

ಕಳಸ: ಜಾನಪದ ಪರಿಷತ್‌ಗೆ ಯುನೆಸ್ಕೋ ಮಾನ್ಯತೆ ನೀಡಿರುವುದು ಪ್ರತಿಯೊಬ್ಬ ಕನ್ನಡಿಗನ ಹೆಮ್ಮೆಯಾಗಿದೆ ಎಂದು ಶಿಕ್ಷಕ ಪ್ರಶಾಂತ್ ಹೇಳಿದರು.
ಜಾನಪದ ಪರಿಷತ್ ಕಳಸ ತಾಲೂಕು ಘಟಕದಿಂದ ಜಾನಪದ ಪರಿಷತ್‌ನ ಪ್ರಥಮ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿ, ಸಂಸ್ಥೆಗಳಿಗೆ ಯುನೆಸ್ಕೋ ಮಾನ್ಯತೆ ನೀಡಿರುವುದು ಇದು ಮೊದಲ ಬಾರಿ. ಅದರಲ್ಲೂ ಜಾನಪದ ಪರಿಷತ್‌ಗೆ ಮಾನ್ಯತೆ ನೀಡಿರುವಿದರಿಂದ ಪ್ರತಿಯೊಬ್ಬ ಕನ್ನಡಿಗನ್ನೂ ಸಂಭ್ರಮಾಚರಣೆ ಮಾಡಬೇಕು. ಇಂತಹ ಮಾನ್ಯತೆಯನ್ನು ಸದ್ಬಳಕೆ ಮಾಡಿಕೊಂಡಾಗ ಮಾತ್ರ ಮುಂದುವರಿಯಲು ಸಾಧ್ಯ. ಜಾನಪದ ಪರಿಷತ್‌ನಂತಹ ಸಂಘ, ಸಂಸ್ಥೆಗಳಿಗೆ ಸದಸ್ಯರಾಗಿ ಸೇರಿಕೊಂಡಾಗ ಈ ಜಾನಪದ ಕಲೆ ಜತೆಗೆ ಬಾಂಧ್ಯವ್ಯ ವೃದ್ಧಿವೂ ಸಾಧ್ಯ ಎಂದು ಹೇಳಿದರು.
ಕಳಸ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅ.ರಾ.ಸತೀಶ್ಚಂದ್ರ ಮಾತನಾಡಿ, ಜಾನಪದ ಪರಿಕರಗಳು ಹಾಗೂ ಅಳಿವಿನಂಚಿನಲ್ಲಿರುವ ಜಾನಪದ ಕಲೆಯನ್ನು ಉಳಿಸಿ ಬೆಳೆಸುವ ಜವಾಬ್ದಾರಿ ಎಲ್ಲರ ಮೇಲಿದೆ. ಕಳೆದ ಒಂದು ವರ್ಷದಿಂದ ಕರ್ನಾಟಕ ಜಾನಪದ ಪರಿಷತ್ ಕಳಸ ಘಟಕ ಸಾಕಷ್ಟು ಕಾರ್ಯಕ್ರಮಗಳು ಹಾಗೂ ಕಲಾವಿದರನ್ನು ಗುರುತಿಸಿ ಅವರನ್ನು ಪ್ರೋತ್ಸಾಹಿಸುತ್ತಿದೆ. ಇದರಿಂದ ತೆರೆಮರೆಯಲ್ಲಿರುವ ಕಲಾವಿದರ ಪರಿಚಯ ಜನರಿಗೆ ಅಗಲಿದೆ ಎಂದರು.
ಜಾನಪದ ಪರಿಷತ್ ಕಳಸ ಘಟಕದ ಅಧ್ಯಕ್ಷ ರಜಿತ್ ಕೆಳಗೂರು ಮಾತನಾಡಿ, ಜಾನಪದ ಪರಿಷತ್‌ಗೆ ಯುನೆಸ್ಕೋ ಮಾನ್ಯತೆ ನೀಡಿರುವುದರಿಂದ ಜಾನಪದ ಕಲೆಯನ್ನು ಹೊರ ರಾಷ್ಟ್ರಗಳಿಗೂ ಪರಿಚಯ ಮಾಡಿಕೊಟ್ಟಂತಾಗಿದೆ. ಹಬ್ಬ ಹರಿದಿನಗಳನ್ನು ಆಚರಿಸದಿರುವುದು ಜಾನಪದಕ್ಕೆ ಮೂಲ ಪೆಟ್ಟಾಗಿದೆ. ತಮ್ಮ ತಮ್ಮ ಮನೆಯಲ್ಲಿ ಕನಿಷ್ಠ ಹಬ್ಬ ಗಳನ್ನು ಆಚರಿಸುವುದರಿಂದ ನಮ್ಮ ಸಂಸ್ಕೃತಿ, ಜಾನಪದ ಕಲೆಗಳನ್ನು ಬೆಳೆಸಿದಂತಾಗುತ್ತದೆ ಎಂದು ಹೇಳಿದರು.
ಕರಟದ ಚಿಪ್ಪಿನ ವಿನ್ಯಾಸಕಾರ ಪೂರ್ಣಚಂದ್ರ ಹಂದಿಗೋಡು ಹಾಗೂ ಕೊಳಲು ವಾದಕ ರಾಜೇಶ್ ಎಸ್.ಕೆ.ಮೇಗಲ್ ರನ್ನು ಗೌರವಿಸಲಾಯಿತು. ಮಕ್ಕಳಿಗೆ ಜಾನಪದ ಗೀತೆ ಸ್ಪರ್ಧೆ ಹಾಗೂ ಜಾನಪದ ಪರಿಕರಗಳ ಸ್ಮರಣ ಪರೀಕ್ಷೆ ಸ್ಪರ್ಧೆ ನಡೆಸಿ ಬಹುಮಾನ ವಿತರಿಸಲಾಯಿತು. ಕಳಸ ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಮಮ್ತಾಜ್ ಬೇಗಮ್, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ಸುಮನಾ ಜಯರಾಜ್, ಯಕ್ಷಗಾನ ಕಲಾವಿದೆ ಟಿ.ಎನ್. ಜ್ಯೋತಿ, ನಗೀನ ಖಾದರ್, ಉದಯ್, ನಿಖಿತಾ ಸಂತೋಷ್, ಆಶಾ ರಾಘವೇಂದ್ರ, ಸುಚಿತ್ರಾ ಉದಯ್ ಇತರರಿದ್ದರು.