

ಚಿಕ್ಕಬಳ್ಳಾಪುರ: ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಕಾರ್ಯದರ್ಶಿಗಳು, ಗ್ರಾ.ಪಂ.ಸದಸ್ಯರು ಸೇರಿದಂತೆ ವಿವಿಧ ಒಕ್ಕೂಟಗಳ ಮುಷ್ಕರಕ್ಕೆ ಸಾರ್ವಜನಿಕರು ಪರದಾಡುವಂತಾಯಿತು.
ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗ್ರಾ.ಪಂ.ಆಡಳಿತ ಯಂತ್ರಾಂಗ ಬೀದಿಗೆ ಬಂದಿದೆ.
ರಾಜ್ಯಾದ್ಯಂತ ಕಳೆದ ಅ.4 ರಿಂದ ನಡೆಸುತ್ತಿದ್ದ ಮುಷ್ಕರವನ್ನು ಜಿಲ್ಲಾ ಮಟ್ಟಕ್ಕೆ ವರ್ಗಾಯಿಸಲಾಯಿತು. ಜಿಲ್ಲಾಡಳಿತ ಭವನದ ಮುಂಭಾಗ ಕುಳಿತು ಹೋರಾಟ ನಡೆಸುತ್ತಿದ್ದು ಸ್ಥಳೀಯ ಅಧಿಕಾರಿಗಳ ಮನವೊಲಿಕೆಗೆ ಬಗ್ಗಲಿಲ್ಲ. ಸರ್ಕಾರವೇ ಮಾತುಕತೆ ನಡೆಸಿ, ತ್ವರಿತವಾಗಿ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಲಾಯಿತು.
*ಗ್ರಾ.ಪಂ.ಹಂತದಲ್ಲಿ ಪರದಾಟ*
ಕಚೇರಿಯಿಂದ ದೂರ ಉಳಿದು ಪ್ರತಿಭಟನೆಯಲ್ಲಿ ತೊಡಗಿರುವುದರಿಂದ ಕಚೇರಿಗಳಲ್ಲಿ ಕೆಲಸ ನಡೆಯುತ್ತಿಲ್ಲ. ಜನರ ಕೆಲಸ ಕಾರ್ಯಗಳು ಆಗುತ್ತಿಲ್ಲ. ಒಂದೆಡೆ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಳ್ಳುತ್ತಿದ್ದರೆ ಇನ್ನೊಂಡೆ ಕನಿಷ್ಠ ಮೂಲ ಸೌಲಭ್ಯಗಳನ್ನು ಪಡೆದುಕೊಳ್ಳಲು ಜನ ಪರದಾಡುತ್ತಿದ್ದಾರೆ.
ಸರ್ಕಾರ ಕೂಡಲೇ ಬೇಡಿಕೆಗಳನ್ನು ಈಡೇರಿಸದಿದ್ದರೆ ಪಂಚಾಯಿತಿಯ ಇತರೆ ನೌಕರರು ಕೂಡ ಮುಷ್ಕರಕ್ಕೆ ಇಳಿಯುವುದಾಗಿ ಬೆದರಿಕೆ ಹಾಕಿದ್ದಾರೆ. ಆದ್ದರಿಂದ ದಸರಾ ಹಬ್ಬದ ಸ್ವಚ್ಛತೆ, ಕುಡಿಯುವ ನೀರಿನ ಸೌಲಭ್ಯಗಳಿಗೂ ಕೂಡ ಕೊಕ್ಕೆ ಬೀಳಬಹುದು ಎಂಬ ಆತಂಕವನ್ನು ಸಾರ್ವಜನಿಕರು ಎದುರಿಸುತ್ತಿದ್ದಾರೆ