

ಮಡಿಕೇರಿ:
ಕೊಡಗು ಜಿಲ್ಲಾಧಿಕಾರಿ ಕಚೇರಿ ತಡೆಗೋಡೆಯ ಸ್ಥಿತಿ ಈ ಮಳೆಗಾಲದಲ್ಲೂ ಆತಂಕಕಾರಿಯಾಗಿಯೇ ಮುಂದುವರಿಯಲಿದೆ. ವಿಧಾನಸಭೆ ಅರ್ಜಿಗಳ ಸಮಿತಿ ಈಗಾಗಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬದಲಿ ಕಾಮಗಾರಿ ಬಗ್ಗೆ ೧೫ ದಿನಗಳ ಒಳಗೆ ವರದಿ ನೀಡುವಂತೆ ಆದೇಶಿಸಿದ್ದರೂ ಮುಂದಿನ ಚಟುವಟಿಕೆಗಳು ನಡೆಯುವ ಬಗ್ಗೆ ಅನುಮಾನಗಳಿವೆ. ಜೂನ್ ಮೊದಲ ವಾರದ ತನಕ ಚುನಾವಣಾ ಪ್ರಕ್ರಿಯೆಗಳು ಚಾಲ್ತಿಯಲ್ಲಿದ್ದು, ಬಹುತೇಕ ಅಧಿಕಾರಿಗಳು ಆ ಕರ್ತವ್ಯದಲ್ಲೇ ಇರುತ್ತಾರೆ. ಫಲಿತಾಂಶ ಪ್ರಕಟವಾಗುವ ಸಮಯಕ್ಕೆ ಮಳೆಗಾಲ ಶುರುವಾಗುವುದರಿಂದ ತಡೆಗೋಡೆ ಕೆಲಸಗಳು ಎಷ್ಟರ ಮಟ್ಟಿಗೆ ನಡೆಯುತ್ತದೆ ಎನ್ನುವ ಪ್ರಶ್ನೆಗಳು ಸಾರ್ವಜನಿಕರನ್ನು ಕಾಡುತ್ತಿದೆ.
ಮಡಿಕೇರಿಯಲ್ಲಿರುವ ಕೊಡಗು ಜಿಲ್ಲಾಧಿಕಾರಿ ಕಚೇರಿ ಕಟ್ಟಡ ನಿರ್ಮಾಣಕ್ಕೆ ಖರ್ಚಾಗಿದ್ದು ೫ ಕೋಟಿ ರೂ. ಆದರೆ ಈ ಕಟ್ಟಡದ ರಕ್ಷಣೆಗೋಸ್ಕರ ರಾಷ್ಟ್ರೀಯ ಹೆದ್ದಾರಿ ೨೭೫ರ ಮಡಿಕೇರಿ - ಮಂಗಳೂರು ರಸ್ತೆ ಬದಿಯಲ್ಲಿ ನಿರ್ಮಿಸಿರುವ ತಡೆಗೋಡೆಯ ಒಟ್ಟು ವೆಚ್ಚ ೭.೫೩ ಕೋಟಿ ರೂ. ಜರ್ಮನ್ ತಂತ್ರಜ್ಞಾನದ ’ಆರ್.ಯು. ವಾಲ್’ ಯೋಜನೆಯಂತೆ ನಿರ್ಮಾಣವಾದ ಈ ತಡೆಗೋಡೆ ೬ ತಿಂಗಳು ಕೂಡ ಬಾಳಿಕೆ ಬಾರದಿರುವುದರಿಂದ ಕಾಮಗಾರಿಯ ಗುಣಮಟ್ಟದ ಬಗ್ಗೆಯೇ ಚರ್ಚೆ ನಡೆಯಲು ಕಾರಣವಾಗಿತ್ತು. ೨೦೧೯ರ ಮಳೆಗಾಲದ ಸಂದರ್ಭ ಜಿಲ್ಲಾಡಳಿತ ಭವನದ ಎದುರಿನ ಬರೆ ಕುಸಿದಿತ್ತು. ಇದರಿಂದ ಜಿಲ್ಲಾಧಿಕಾರಿ ಕಚೇರಿ ಕಟ್ಟಡಕ್ಕೆ ಮತ್ತಷ್ಟು ಹಾನಿ ಆಗದಿರಲಿ ಎನ್ನುವ ಕಾರಣಕ್ಕೆ ಸರ್ಕಾರ ಇಲ್ಲಿ ತಡೆಗೋಡೆ ನಿರ್ಮಾಣಕ್ಕೆ ಮುಂದಾಯಿತು.
೨೦೨೦ರಲ್ಲಿ ತಡೆಗೋಡೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಆಯಿತು. ೨೦೨೦ರ ನ.೨೨ ರಂದು ಈ ಕಾಮಗಾರಿ ಕಾರ್ಯಾದೇಶ ಗುತ್ತಿಗೆ ಪಡೆದ ಹೈದರಾಬಾದ್ ಮೂಲದ ಕಂಪೆನಿಗೆ ಕೊಟ್ಟು ೧೧ ತಿಂಗಳೊಳಗೆ ಕಾಮಗಾರಿ ಮುಕ್ತಾಯಗೊಳಿಸುವ ಗಡುವು ನೀಡಲಾಗಿತ್ತು. ಕೂಡಲೇ ತ್ವರಿತವಾಗಿ ಕಾಮಗಾರಿ ಆರಂಭವಾಗಿ ೨೦೨೨ರಲ್ಲಿ ಪ್ಯಾನಲ್‌ಗಳ ಅಳವಡಿಕೆ ಮಾಡಿ ಒಂದು ಹಂತಕ್ಕೆ ಪೂರ್ಣಗೊಳಿಸುವ ಪ್ರಯತ್ನ ಮಾಡಲಾಗಿತ್ತು. ವಾಹನ ನಿಲುಗಡೆಗೆ ಇಲ್ಲೊಂದು ಕಾಂಕ್ರಿಟ್ ರಸ್ತೆ ನಿರ್ಮಿಸುವ ಕೆಲಸ ಶುರು ಮಾಡಬೇಕು ಎನ್ನುವಷ್ಟರಲ್ಲಿ ೨೦೨೨ ಜುಲೈನಲ್ಲಿ ಜರ್ಮನ್ ತಂತ್ರಜ್ಞಾನದ ಕಾಮಗಾರಿಯ ಬಣ್ಣ ಬಯಲಾಗಿತ್ತು. ತಡೆಗೋಡೆಯ ಅಲ್ಲಲ್ಲಿ ಉಬ್ಬು ಕಾಣಿಸಿಕೊಂಡು, ಬಿರುಕುಗಳು ಮೂಡಿ ಆತಂಕಕ್ಕೆ ಕಾರಣವಾಗಿತ್ತು.
ತಡೆಗೋಡೆಯಲ್ಲಿನ ಈ ಬೆಳವಣಿಗೆಗೆ ಅವೈಜ್ಞಾನಿಕ ಮತ್ತು ಕಳಪೆ ಕಾಮಗಾರಿಯೇ ಕಾರಣ ಎನ್ನುವ ಮಾತುಗಳು ಕೇಳಿ ಬಂದಿದ್ದವು. ಈ ಬೆನ್ನಲ್ಲೇ ತಡೆಗೋಡೆಗೆ ಅಳವಡಿಸಿದ್ದ ಪ್ಯಾನಲ್‌ಗಳನ್ನು ತೆಗೆದು ಕಪ್ಪು ಟಾರ್ಪಲ್ ಹೊದಿಸಲಾಯಿತು. ಆದರೆ ಮಡಿಕೇರಿ ಮಳೆಯ ಅಬ್ಬರವನ್ನು ಈ ಟಾರ್ಪಲ್ ತಡೆದುಕೊಳ್ಳಲಿಲ್ಲ. ಇದರೊಳಗಿನಿಂದ ನೀರು ಸೋರಿಕೆಯಾಗಿ ಬರೆಯೊಳಗೆ ನುಗ್ಗಿ ತಡೆಗೋಡೆ ನಡುವಿನಿಂದ ಕೆಸರು ಮಿಶ್ರಿತ ನೀರು ಹೊರಬರಲಾರಂಭಿಸಿತ್ತು. ಮಡಿಕೇರಿಯಿಂದ ಮಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ ೨೭೫ ಈ ತಗೋಡೆಯ ತಳಭಾಗದಿಂದ ಹಾದುಹೋಗುತ್ತದೆ. ಪ್ರತಿನಿತ್ಯ ಇಲ್ಲಿ ಸಾವಿರಾರು ವಾಹನಗಳು ಓಡಾಡುತ್ತವೆ. ಹಾಗಾಗಿ ಅಂದಿನ ಮಳೆಗಾಲದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕೆಲ ದಿನಗಳ ಕಾಲ ಈ ಮಾರ್ಗದಲ್ಲಿ ವಾಹನ ಸಂಚಾರ ನಿಷೇಧಿಸಿ ಬದಲಿ ಮಾರ್ಗದ ವ್ಯವಸ್ಥೆ ಮಾಡಲಾಗಿತ್ತು.
ಈ ತಡೆಗೋಡೆ ನಿರ್ಮಾಣಕ್ಕೆ ಜರ್ಮನ್ ತಂತ್ರಜ್ಞಾನ ಬಳಸಲಾಗಿದೆ ಎನ್ನುವುದು ಅಧಿಕಾರಿಗಳ ಮಾತು. ಆದರೆ ಈ ತಂತ್ರಜ್ಞಾನ ಮಡಿಕೇರಿಯಂತಹ ಪ್ರದೇಶಕ್ಕೆ ಹೊಂದಿಕೊಳ್ಳುವ ಬಗ್ಗೆ, ಇಲ್ಲಿನ ಮಣ್ಣು, ಹವಾಮಾನದ ಕುರಿತು ಯಾವುದೇ ಪರೀಕ್ಷೆ ನಡೆಸದೇ ಇಷ್ಟು ದೊಡ್ಡ ಯೋಜನೆಗೆ ಏಕಾಏಕಿ ಹಣ ಹಾಕಿರುವ ಬಗ್ಗೆ ಸಾರ್ವಜನಿಕರಲ್ಲಿ ಅನುಮಾನಗಳಿವೆ. ತಡೆಗೋಡೆ ನಿರ್ಮಾಣ ಸಂದರ್ಭ ಮೆಷ್ ಅಳವಡಿಸಿ, ಭೂಮಿಯೊಳಕ್ಕೆ ಉದ್ದದ ಕಬ್ಬಿಣದ ರಾಡ್ ತುರುಕಿ, ಮಣ್ಣು ತುಂಬಿ, ಪ್ಯಾನಲ್‌ಗಳನ್ನು ಜೋಡಿಸಲಾಗಿದೆ. ಈ ಪ್ಯಾನಲ್‌ಗಳ ಮೂಲಕ ಮಳೆಯ ನೀರು ಮಣ್ಣಿನೊಳಗೆ ಸೇರಿದ ಪರಿಣಾಮ ಪ್ಯಾನಲ್‌ಗಳಲ್ಲಿ ಉಬ್ಬು, ಬಿರುಕು ಕಾಣಿಸಿಕೊಂಡು ಸಂಪೂರ್ಣ ತಡೆಗೋಡೆಯೇ ಕುಸಿಯುವ ಹಂತ ತಲುಪಿತ್ತು.
ಕಾಮಗಾರಿಯ ಗುಣಮಟ್ಟದ ಬಗ್ಗೆ ಚರ್ಚೆಗಳು ಆಗುತ್ತಿದ್ದಂತೆಯೇ ಸ್ಥಳೀಯ ಪ್ರಜ್ಞಾವಂತರು ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದಾರೆ. ವಿಧಾನಸಭೆಯ ಅರ್ಜಿ ಸಮಿತಿಗೂ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ವಿಧಾನಸಭೆಯ ಅರ್ಜಿ ಸಮಿತಿ ಕಳೆದ ವಾರ ಮಡಿಕೇರಿಗೆ ಆಗಮಿಸಿ ತಡೆಗೋಡೆಯನ್ನು ವೀಕ್ಷಣೆ ಮಾಡಿದ್ದಲ್ಲದೆ ಸಂಬಂಧಿಸಿದ ಅಧಿಕಾರಿಗಳ ಜತೆ ವಿಸ್ತತ ಚರ್ಚೆಯನ್ನೂ ನಡೆಸಿದೆ. ಇಂಡಿಯನ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿಯ ತಜ್ಞರು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು, ಇಂಜಿನಿಯರ್‌ಗಳು ಈ ಸಭೆಯಲ್ಲಿ ಪಾಲ್ಗೊಂಡು ತಡೆಗೋಡೆಯನ್ನು ಅಪಾಯದಿಂದ ಪಾರು ಮಾಡಲು, ಜಿಲ್ಲಾಧಿಕಾರಿ ಕಚೇರಿ ಕಟ್ಟಡ ಉಳಿಸಿಕೊಳ್ಳಲು ಹಲವು ಸಲಹೆ ಸೂಚನೆಗಳನ್ನು ನೀಡಿದ್ದರು.
ಅಧಿಕಾರಿಗಳು ಮತ್ತು ತಜ್ಞರ ಸಲಹೆಗಳನ್ನು ಆಲಿಸಿದ ವಿಧಾನಸಭೆ ಅರ್ಜಿ ಸಮಿತಿ ತಡೆಗೋಡೆಗೆ ಬದಲು ಪರ್ಯಾಯ ಪ್ರಸ್ತಾಪ ಕೊಡಬೇಕು. ತಡೆಗೋಡೆಗಾಗಿ ನಿರ್ಮಾಣವಾಗಿತ್ತಿರುವ ರಸ್ತೆ ಕಾಮಗಾರಿ ನಿಲ್ಲಿಸಬೇಕು. ತಡೆಗೋಡೆಯನ್ನು ಹಂತ ಹಂತವಾಗಿ ನಿರ್ಮಾಣ ಮಾಡುವ ಸಾಧ್ಯತೆ ಬಗ್ಗೆ ಕೂಲಂಕುಶ ಪರಿಶೀಲನೆ ನಡೆಸಬೇಕು ಎಂದು ಸೂಚಿಸಿದ್ದಲ್ಲದೆ ಈ ಬಗ್ಗೆ ಇನ್ನು ೧೫ ದಿನಗಳ ಒಳಗೆ ಸಂಪೂರ್ಣ ಯೋಜನಾ ವರದಿಯನ್ನು ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿತ್ತು. ಅಧಿಕಾರಿಗಳು ಕೊಡುವ ಈ ವರದಿಯನ್ನು ಅರ್ಜಿ ಸಮಿತಿ ಸಭೆಯಲ್ಲಿ ಚರ್ಚೆ ಮಾಡಿ ಮುಂದೆ ಏನು ಮಾಡಬೇಕು ಎನ್ನುವುದರ ಬಗ್ಗೆ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಮಾಹಿತಿ ಸಮಿತಿಯ ನೇತೃತ್ವ ವಹಿಸಿದ್ದ ಮಾಜಿ ಸಚಿವ ಎಸ್ ಸುರೇಶ್ ಕುಮಾರ್ ಮಾಹಿತಿ ನೀಡಿದ್ದರು.
ಅರ್ಜಿ ಸಮಿತಿ ತಡೆಗೋಡೆ ವೀಕ್ಷಿಸಿ ಮರಳಿದ ಬೆನ್ನಲ್ಲೇ ಲೋಕಸಭಾ ಚುನಾವಣೆ ಘೋಷಣೆ ಆಗಿದ್ದು, ನೀತಿ ಸಂಹಿತೆ ಜಾರಿಗೆ ಬಂದಿದೆ. ಬಹುತೇಕ ಅಧಿಕಾರಿಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಹಾಗಾಗಿ ಅರ್ಜಿ ಸಮಿತಿ ಸೂಚನೆ ಎಷ್ಟರ ಮಟ್ಟಿಗೆ ಕೆಲಸ ಮಾಡುತ್ತದೆ ಎನ್ನುವುದು ಪ್ರಶ್ನಾರ್ಹವಾಗಿದೆ. ಸಮಿತಿ ಕೊಟ್ಟಿರುವ ಗಡುವು ಪೂರ್ಣವಾಗಲು ಇನ್ಮು ಒಂದು ವಾರ ಮಾತ್ರ ಬಾಕಿ ಇದೆ. ಅಷ್ಟರ ಒಳಗೆ ತಜ್ಞರಿಂದ ವರದಿ ಬರುವ ಬಗ್ಗೆಯೂ ಅನುಮಾನಗಳಿವೆ. ಒಂದು ವೇಳೆ ವರದಿ ಬಂದರೂ ಅದರ ಮುಂದುವರಿದ ಪ್ರಕ್ರಿಯೆಗಳು ಮುಗಿದು ಮುಂದಿನ ಮಳೆಗಾಲದ ಒಳಗೆ ತಡೆಗೋಡೆ ರಕ್ಷಣೆ ಕೆಲಸ ನಡೆಯುವ ಸಾಧ್ಯತೆಯೂ ತೀರಾ ಕಡಿಮೆ. ಹಾಗಾಗಿ ಮಳೆಗಾಲದಲ್ಲಿ ಜಿಲ್ಲಾಧಿಕಾರಿ ಕಚೇರಿ ತಡೆಗೋಡೆ ಮಾತ್ರವಲ್ಲದೆ, ಜಿಲ್ಲಾಧಿಕಾರಿ ಕಚೇರಿ, ಮಡಿಕೇರಿ-ಮಂಗಳೂರು ರಸ್ತೆ, ಹಾಗೂ ಸುತ್ತಲಿನ ಮನೆಗಳನ್ನು ಕಾಪಾಡಿಕೊಳ್ಳುವುದೇ ದೊಡ್ಡ ಸವಾಲು ಆಗಲಿದೆ.
ಜಿಲ್ಲಾಡಳಿತ ಭವನ ಬಳಿಯ ತಡೆಗೋಡೆ ಸಂಬಂಧಿಸಿದಂತೆ ಹಲವು ಬಾರಿ ಸರ್ಕಾರದ ಗಮನ ಸೆಳೆಯಲಾಗಿತ್ತು. ಆ ನಿಟ್ಟಿನಲ್ಲಿ ವಿಧಾನಸಭೆಯ ಅರ್ಜಿ ಸಮಿತಿ ಸದಸ್ಯರು ಖುದ್ದಾಗಿ ಭೇಟಿ ನೀಡಿ ಪರಿಶೀಲಿಸಿದ್ದು, ಸಮಿತಿ ನಿರ್ಣಯಗಳು ಹಾಗೂ ತಾಂತ್ರಿಕ ತಜ್ಞರು ನೀಡುವ ವರದಿಯಂತೆ ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ. ಮುಂದಿನ ಮಳೆಗಾಲದಲ್ಲಿ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಗಮನಹರಿಸಲಾಗುವುದು. ತಡೆಗೋಡೆ ಸಂಬಂಧ ಸರ್ಕಾರದ ಗಮನ ಸೆಳೆದು ಶೀಘ್ರ ಪೂರ್ಣಗೊಳಿಸಲಾಗುವುದು.
ಡಾ. ಮಂತರ್ ಗೌಡ, ಮಡಿಕೇರಿ ಶಾಸಕ
ಉನ್ನತ ಮಟ್ಟದ ಅಧಿಕಾರಿಗಳ ಜತೆ ಸಭೆ ನಡೆಸಲಾಗಿದ್ದು, ತಡೆಗೋಡೆ ಸಂಬಂಧ ಒಟ್ಟು ಯೋಜನೆ ರೂಪುರೇಷೆ ಬಗ್ಗೆ ಮರು ಪರಿಶೀಲಿಸಲು ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. ತಡೆಗೋಡೆ ಸಂಬಂಧ ಪರ್ಯಾಯ ಅಭಿವೃದ್ಧಿ ಬಗ್ಗೆ ಯೋಚಿಸಲಾಗಿದ್ದು, ಬೆಂಚು ಮಾದರಿಯಲ್ಲಿ ತಡೆಗೋಡೆ ನಿರ್ಮಿಸುವ ಸಂಬಂಧ ೧೫ ದಿನದಲ್ಲಿ ಡಿಪಿಆರ್ ಸಿದ್ಧಪಡಿಸಿ, ವರದಿ ಸಲ್ಲಿಸುವಂತೆ ಭಾರತೀಯ ವಿಜ್ಞಾನ ಸಂಸ್ಥೆಯ ಪ್ರಾಧ್ಯಾಪಕರಿಗೆ ಸೂಚಿಸಲಾಗಿದೆ.
ಎಸ್. ಸುರೇಶ್ ಕುಮಾರ್, ವಿಧಾನಸಭೆ ಅರ್ಜಿ ಸಮಿತಿ ಸದಸ್ಯ