ಎಐನಿಂದ ನಿರುದ್ಯೋಗ ಸಮಸ್ಯೆ ಬಾರದು: ವೆಬ್ ಕ್ಯಾಸ್ಕೇಡ್ ಟೆಕ್ನಾಲಜೀಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕ ಎಸ್. ಜಯಂತ್ ಹೇಳಿಕೆ

15
Published on

ಮೈಸೂರು: ಆರ್ಟಿಫಿಷಿಯಲ್ ಇಂಟಲಿಜೆನ್ಸಿ (ಎಐ) ನಾಗಾಲೋಟದ ಬೆಳವಣಿಗೆ ನಿರುದ್ಯೋಗ ಸಮಸ್ಯೆ ಉಂಟುಮಾಡದು ಎಂದು ವೆಬ್ ಕ್ಯಾಸ್ಕೇಡ್ ಟೆಕ್ನಾಲಜೀಸ್ ಸಂಸ್ಥೆ ಸಂಸ್ಥಾಪಕ ನಿರ್ದೇಶಕ ಎಸ್. ಜಯಂತ್ ಹೇಳಿದರು.
ಮೈಸೂರು ವಿಶ್ವವಿದ್ಯಾಲಯದ ತಾಂತ್ರಿಕ ಶಾಲೆಯ ಎಐ ಎಂಎಲ್ ವಿಭಾಗದಿಂದ ಸೋಮವಾರ ಮಾನಸಗಂಗೋತ್ರಿಯ ರಂಗಪ್ಪ ಸಭಾಂಗಣದಲ್ಲಿ ಆಯೋಜಿಸಿದ್ದ ‘ಮಾಹಿತಿ ತಂತ್ರಜ್ಞಾನದಲ್ಲಿ ಇತ್ತೀಚಿನ ಪ್ರವೃತ್ತಿಗಳು’ ವಿಶೇಷ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಎಐ ತಂತ್ರಜ್ಞಾನದಿಂದ ಜೀವನ ಮಟ್ಟ ಉತ್ತಮವಾಗುತ್ತದೆ. ದೈಹಿಕ ಶ್ರಮ ಕಡಿಮೆಯಾಗುತ್ತದೆ. ಮಾನವ ಸಂಪನ್ಮೂಲವೂ ಕಡಿತವಾಗುತ್ತದೆ. ಆದರೆ ತಂತ್ರಜ್ಞಾನ ನಿಯಂತ್ರಿಸುವ, ನಿರ್ವಹಿಸುವ, ಸಂಶೋಧನೆ ಮಾಡುವ ಕೌಶಲ ಇದ್ದವರಿಗೆ ಉದ್ಯೋಗಾವಕಾಶ ಹೇರಳವಾಗಿರುತ್ತದೆ. ಆದರೆ ಇತರರಿಗೆ ಇದರಿಂದ ತೊಂದರೆ ಆಗಬಹುದು ಎಂದು ಹೇಳಿದರು.
ಕುತೂಹಲ ಇರಬೇಕು: ಅಧ್ಯಕ್ಷತೆ ವಹಿಸಿದ್ದ ಮೈಸೂರು ವಿವಿ ತಾಂತ್ರಿಕ ಶಾಲೆ ನಿರ್ದೇಶಕ ಡಾ. ಟಿ. ಅನಂತ ಪದ್ಮನಾಭ ಮಾತನಾಡಿ, ವಿದ್ಯಾರ್ಥಿಗಳಿಗೆ ಹೊಸದನ್ನು ಹುಡುಕುವ, ಅನ್ವೇಷಿಸುವ ಕುತೂಹಲ ಇರಬೇಕು. ಆಗ ಮಾತ್ರ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಕೊಡುಗೆ ನೀಡಲು ಸಾಧ್ಯ ಎಂದರು.
ತಾಂತ್ರಿಕ ವಿಭಾಗದ, ಅದರಲ್ಲೂ ಕೃತಕ ಬುದ್ಧಿಮತ್ತೆ (ಎ.ಐ.), ರೋಬಾಟಿಕ್ ಸೈನ್ಸ್ ವಿಭಾಗದ ವಿದ್ಯಾರ್ಥಿಗಳಿಗೆ ಅಧ್ಯಯನದೊಂದಿಗೆ ಸಂಶೋಧನಾ ಪ್ರವೃತ್ತಿಯೂ ಇಮ್ಮಡಿಗೊಳ್ಳಬೇಕು. ಈ ನಿಟ್ಟಿನಲ್ಲಿ ಯಾವುದೇ ಸಂಪನ್ಮೂಲ ದೊರಕಿಸಿಕೊಡಲು ಕಾಲೇಜು ಬದ್ಧವಾಗಿದೆ. ಇದನ್ನು ಸದುಪಯೋಗ ಪಡೆದುಕೊಂಡು ಹೊಸ ಸಂಶೋಧನೆ ಮಾಡಿ ಎಂದು ಅನಂತ ಪದ್ಮನಾಭ ಸಲಹೆ ನೀಡಿದರು.
ವೆಬ್ ಕ್ಯಾಸ್ಕೇಡ್ ಟೆಕ್ನಾಲಜೀಸ್ ಸಂಸ್ಥೆ ಸಂಪನ್ಮೂಲ ವ್ಯಕ್ತಿ ಎಚ್. ಎಂ. ಸುಸ್ಮಿತಾ, ಎಐ ಎಂಎಲ್ ವಿಭಾಗದ ಮುಖ್ಯಸ್ಥ ಕೆ.ಎಸ್. ಸಂತೋಷ್ ಕುಮಾರ್, ಸಹಾಯಕ ಪ್ರಾಧ್ಯಾಪಕಿ ಡಾ. ಬಿ.ವಿ. ದಿವ್ಯಶ್ರೀ ಮಾತನಾಡಿದರು. ನಂತರ ವಿದ್ಯಾರ್ಥಿಗಳೊಂದಿಗೆ ಪ್ರಶ್ನೋತ್ತರ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net