

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಹೊಸ ಪಡಿತರ ಚೀಟಿ ವಿತರಣೆ ಜತೆಗೆ ಅನರ್ಹ ಕಾರ್ಡುಗಳ ಪತ್ತೆ ಕಾರ್ಯವೂ ನಿರಂತರವಾಗಿದೆ. ವಿವಿಧ ಕಾರಣಗಳಿಂದ 8,313 ಕಾರ್ಡುಗಳು ಅನರ್ಹ ಎಂಬುದನ್ನು ಕುಟುಂಬ ತಂತ್ರಾಂಶದಲ್ಲಿ ಈಗಾಗಲೇ ನಮೂದಿಸಲಾಗಿದೆ.
ಇದರ ನಡುವೆ ಆಕ್ಷೇಪಣೆಗಳ ಸ್ವೀಕಾರ, ದಾಖಲೆಗಳ ಪರಿಶೀಲನೆ ಬಳಿಕ ರದ್ದು ಇಲ್ಲವೇ ಪರಿವರ್ತನೆಯ ತೀರ್ಮಾನ ಕೈಗೊಳ್ಳಲಾಗಿದೆ. ಅರ್ಹರಿಗೆ ಮಾಹಿತಿ ಸಂಗ್ರಹಿಸಿ, ಕಾರ್ಡನ್ನು ಮತ್ತೆ ಕೊಡಲಾಗುತ್ತಿದೆ. ಜಿಲ್ಲೆಯಲ್ಲಿ 28,185 ಅಂತ್ಯೋದಯದ ಕುಟುಂಬಗಳಲ್ಲಿ (ಎಎವೈ) 1,18,172 ಲಾನುಭವಿಗಳು, 2,81,552 ಆದ್ಯತಾ ವಲಯ ಕುಟುಂಬಗಳಲ್ಲಿ (ಪಿಎಚ್‌ಎಸ್) 9,11,424 ಲಾನುಭವಿಗಳ ಕುಟುಂಬಗಳು ಸೇರಿ 3,09,737 ಕುಟುಂಬದ ಪಡಿತರ ಚೀಟಿಗಳಡಿ 10,29,596 ಲಾನುಭವಿಗಳು ಇದ್ದಾರೆ. ಜಿಲ್ಲೆಯಲ್ಲಿ ಹೊಸ ಪಡಿತರ ಚೀಟಿಗಾಗಿ 4,073 ಅರ್ಜಿಗಳನ್ನು ಸ್ವೀಕರಿಸಿದ್ದು, ಈ ಪೈಕಿ 243 ತಿರಸ್ಕೃತಗೊಂಡಿವೆ. 3,143 ಕಾರ್ಡುಗಳನ್ನು ವಿತರಿಸಿದ್ದು, 687 ಅರ್ಜಿಗಳು ಪರಿಶೀಲನೆಯ ಹಂತದಲ್ಲಿವೆ.
ನಿರಂತರ ಕಾರ್ಯಾಚರಣೆ ಮತ್ತು ಬಿಗಿ ಕ್ರಮದ ಜತೆಗೆ ಲೋಡ್ ಶೆಡ್ಡಿಂಗ್, ಸರ್ವರ್ ಸಮಸ್ಯೆ ಹಿನ್ನೆಲೆಯಲ್ಲಿ ಹೊಸ ಕಾರ್ಡು ಪಡೆಯಲು ಅರ್ಹರು ಪರದಾಡುವಂತಾಗಿದೆ. ಹೌದು! ಆನ್‌ಲೈನ್‌ನಲ್ಲಿ ಅರ್ಜಿ ಭರ್ತಿಗೆ ದುಬಾರಿ ಶುಲ್ಕ, ಪರಿಶೀಲನೆಯ ನೆಪದಲ್ಲಿ ಕಿರುಕುಳ, ತಿಂಗಳಾನುಗಟ್ಟಲೇ ಅರ್ಜಿಗಳ ಇತ್ಯರ್ಥ, ಆಗಾಗ ತಾಂತ್ರಿಕ ಸಮಸ್ಯೆ ನೆಪದಲ್ಲಿ ಮತ್ತೆ ದಾಖಲೆಗಳ ಸಲ್ಲಿಕೆ, ನ್ಯಾಯಬೆಲೆ ಅಂಗಡಿಗಳಲ್ಲಿ ಸತಾಯಿಸುವಿಕೆ ಸೇರಿ ನಾನಾ ಸಮಸ್ಯೆಗಳು ಇತ್ತೀಚೆಗೆ ಮತ್ತಷ್ಟು ಹೆಚ್ಚಾಗಿವೆ.
7452 ರದ್ದು
ಜಿಲ್ಲೆಯಲ್ಲಿ 6 ತಿಂಗಳಿಂದಲೂ ಪಡಿತರ ಆಹಾರ ಧಾನ್ಯ ಪಡೆಯದ 7,452 ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದೆ. ಹಾಗೆಯೇ, ಕುಟುಂಬದ ತಂತ್ರಾಂಶದಲ್ಲಿ 8,313 ಅನರ್ಹ ಪಡಿತರ ಚೀಟಿಗಳನ್ನು ಗುರುತಿಸಿದ್ದು, ತೆರಿಗೆ ಪಾವತಿ ಮತ್ತು ಕುಟುಂಬದ ವಾರ್ಷಿಕ 1.20 ಲಕ್ಷ ರೂ. ಹೆಚ್ಚಾಗಿರುವುದನ್ನು ಪರಿಗಣಿಸಿ, ನಿಯಮಾನುಸಾರ ಕ್ರಮ ಕೈಗೊಳ್ಳಲಾಗಿದೆ. 2,170 ಪಡಿತರ ಚೀಟಿಗಳನ್ನು ಆದ್ಯತೇತರ (ಎಪಿಎಲ್) ಪಡಿತರ ಚೀಟಿಗಳನ್ನಾಗಿ ಪರಿವರ್ತಿಸಲಾಗಿದೆ. ಇದರ ನಡುವೆ ಅರ್ಹರನ್ನು ಕೈ ಬಿಡಲಾಗಿದೆ ಎಂಬ ವ್ಯಾಪಕ ಆಕ್ರೋಶದ ಹಿನ್ನೆಲೆಯಲ್ಲಿ ಸರ್ಕಾರವು ನ.27ರ ಆದೇಶದಲ್ಲಿ ಮರು ಪರಿಶೀಲನೆಗೆ ಆದೇಶಿಸಿದ್ದು, ಇದರಿಂದ ಮತ್ತೆ ಸರ್ವೇ ಕೈಗೊಂಡು 471 ಪಡಿತರ ಚೀಟಿಗಳನ್ನು ಆದ್ಯತಾ ಕಾರ್ಡುಗಳನ್ನಾಗಿ ಪರಿವರ್ತಿಸಲಾಗಿದೆ. 1,699 ಪಡಿತರ ಚೀಟಿಗಳ ಪರಿಶೀಲನೆ ಬಾಕಿ ಇದೆ.
ವೈಜ್ಞಾನಿಕ ಸರ್ವೇ ಸೂಕ್ತ
2011ರ ಗಣತಿ ಪ್ರಕಾರ ಜಿಲ್ಲೆಯು 12,55,104 ಜನಸಂಖ್ಯೆ ಹೊಂದಿದ್ದು, ಈ ಪೈಕಿ 10,29,596 ಪಡಿತರ ಚೀಟಿ ಲಾನುಭವಿಗಳು. ಇದರನ್ವಯ ಈ ಭಾಗದಲ್ಲಿ ಬಡವರ ಸಂಖ್ಯೆ ಹೆಚ್ಚಾಗಿದೆ ಎನ್ನುವುದು ತಿಳಿದು ಬರುತ್ತದೆ. ಆದರೆ, ವಾಸ್ತವವಾಗಿ ಅನರ್ಹರು ಸುಳ್ಳು ದಾಖಲೆಗಳನ್ನು ನೀಡಿ, ಸರ್ಕಾರಿ ಸೌಲಭ್ಯ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಇದರ ವಿರುದ್ಧ ಕ್ರಮ ಕೈಗೊಳ್ಳಲು ಪ್ರಭಾವಿಗಳ ಒತ್ತಡ ಅಡ್ಡಿಯಾಗಿದೆ. ಇದರಿಂದ ಬಡ ಮತ್ತು ಮಧ್ಯಮ ವರ್ಗದ ಜನರ ಕಾರ್ಡುಗಳನ್ನು ಪರಿಶೀಲನೆಯ ನೆಪದಲ್ಲಿ ರದ್ದುಪಡಿಸುತ್ತಿದ್ದು, ತಿಂಗಳಾನುಗಟ್ಟಲೇ ಕಚೇರಿಗೆ ಅಲೆಯುವಂತಾಗಿದೆ. ಇದರಿಂದ ವೈಜ್ಞಾನಿಕ ಸರ್ವೇ ಮೂಲಕ ಪ್ರಾಮಾಣಿಕವಾಗಿ ಅರ್ಹರು ಮತ್ತು ಅನರ್ಹರ ಪತ್ತೆ ಕೆಲಸವಾಗಬೇಕು. ಇದರಲ್ಲಿ ಯಾವುದೇ ಕಾರಣಕ್ಕೂ ಹಸ್ತಕ್ಷೇಪ, ಪ್ರಭಾವಿಗಳ ಒತ್ತಡ, ಸುಳ್ಳು ಮಾಹಿತಿ ಮತ್ತು ಹೊಂದಾಣಿಕೆಗೆ ಅವಕಾಶ ನೀಡಬಾರದು ಎನ್ನುವುದು ಪ್ರಜ್ಞಾವಂತರ ಒತ್ತಾಯವಾಗಿದೆ.