ಮೂರು ತಿಂಗಳಾದರೂ ಮುಗಿಯದ ಕಾಮಗಾರಿ

7 lxr 2
Published on

ಲಕ್ಷ್ಮೇಶ್ವರ: ಕೈಗಾ-ಇಳಕಲ್ ರಾಜ್ಯ ಹೆದ್ದಾರಿಯ ಪಟ್ಟಣದಿಂದ ಅಗಡಿ ಸನ್​ರೈಸ್ ಆಸ್ಪತ್ರೆವರೆಗಿನ 3.5 ಕಿ.ಮೀ ರಸ್ತೆ ದುರಸ್ತಿಗೆ ಮೇಲ್ಪದರ ಅಗೆದು 3 ತಿಂಗಳಾದರೂ ಕಾಮಗಾರಿ ಪ್ರಾರಂಭಿಸಿಲ್ಲ. ನಿತ್ಯ ವಾಹನ ಸಂಚಾರದಿಂದ ಏಳುವ ಧೂಳಿನ ಗೋಳಿಗೆ ಜನ ಹೈರಾಣಾಗಿದ್ದಾರೆ.

ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ (ಕೆಆರ್​ಡಿಸಿಎಲ್) ದಿಂದ 23 ಕೋಟಿ ರೂ. ಅನುದಾನದಲ್ಲಿ ಮಂಗಸೂಳಿ-ಲಕ್ಷ್ಮೇಶ್ವರ ಮತ್ತು ಕೈಗಾ-ಇಳಕಲ್​ನ ಆಯ್ದ ಭಾಗದ ಅಂದಾಜು 10 ಕಿ.ಮೀ ರಸ್ತೆ ಅಭಿವೃದ್ಧಿ ಮಾಡುವುದಾಗಿದೆ. ಇದರಲ್ಲಿ ಈಗಾಗಲೇ ಹುಬ್ಬಳ್ಳಿಯಿಂದ ಲಕ್ಷ್ಮೇಶ್ವರವರೆಗಿನ ಅಂದಾಜು 6.5 ಕಿ.ಮೀ ರಸ್ತೆಯನ್ನು ಅಲ್ಲಲ್ಲಿ ರೀ-ಸರ್ಪೆಸಿಂಗ್ ಮಾಡಲಾಗಿದೆ. ಆದರೆ, ಲಕ್ಷ್ಮೇಶ್ವರದಿಂದ ಅಗಡಿ ಸನ್​ರೈಸ್ ಆಸ್ಪತ್ರೆವರೆಗಿನ ರಾಜ್ಯ ಹೆದ್ದಾರಿ ಸಂಪೂರ್ಣ ಹಾಳಾಗಿದ್ದರಿಂದ ರೀಸರ್ಪೆಸಿಂಗ್ ಬದಲಾಗಿ ರೀ-ಕನ್ಸ್​ಟ್ರಕ್ಷನ್ ಮಾಡುವ ಉದ್ದೇಶದಿಂದ ಮೂರು ತಿಂಗಳ ಹಿಂದೆಯೇ ಅಲ್ಲಲ್ಲಿ ರಸ್ತೆ ಮೇಲ್ಪದರ ತೆಗೆದು ಜಿಎಸ್​ಪಿ ಹಾಕಿ ಕೈ ಬಿಡಲಾಗಿದೆ. ನಿತ್ಯ ರಸ್ತೆ ಧೂಳಿನಿಂದ ಕೂಡಿದೆ. ಈ ಮಾರ್ಗವಾಗಿ ಸಂಚರಿಸುವ ನಾಗರಿಕರು, ಅಗಡಿ ಇಂಜಿನಿಯರಿಂಗ್ ಕಾಲೇಜಿನ ಸಾವಿರಾರು ವಿದ್ಯಾರ್ಥಿಗಳು, ಆಸ್ಪತ್ರೆಗೆ ಬರುವ ರೋಗಿಗಳು, ಮುರಾರ್ಜಿ ಶಾಲೆ ವಿದ್ಯಾರ್ಥಿಗಳು ಧೂಳಿನ ಮಜ್ಜನದಿಂದ ಬೇಸತ್ತಿದ್ದಾರೆ. ಮಳೆಯೂ ಇಲ್ಲ ಧೂಳು ನಿಯಂತ್ರಣಕ್ಕಾಗಿ ನೀರನ್ನೂ ಹಾಕುವುದಿಲ್ಲ. ಪ್ರಯಾಣಿಕರು ಲಾರಿ, ಟಿಪ್ಪರ್, ಬಸ್​ಗಳು ಎಬ್ಬಿಸುವ ಧೂಳಿನಲ್ಲಿ ಸಿಕ್ಕು ನರಕಯಾತನೆ ಅನುಭವಿಸುತ್ತಿದ್ದಾರೆ.

ಲಕ್ಷ್ಮೇಶ್ವರದಿಂದ ಅಗಡಿ ಸನ್​ರೈಸ್ ಆಸ್ಪತ್ರೆವರೆಗಿನ ರಸ್ತೆಯನ್ನು ಅಗೆದಿರುವುದರಿಂದ ವಿದ್ಯಾರ್ಥಿಗಳು, ರೋಗಿಗಳು, ಸಾರ್ವಜನಿಕರು, ಹಾಗೂ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ. ರಸ್ತೆ ಅಕ್ಕ-ಪಕ್ಕದ ಜಮೀನಲ್ಲಿನ ಬೆಳೆಗಳು ಧೂಳಿನಿಂದಾವೃತವಾಗಿದೆ. ಸಂಬಂಧಪಟ್ಟ ಕೆಆರ್​ಡಿಸಿಎಲ್​ನ ಅಧಿಕಾರಿಗಳು ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ಆದೇಶ ಮಾಡಬೇಕು. ಯಾವುದೇ ಕಾರಣ ಹೇಳದೇ ವಾರದೊಳಗೆ ಕಾಮಗಾರಿ ಪ್ರಾರಂಭಿಸಬೇಕು. ಇಲ್ಲದಿದ್ದರೆ ಕಾಲೇಜ್​ನ ವಿದ್ಯಾರ್ಥಿಗಳು, ರೋಗಿಗಳು ಹಾಗೂ ಈ ಭಾಗದ ರೈತರು, ಸಾರ್ವಜನಿಕರೊಡಗೂಡಿ ರಾಜ್ಯ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆಗಿಳಿಯಬೇಕಾಗುತ್ತದೆ. | ಪದ್ಮರಾಜ ಪಾಟೀಲ- ಗ್ರಾಪಂ ಸದಸ್ಯ

ಕಾರಣಾಂತರದಿಂದ ರಸ್ತೆ ಕಾಮಗಾರಿ ವಿಳಂಭವಾಗಿದೆ. ಧೂಳು ನಿಯಂತ್ರಣಕ್ಕಾಗಿ ನೀರು ಸಿಂಪಡಿಸಲು ಮತ್ತು ಬಾಕಿ ಉಳಿದಿರುವ 3.5 ಕಿ.ಮೀ ರಸ್ತೆ ಕಾಮಗಾರಿ ಪ್ರಾರಂಭಿಸುವಂತೆ ಗುತ್ತಿಗೆದಾರರಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಲಾಗುವುದು. | ಮಂಜುನಾಥ ದೈವಜ್ಞ ಕೆಆರ್​ಡಿಸಿಎಲ್ ಸಹಾಯಕ ಇಂಜಿನಿಯರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net