ನಿರುದ್ಯೋಗ ನಿವಾರಣೆ, ಉತ್ಪಾದನಾ ಕ್ಷೇತ್ರಕ್ಕೆ ಆದ್ಯತೆ

bjp
Published on

ಶಿವಮೊಗ್ಗ: ಕೇಂದ್ರ ಸರ್ಕಾರ ಈ ಬಾರಿ ಮಂಡಿಸಿದ ಬಜೆಟ್ ಪ್ರಗತಿಗೆ ಪೂರಕವಾಗಿದೆ. 2026ರಲ್ಲಿ ಭಾರತ ಜಗತ್ತಿನಲ್ಲೇ 4ನೇ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮುವ ವಿಶ್ವಾಸವಿದೆ ಎಂದು ಆರ್ಥಿಕ ತಜ್ಞ, ಬಿಜೆಪಿ ವಕ್ತಾರ ವಿಶ್ವನಾಥ ಭಟ್ ಹೇಳಿದರು.

ಗುಣಮಟ್ಟದ ಶಿಕ್ಷಣ, ಬಡತನ ನಿವಾರಣೆ, ಆರೋಗ್ಯ, ನಿರುದ್ಯೋಗ ನಿವಾರಣೆ ಮುಂತಾದವುಗಳಿಗೆ ಈ ಬಜೆಟ್‌ನಲ್ಲಿ ಪರಿಹಾರ ಒದಗಿಸಲಾಗಿದೆ. ವಿಕಸಿತ ಭಾರತ ಪರಿಕಲ್ಪನೆ ಸಾಕಾರಕ್ಕೆ ಇದು ಸಹಕಾರಿ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅಭಿಪ್ರಾಯಪಟ್ಟರು.

ಜಪಾನ್, ರಷ್ಯಾ, ಅಮೆರಿಕ ಮುಂತಾದ ಅಭಿವೃದ್ಧಿ ಹೊಂದಿದ ದೇಶಗಳೇ ಆರ್ಥಿಕ ಹಿಂಜರಿತ ಎದುರಿಸುತ್ತಿರುವ ಸಂದರ್ಭದಲ್ಲಿ ಭಾರತ ಸುಸ್ಥಿರ ಆರ್ಥಿಕತೆಯತ್ತ ಮುನ್ನುಗ್ಗುತ್ತಿದೆ. ಬಹುತೇಕ ಶ್ರೀಮಂತ ರಾಷ್ಟ್ರಗಳು ಸಾಲದ ಸುಳಿಗೆ ಸಿಲುಕಿವೆ. ಇದರ ಪರಿಣಾಮವಾಗಿ ಮುಂಬರುವ ವರ್ಷಗಳಲ್ಲಿ ಜಾಗತಿಕವಾಗಿ ನಿರುದ್ಯೋಗ ಸಮಸ್ಯೆ ಉದ್ಭವಿಸಲಿದೆ. ಮಧ್ಯಮ ವರ್ಗದವರು ಸಂಕಷ್ಟಕ್ಕೆ ಸಿಲುಕಲಿದ್ದಾರೆ. ಆದರೆ ಭಾರತ ಈ ಅಪಾಯಗಳಿಂದ ಹೊರತಾಗಿರಲಿದೆ ಎಂದು ವಿಶ್ವಾಸದಿಂದ ಹೇಳಿದರು.

ಭಾರತ ಪ್ರಸ್ತುತ ಆರ್ಥಿಕ ವರ್ಷದಲ್ಲಿ ಶೇ.7.6ರಿಂದ ಶೇ.7.8ರಷ್ಟು ಆರ್ಥಿಕ ಅಭಿವೃದ್ಧಿ ಹೊಂದುವ ಮೂಲಕ ಉದ್ಯೋಗ ಸೃಷ್ಟಿಗೆ ಆದ್ಯತೆ ನೀಡಿದೆ. ಜಗತ್ತಿನಲ್ಲೇ ಅತ್ಯಂತ ಯುವ ರಾಷ್ಟ್ರ ಎನಿಸಿಕೊಂಡಿರುವ ಭಾರತದ 2025-26ನೇ ಸಾಲಿನ ಬಜೆಟ್‌ನಲ್ಲಿ ನಿರುದ್ಯೋಗ ಸಮಸ್ಯೆ ನಿವಾರಣೆ, ಉತ್ಪಾದನಾ ಕ್ಷೇತ್ರವನ್ನು ಆದ್ಯತಾ ವಲಯವನ್ನಾಗಿಸುವ ಮೂಲಕ ಆರ್ಥಿಕ ಪ್ರಗತಿ ಸಾಧಿಸುವ ಗುರಿ ಹೊಂದಲಾಗಿದೆ ಎಂದರು.

2004ರಿಂದ 2014ರ ಯುಪಿಎ ಆಡಳಿತದ ಅವಧಿಯಲ್ಲಿ 2.9 ಕೋಟಿ ಹೊಸ ಉದ್ಯೋಗ ಸೃಷ್ಟಿಯಾಗಿದ್ದರೆ 2014-24ರ ಎನ್‌ಡಿಎ ಸರ್ಕಾರದ ಅವಧಿಯಲ್ಲಿ 17.9 ಕೋಟಿ ಹೊಸ ಉದ್ಯೋಗ ಸೃಷ್ಟಿಸಲಾಗಿದೆ ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ಎಂಎಲ್‌ಸಿ ಡಿ.ಎಸ್.ಅರುಣ್, ಪ್ರಕೋಷ್ಠಗಳ ರಾಜ್ಯ ಸಂಯೋಜಕ ಎಸ್.ದತ್ತಾತ್ರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಹರಿಕೃಷ್ಣ, ಮಾಲತೇಶ್, ಮಹಿಳಾ ಮೋರ್ಚಾ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಂಗಳಾ ನಾಗೇಂದ್ರ, ಪ್ರಮುಖರಾದ ಸುಮಲತಾ, ಎನ್.ಡಿ.ಸತೀಶ್, ಶ್ರೀನಿವಾಸ ರೆಡ್ಡಿ, ಸುಧೀಂದ್ರ ಕಟ್ಟೆ, ಕೆ.ವಿ.ಅಣ್ಣಪ್ಪ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net