ಉದ್ಯೋಗದ ಹೆಸರಲ್ಲಿ 2.5 ಕೋಟಿ ರೂ. ವಂಚನೆ

12 ckm 4
Published on

ಚಿಕ್ಕಮಗಳೂರು: ಸರ್ಕಾರಿ ಉದ್ಯೋಗ ಕೊಡಿಸುವುದಾಗಿ ನಿರುದ್ಯೋಗಿಗಳನ್ನು ನಂಬಿಸಿ ಸುಮಾರು 2.5 ಕೋಟಿ ರೂ. ಹಣ ಸಂಗ್ರಹ ಮಾಡಿ ವಂಚಿಸಿದ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಕಲಿ ಅಧಿಕಾರಿ ಮತ್ತು ಆತನ ಕಾರು ಚಾಲಕನನ್ನು ಬಂಧಿಸಿರುವ ಪೊಲೀಸರು, 17.25 ಲಕ್ಷ ರೂ. ನಗದು, 36 ಲಕ್ಷ ರೂ. ಚಿನ್ನಾಭರಣ, ಲ್ಯಾಪ್​ಟಾಪ್, ನಕಲಿ ಗುರುತಿನ ಚೀಟಿಗಳು, ವಿವಿಧ ದಾಖಲೆ ಪತ್ರಗಳನ್ನು ವಶಡಿಸಿಕೊಂಡಿದ್ದಾರೆ.

ಬೆಂಗಳೂರಿನ ನಾಗರಬಾವಿಯ ಬ್ರೋಕರ್ ಪ್ರಭಾಕರ (34) ಶಿಕ್ಷಣ ಇಲಾಖೆ ಅಧಿಕಾರಿ ಎಂದು ಹೇಳಿಕೊಂಡು ನಿರುದ್ಯೋಗಿಗಳನ್ನು ವಂಚಿಸುತ್ತಿದ್ದು, ಸುಮಾರು 2.5 ಕೋಟಿ ರೂ. ಸಂಗ್ರಹ ಮಾಡಿರಬಹುದು ಎಂದು ಶಂಕಿಸಲಾಗಿದೆ.

ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ ಬೇರೆ ಬೇರೆ ಕೆಲಸಕ್ಕೆ ಹಲವರಿಂದ ಹಣ ಪಡೆದಿದ್ದೇನೆ ಎಂದು ಬಾಯಿ ಬಿಟ್ಟಿದ್ದಾನೆ. ಚಿಕ್ಕಮಗಳೂರು, ಬೆಂಗಳೂರು, ಮೈಸೂರು, ಮಂಡ್ಯ, ಚಾಮರಾಜನಗರ ಸೇರಿ ರಾಜ್ಯದ 17 ಜಿಲ್ಲೆಯ 35 ಅಭ್ಯರ್ಥಿಗಳ ಉದ್ಯೋಗದ ನಕಲಿ ಐಡೆಂಟಿಟಿ ಕಾರ್ಡ್ ಮತ್ತು ನಕಲಿ ಉದ್ಯೋಗ ಪತ್ರ, 48 ನಿರುದ್ಯೋಗಿಗಳ ಮೂಲ ಶೈಕ್ಷಣಿಕ ದಾಖಲಾತಿಗಳು, ಆಧಾರ್ ಕಾರ್ಡ್, ಪಾನ್ ಕಾರ್ಡ್, ಬ್ಯಾಂಕ್ ಪಾಸ್​ಬುಕ್ ಆತನ ಬಳಿ ಸಿಕ್ಕಿವೆ ಎಂದು ಎಸ್ಪಿ ಎಸ್ಪಿ ಎಂ.ಎಚ್. ಅಕ್ಷಯ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಚಿಕ್ಕಮಗಳೂರು ತಾಲೂಕು ಚಿಕ್ಕಗೌಜ ಗ್ರಾಮದ ಕೂಲಿ ಕಾರ್ವಿುಕ ಉಮೇಶ್ ಎಂಬುವರು ವಂಚನೆ ದೂರು ದಾಖಲು ಮಾಡಿದ್ದು, ತನಿಖೆ ಕೈಗೊಂಡಾಗ ಆರೋಪಿ ಸಿಕ್ಕುಬಿದ್ದಿದ್ದಾನೆ. ವಂಚನೆಗೊಳಗಾಗಿರುವ ಉಮೇಶ್ ನಗರದ ವಿಷ್ಣು ಡೆಲಿಕೆಸಿ ಹೋಟೆಲ್​ನಲ್ಲಿ ಸಪ್ಲೇಯರ್ ಕೆಲಸ ಮಾಡುತ್ತಿದ್ದ. ಗ್ರಾಹಕನಾಗಿ ಹೋಟೆಲ್​ಗೆ ಹಲವು ಬಾರಿ ಬಂದ ಆರೋಪಿ ಪ್ರಭಾಕರ್, ಬೆಂಗಳೂರಿನ ಎಸ್​ಎಸ್​ಎಲ್​ಸಿ ಬೋರ್ಡ್​ನಲ್ಲಿ ಮುಖ್ಯ ಕಾರ್ಯದರ್ಶಿ ಎಂದು ಉಮೇಶ್​ಗೆ ಪರಿಚಯಿಸಿಕೊಂಡಿದ್ದ. ನಂತರ ಪಿಯು ಬೋರ್ಡ್​ನಲ್ಲಿ ನಿನಗೆ ಕಂಪ್ಯೂಟರ್ ಆಪರೇಟರ್ ಕೆಲಸ ಕೊಡಿಸುತ್ತೇನೆ ಎಂದು ಹೇಳಿ ದಾಖಲಾತಿಗಳೊಂದಿಗೆ 7 ಲಕ್ಷ ರೂ.ಗಳನ್ನು ತನ್ನ ಬ್ಯಾಂಕ್ ಖಾತೆಗೆ ಜಮಾ ಮಾಡಿಸಿಕೊಂಡು ನಕಲಿ ನೇಮಕಾತಿ ಪತ್ರ ಕೊಟ್ಟು ವಂಚಿಸಿದ್ದ.

ವಂಚನೆಗೊಳಗಾಗಿದ್ದ ಉಮೇಶ್ ತನ್ನ ಸ್ನೇಹಿತ ಯೋಗೀಶ್​ನೊಂದಿಗೆ ಬೆಂಗಳೂರಿಗೆ ತೆರಳಿ ಪ್ರೌಢಶಿಕ್ಷಣ ಮಂಡಳಿ ಮತ್ತು ಪಿಯು ಬೋರ್ಡ್​ಗಳಿಗೆ ತೆರಳಿ ಪ್ರಭಾಕರ್ ಬಗ್ಗೆ ವಿಚಾರಿಸಿದಾಗ ಅಂಥ ವ್ಯಕ್ತಿ ಇಲ್ಲಿಲ್ಲ ಎಂಬ ಮಾಹಿತಿ ಲಭ್ಯವಾಗಿತ್ತು. ಆತ ಅವನಿಗೆ ಮೋಸ ಹೋಗಿರುವುದು ಗೊತ್ತಾಗಿ ನಗರಠಾಣೆಯಲ್ಲಿ ದೂರು ದಾಖಲು ಮಾಡಿದ್ದ

ಪೊಲೀಸರಿಗೆ ಆರೋಪಿ ಹೇಳಿದ್ದೇನು?: ಮಲ್ಲೇಶ್ವರಂನಲ್ಲಿರುವ ಎಸ್​ಎಸ್​ಎಲ್​ಸಿ ಬೋರ್ಡ್​ಗೆ ದಾಖಲೆ ಸರಿಪಡಿಸಿಕೊಳ್ಳುವುದು ಸೇರಿದಂತೆ ವಿವಿಧ ಕಾರಣಗಳಿಗೆ ಜನ ಬರುತ್ತಿದ್ದರು. ಕ್ಲರ್ಕ್​ಗಳನ್ನು ಪರಿಚಯಿಸಿಕೊಂಡು ದಾಖಲಾತಿ ಸರಿಪಡಿಸುವುದು, ಅಂಕಪಟ್ಟಿ ಕೊಡಿಸುವುದು ಸೇರಿ ಹಲವು ಕೆಲಸ ಮಾಡಿಕೊಟ್ಟು ವಿದ್ಯಾರ್ಥಿಗಳಿಂದ ಹಣ ಪಡೆಯುತ್ತಿದ್ದೆ. ಹೆಚ್ಚು ಹಣ ಸಂಪಾದನೆ ಮಾಡಬೇಕೆಂದು ಮಂಡಳಿಯ ಮುಖ್ಯ ಆಪ್ತ ಕಾರ್ಯದರ್ಶಿ ಎಂದು ಕಾರ್ಡ್ ಮಾಡಿಸಿ ಈ ಕೆಲಸಕ್ಕೆ ಮುಂದಾದೆ ಎಂದು ವಿಚಾರಣೆಯಲ್ಲಿ ಬಾಯಿ ಬಿಟ್ಟಿದ್ದಾನೆ.

ನಿರುದ್ಯೋಗಿಗಳಿಂದ ಲಕ್ಷ ಲಕ್ಷ ಪೀಕಿದ: ನಿರುದ್ಯೋಗಿಗಳಿಗೆ ಗಾಳ ಹಾಕಿದ ಆರೋಪಿ ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್​ಗಳಲ್ಲಿ ಅಭ್ಯರ್ಥಿಗಳ ಕುಟುಂಬಸ್ಥರ ಜೊತೆ ಭೇಟಿ ಮಾಡಿ ಕೆಲಸ ಕೊಡಿಸುವ ನಂಬಿಕೆ ಹುಟ್ಟಿಸಿ, ಪ್ರಥಮ ದರ್ಜೆ ಸಹಾಯಕ ಹುದ್ದೆಗೆ 12 ರಿಂದ 13 ಲಕ್ಷ, ದ್ವಿತೀಯ ದರ್ಜೆ ಸಹಾಯಕ ಹಾಗೂ ಕಂಪ್ಯೂಟರ್ ಆಪರೇಟರ್​ಗೆ 5 ರಿಂದ 7 ಲಕ್ಷ, ಡಿ ಗ್ರೂಪ್ ನೌಕರಿಗೆ 5 ಲಕ್ಷ ನಿಗದಿಸಿ ಮುಂಗಡ ಹಣ ಪಡೆದು ಉದ್ಯೋಗ ಖಾತರಿಯಾದ ನಂತರ ಪೂರ್ಣ ಹಣ ನೀಡುವಂತೆ ಒಪ್ಪಂದ ಮಾಡಿಕೊಟ್ಟಿದ್ದಾನೆ. ನಂತರ ಸರ್ಕಾರದ ನಕಲಿ ಲೆಟರ್ ಹೆಡ್​ನಲ್ಲಿ ಉದ್ಯೋಗ ಖಾತರಿ ಪತ್ರ ನೀಡಿ ಉಳಿದ ಹಣ ಪಡೆದು ವಂಚಿಸಿದ್ದಾನೆ ಎಂಬುದು ಬೆಳಕಿಗೆ ಬಂದಿದೆ.

ಪ್ರೊಬೇಷನರಿ ಅವಧಿಗೆ ಸಂಬಳ ಕೊಟ್ಟ: 8 ರಿಂದ 12 ತಿಂಗಳು ಪ್ರೊಬೇಷನರಿ ಅವಧಿಗೆ ಸ್ಟೈಫೆಂಡ್ ಆಗಿ ಕೆಲವರಿಗೆ 20 ಸಾವಿರ ಮತ್ತೆ ಕೆಲವರಿಗೆ 15 ಸಾವಿರ ರೂ.ಗಳನ್ನು ತಾನೆ ಅಭ್ಯರ್ಥಿಗಳ ಖಾತೆಗೆ ಜಮೆ ಮಾಡಿ ನಂಬಿಕೆ ಹುಟ್ಟಿಸಿ ಚಾಣಾಕ್ಷ್ಯ ತನದಿಂದ ಮೋಸಮಾಡಿದ್ದಾನೆ. 2.43 ಕೋಟಿ ರೂ. ಮೌಲ್ಯದ ಮನೆ ಖರೀದಿಗೆ ಒಪ್ಪಂದ ಮಾಡಿಕೊಂಡು 15.25 ಲಕ್ಷ ಮುಂಗಡ ಹಣ ಪಾವತಿಸಿದ್ದು, 40 ಲಕ್ಷ ರೂ. ಚಿನ್ನಾಭರಣ ಖರೀದಿ ಮಾಡಿದ್ದಾನೆ ಎಂದು ಎಸ್ಪಿ ಎಂ.ಎಚ್.ಅಕ್ಷಯ್ ಹೇಳಿದರು.

ಮನೆ ಖರೀದಿಗಾಗಿ ನೀಡಿದ 15.25 ಲಕ್ಷ ರೂ., ಮನೆಯಲ್ಲಿದ್ದ 2 ಲಕ್ಷ ನಗದು, 36 ಲಕ್ಷ ಬೆಲೆಬಾಳುವ ಚಿನ್ನಾಭರಣ. ಇನೋವಾ ಕಾರು, ಬೆಂಗಳೂರಿನ ಸುಮತಿ ಎಂಟರ್ ಪ್ರೖೆಸಸ್ ಸೈಬರ್ ಸೆಂಟರ್​ನಲ್ಲಿ ನಕಲಿ ಲೆಟರ್ ಹೆಡ್, ನಕಲಿ ಐಡೆಂಟಿಟಿ ಕಾರ್ಡ್ ಮತ್ತು ಕೃತ್ಯಕ್ಕೆ ಬಳಸಿದ ಕಂಪ್ಯೂಟರ್ ಇತರೆ ವಸ್ತುಗಳು, ಎಸ್​ಎಲ್​ಬಿ ಪ್ರಿಂಟಿಂಗ್ ಪ್ರೆಸ್ ಮೇಲೆ ದಾಳಿ ನಡೆಸಿ ಕಂಪ್ಯೂಟರ್ ಮತ್ತು ಪ್ರಿಂಟಿಂಗ್ ಯಂತ್ರ ಸೇರಿ ವಿವಿಧ ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಡ್ಡಿಗಾಗಿ ಹಣ ಕೊಟ್ಟಿರುವ ಬಗ್ಗೆ ಮಾಹಿತಿ ಇದ್ದು ತನಿಖೆ ಮುಂದುವರೆಸಲಾಗಿದೆ ಎಂದು ತಿಳಿಸಿದ್ದಾರೆ.

ತೀರ್ಥಯಾತ್ರೆಗೆ 35 ಲಕ್ಷ ರೂ.!: ವಂಚಕ ತನ್ನ ಪಾಪಕೃತ್ಯ ಪರಿಹಾರಕ್ಕೆ ಹಲವು ತೀರ್ಥ ಕ್ಷೇತ್ರಗಳ ದರ್ಶನಕ್ಕೆ ಪ್ರವಾಸ ಮಾಡಿದ್ದು, ಇದಕ್ಕಾಗಿ ಮಾಡಿರುವ ಖರ್ಚು 35 ಲಕ್ಷ ರೂ. ವೈಷ್ಣೋದೇವಿ, ಯಮುನೋತ್ರಿ, ಗಂಗೋತ್ರಿ, ಹರಿದ್ವಾರ, ರಿಷಿಕೇಷ, ಬದರಿನಾಥ, ಕೇದಾರನಾಥ, ಫಂಡರಪುರ, ಶಿರಡಿ, ಮಂತ್ರಾಲಯ, ಪುಟ್ಟಪರ್ತಿ, ಧರ್ಮಸ್ಥಳ, ಹೊರನಾಡು, ಗೋಕರ್ಣ, ಮುರ್ಡೆಶ್ವರ, ಮಧುರೆ, ಮುಂತಾದ ಕ್ಷೇತ್ರಗಳಿಗೆ ಭೇಟಿ ನೀಡಿದ್ದಾನೆ.

ತಿಮ್ಮಪ್ಪನ ಹುಂಡಿಗೆ 5 ಲಕ್ಷ ರೂ.: ಆರೋಪಿ ವಂಚನೆ ಕೃತ್ಯದ ತಪ್ಪೊಪ್ಪಿಗೆಗಾಗಿ ತಿರುಪತಿಗೆ ವಾರಕ್ಕೊಮ್ಮೆ ಭೇಟಿ ನೀಡುತ್ತಿದ್ದು, ಐದು ಲಕ್ಷ ರೂ.ಗಳನ್ನು ಹುಂಡಿಗೆ ಹಾಕಿದ್ದಾನೆ. ತಿರುಪತಿಗೆ ಹೋಗಿ ಬರಲು ಸುಮಾರು 10 ಲಕ್ಷ ರೂ.ಗಳಿಗೂ ಹೆಚ್ಚು ಹಣ ಖರ್ಚು ಮಾಡಿದ್ದಾನೆ. ಐಷಾರಾಮಿ ಪ್ರವಾಸ ಮಾಡಿದ್ದು, ಪ್ರವಾಸಕ್ಕಾಗಿ 10 ಲಕ್ಷ ರೂ. ಖರ್ಚು ಮಾಡಿದ್ದಾನೆ.

2.43 ಕೋಟಿ ವೆಚ್ಚ ಮನೆ ಖರೀದಿ?: ಉದ್ಯೋಗ ಕೊಡಿಸುವ ನೆಪದಲ್ಲಿ ಸುಮಾರು 2.5 ಕೋಟಿ ರೂ.ಗಳಿಗೂ ಅಧಿಕ ಹಣ ಸಂಗ್ರಹ ಮಾಡಿರುವ ಮಾಹಿತಿ ಲಭ್ಯವಾಗಿದ್ದು, ಓಡಾಡಲು ಇನ್ನೋವಾ ಕಾರು ಖರೀದಿ ಮಾಡಿದ್ದಾನೆ. 40 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಖರೀದಿ ಮಾಡಿದ್ದು, ವಾಸಕ್ಕೆ 2.43 ಕೋಟಿ ರೂ. ಮೌಲ್ಯದ ಮನೆ ಖರೀದಿಗೆ ಒಪ್ಪಂದ ಮಾಡಿಕೊಂಡು 15.25 ಲಕ್ಷ ರೂ. ಮುಂಗಡ ಪಾವತಿ ಮಾಡಿದ್ದಾನೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.

ವಿಶೇಷ ತಂಡ ರಚನೆ: ನಗರ ಠಾಣಾಧಿಕಾರಿ ಟಿ.ಐ.ತೇಜಸ್ವಿ ನೇತೃತ್ವದಲ್ಲಿ ಎಎಸ್​ಐ ರಮೇಶ್ ಸಿಬ್ಬಂದಿ ದಯಾನಂದ್, ಲೋಹಿತ್, ಶಶಿಧರ್, ನವೀನ್, ಮಧುಕುಮಾರ್, ಗುರುಪ್ರಸಾದ್, ಬಿ.ವೈ.ಮೇಘಾ, ಎಚ್.ಯು.ಮೇಘಾ ಅವರನ್ನೊಳಗೊಂಡ ತಂಡ ರಚನೆ ಮಾಡಲಾಗಿತ್ತು. ಈ ತಂಡ ಪ್ರಕರಣದ ಬೆನ್ನತ್ತಿ ಬೆಂಗಳೂರಿಗೂ ತೆರಳಿ ಆರೋಪಿ ಮಾಹಿತಿ ಕಲೆ ಹಾಕಿತ್ತು. ಆರೋಪಿ ಇನ್ನೋವಾ ಕಾರಿನಲ್ಲಿ ನಗರಕ್ಕೆ ಬಂದು ಬೆಂಗಳೂರಿಗೆ ಹಿಂತಿರುಗುವ ಖಚಿತ ಮಾಹಿತಿ ಪಡೆದು ವಶಕ್ಕೆ ಪಡೆದಾಗ ತಾನು ರಾಜ್ಯ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯ ಮುಖ್ಯ ಆಪ್ತ ಕಾರ್ಯದರ್ಶಿ ಎಂದು ಪರಿಚಯಿಸಿಕೊಂಡು ಗುರುತಿನ ಚೀಟಿ ತೋರಿಸಿದ್ದ. ಈ ಗುರುತಿನ ಚೀಟಿ ನಕಲಿ ಎಂಬುದು ಖಚಿತವಾಗುತ್ತಿದ್ದಂತೆ ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net