಸಕರ ಅನುಪಸ್ಥಿತಿಯಲ್ಲಿ ಕ್ಷೇತ್ರದ ಜನರ ಕಷ್ಟಗಳಿಗೆ ಸ್ಪಂದಿಸುತ್ತಿದ್ದಾರೆ. ಅನೇಕ ಅಭಿವೃದ್ಧಿ ಕಾರ್ಯಗಳನ್ನು ಅನುಷ್ಠಾನಗೊಳಿಸಲು ಶ್ರಮಿಸುತ್ತಿದ್ದಾರೆ. ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಸಂದರ್ಭದಲ್ಲಿ ಪಕ್ಷದ ಹಿರಿಯ ಮುಖಂಡರನ್ನು ಆಮಂತ್ರಿಸುವುದು ವಾಡಿಕೆ. ಇದು ಎಲ್ಲ ಪಕ್ಷಗಳ ಶಾಸಕರು ಇದ್ದಾಗಲೂ ನಡೆದು ಬಂದಿದೆ.
ಕಾಮಗಾರಿಗೆ ಚಾಲನೆ ನೀಡುವ ಸಂದರ್ಭದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಅಭಿಮಾನದಿಂದ ಶಿವಲೀಲಾ ಅವರನ್ನು ಆಮಂತ್ರಿಸಿದ್ದಾರೆ. ಅವರು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಇದನ್ನು ಮುಂದಿm್ಟಕೊ0ಡು ಬಿಜೆಪಿಯವರು ಶಿಷ್ಟಾಚಾರ ಉಲ್ಲಂಘನೆ ಎಂದು ಆರೋಪ ಮಾಡುವುದು, ಪ್ರತಿಭಟಿಸುತ್ತಿರುವುದು ಅವರ ಅಸಹಾಯಕತೆಗೆ ನಿದರ್ಶನ. ಈ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಅಡ್ಡಿಪಡಿಸುವ ಮೂಲಕ ಕೀಳುಮಟ್ಟದ ರಾಜಕಾರಣ ಮಾಡುತ್ತಿದ್ದಾರೆ. ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯ ದೃಷ್ಟಿಯಿಂದ ಅಗ್ಗದ ಪ್ರಚಾರ ಪಡೆಯುತ್ತಿದ್ದಾರೆ. ಬಿಜೆಪಿಯವರು ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸಬೇಕು ಎಂದು ಹಂಪಣ್ಣವರ ಹೇಳಿದ್ದಾರೆ.