ವಿತರಣೆಯಾಗದ ಬೆಳೆ ಪರಿಹಾರ

ಅರಕಲಗೂಡು ತಾಲೂಕಿನ ಮಲ್ಲಿಪಟ್ಟಣ ಹೋಬಳಿಯಲ್ಲಿ ಕಾಡಾನೆಗಳು ತೆಂಗಿನ ಮರ ಮುರಿದು ಬುಡಮೇಲು ಮಾಡಿರುವುದು.
ಅರಕಲಗೂಡು ತಾಲೂಕಿನ ಮಲ್ಲಿಪಟ್ಟಣ ಹೋಬಳಿಯಲ್ಲಿ ಕಾಡಾನೆಗಳು ತೆಂಗಿನ ಮರ ಮುರಿದು ಬುಡಮೇಲು ಮಾಡಿರುವುದು.
Published on

ಅರಕಲಗೂಡು: ತಾಲೂಕಿನ ಕೊಣನೂರು ಮತ್ತು ಮಲ್ಲಿಪಟ್ಟಣ ಹೋಬಳಿಯ ಕಾಡಂಚಿನ ಗ್ರಾಮಗಳಲ್ಲಿ ಆನೆಗಳ ದಾಳಿಯಿಂದ ಹಾನಿಗೊಳಗಾದ ಬೆಳೆಗಳಿಗೆ ಪರಿಹಾರ ವಿತರಣೆ ಮಾಡುವಲ್ಲಿ ವಿಳಂಬವಾಗುತ್ತಿದ್ದು, ರೈತರು ಆರ್ಥಿಕವಾಗಿ ಸಂಕಷ್ಟ ಎದುರಿಸುವಂತಾಗಿದೆ.

ಕೊಡಗಿನ ಗಡಿ ಭಾಗವನ್ನು ಹಂಚಿಕೊಂಡಿರುವ ಕೊಣನೂರು ಮತ್ತು ಮಲ್ಲಿಪಟ್ಟಣ ಹೋಬಳಿಯ ಹತ್ತಾರು ಹಳ್ಳಿಗಳಿಗೆ ಪ್ರತಿ ವರ್ಷ ಲಗ್ಗೆ ಇಡುತ್ತಿರುವ ಕಾಡಾನೆಗಳು ರೈತರು ಬೆಳೆದ ಬೆಳೆಗಳನ್ನು ತುಳಿದು ನಾಶಪಡಿಸುತ್ತಿವೆ. ರೈತರು ಕೂಡ ಪ್ರತಿ ಸಲ ಬೆಳೆ ಪರಿಹಾರ ಕೋರಿ ಮನವಿ ಮಾಡುವುದು ವಾಡಿಕೆಯಾಗಿದೆಯೇ ಹೊರತು ಸರ್ಕಾರದಿಂದ ಸಿಗುವ ಪರಿಹಾರ ಮಾತ್ರ ಮರೀಚಿಕೆಯಾಗಿದೆ. ಅದೆಷ್ಟೋ ಸಲ ಬಿಡಿಗಾಸಿನ ಪರಿಹಾರ ಕೂಡ ಸಿಕ್ಕಿಲ್ಲ. ತಾಲೂಕಿನಲ್ಲಿ 2024- 25ನೇ ಸಾಲಿನಲ್ಲಿ ವಿವಿಧ ಬೆಳೆಗಳನ್ನು ಕಳೆದುಕೊಂಡ 241 ರೈತರ ಪೈಕಿ 76 ರೈತರಿಗೆ 8.75 ಲಕ್ಷ ರೂ.ಪರಿಹಾರ ವಿತರಿಸಲಾಗಿದ್ದು, ಉಳಿದ ಸಂತ್ರಸರಿಗೆ 8 ಲಕ್ಷ ರೂ.ಪರಿಹಾರ ವಿತರಣೆ ಮಾಡಬೇಕಿದೆ. ಆದರೆ ಸರ್ಕಾರ ಮಾತ್ರ ಪರಿಹಾರ ಬಿಡುಗಡೆ ಮಾಡದಿರುವ ಕಾರಣ ರೈತರು ಚಾತಕ ಪಕ್ಷಿಯಂತೆ ಕಾಯುವಂತಾಗಿದೆ.

ಹೇಮಾವತಿ ನದಿ ಹಿನ್ನೀರಿನಿಂದ ಆಲೂರು, ಸಕಲೇಶಪುರ ಹಾಗೂ ಕೊಡಗಿನಿಂದ ಆಹಾರ ಅರಸಿಕೊಂಡು ಬರುವ ಕಾಡಾನೆಗಳು ನೇರವಾಗಿ ರೈತರ ಜಮೀನಿನ ಮೇಲೆ ದಾಳಿ ಮಾಡುತ್ತಿವೆ. ಹಗಲು ಹೊತ್ತು ಕಟ್ಟೇಪುರ, ಬೆಸೂರು ಅರಣ್ಯ ಪ್ರದೇಶದಲ್ಲಿ ಬೀಡುಬಿಟ್ಟು ರಾತ್ರಿ ವೇಳೆ ಬೆಳೆ ಜಮೀನಿಗೆ ನುಗ್ಗುತ್ತಿವೆ. ಬಂಗಾರದ ಬೆಲೆ ಬಾಳುವ ಕಾಫಿ, ಅಡಕೆ, ತೆಂಗು, ಬಾಳೆ, ಜೋಳ ಮತ್ತಿತರ ಮತ್ತಿತರ ಬೆಳೆಗಳನ್ನು ತಿಂದು ತುಳಿದು ನಾಶಪಡಿಸುತ್ತಿವೆ. ಇತ್ತ ಬೆಳೆ ಕಳೆದುಕೊಂಡ ರೈತರಿಗೆ ಸಮರ್ಪಕವಾಗಿ ಪರಿಹಾರವೂ ಇಲ್ಲ, ಬೆಳೆ ಫಸಲೂ ಕೈಸೇರುತ್ತಿಲ್ಲ.

ಕಾಡಂಚಿಗೆ ಹೊಂದಿಕೊಂಡಿರುವ ಕೊಣನೂರು ಹೋಬಳಿಯ ತರಿಗಳಲೆ ಸುತ್ತಮುತ್ತಲಿನ ಗ್ರಾಮಗಳ ರೈತರು ನಿತ್ಯ ಕಾಡಾನೆಗಳ ಭಯ ದಲ್ಲೇ ದಿನ ದೂಡುವಂತಾಗಿದೆ. ಆನೆಗಳ ಕಾಟದಿಂದ ಬೆಳೆ ರಕ್ಷಣೆ ಮಾಡಿಕೊಳ್ಳುವ ಸಲುವಾಗಿ ಕೆಲ ರೈತರು ಬೆಸೂರು, ಬೂದನೂರು, ಬಾಗದಾಳು, ಹಿಪ್ಪಲಿ, ಕೆಳಗಲೆ, ಮದಲಾಪುರ ಭಾಗದಲ್ಲಿ ಜಮೀನು ಸುತ್ತ ಆಳವಾಗಿ ಟ್ರಂಚ್ ತೆಗೆಸಿದ್ದಾರೆ. ಸೋಲಾರ್ ತಂತಿ ಅಳವಡಿಸಿದ್ದರೂ ಬುದ್ಧಿವಂತ ಆನೆಗಳು ತಂತಿ ಮೇಲೆ ದಾಟುತ್ತಿವೆ. ಕಳೆದ ವಾರ ಹಗಲು ಹೊತ್ತಿನಲ್ಲೇ ಮಲ್ಲಿಪಟ್ಟಣ ಹೋಬಳಿಯ ಲಿಂಗದಹಳ್ಳಿ, ನಿಲುವಾಗಿಲು, ದಾಸನಕೊಣನೂರು ಭಾಗದಲ್ಲಿ ಹಗಲು ಹೊತ್ತಿನಲ್ಲೆ ಅಡ್ಡಾಡುತ್ತಿದ್ದ ಕಾಡಾನೆಯೊಂದು ಹಿಂಡಿನಿಂದ ತಪ್ಪಿಸಿಕೊಂಡು ಬಂದು ಗ್ರಾಮಸ್ಥರಲ್ಲಿ ಜೀವ ಭೀತಿ ಹುಟ್ಟಿಸಿತ್ತು. ಬೆಸೂರು ಅರಣ್ಯದಲ್ಲಿ ಬೀಡು ಬಿಟ್ಟಿದ್ದ ಐದು ಕಾಡಾನೆಗಳ ದಾಳಿ ತಪ್ಪಿಸುವ ಸಲುವಾಗಿ ಅರಣ್ಯ ಇಲಾಖೆ ಸಿಬ್ಬಂದಿ ಪಟಾಕಿ ಸಿಡಿಸಿ ಕಾಡಿಗಟ್ಟುತ್ತಿದ್ದರೂ ಸಂಜೆಯಾದೊಡನೆ ಬೆಳೆ ಜಮೀನಿನ ನುಗ್ಗುವುದನ್ನು ತಪ್ಪಿಸಲು ಸಾಧ್ಯವಾಗದೆ ಕೈಚೆಲ್ಲುವಂತಾಗಿತ್ತು.

ಸರ್ಕಾರ ಕಾಡಾನೆಗಳ ಹಾವಳಿಗೆ ಕಡಿವಾಣ ಹಾಕಿ ಶಾಶ್ವತ ಪರಿಹಾರ ಒದಗಿಸುತ್ತಿಲ್ಲ. ರೇಡಿಯೋ ಕಾಲರ್ ಕೂಡ ಅಳವಡಿಸಿಲ್ಲ. ಇನ್ನುಆನೆಗಳಿಗೆ ಕಾಡುಗಳಲ್ಲಿ ಹೊಟ್ಟೆ ತುಂಬ ಆಹಾರ ಸಿಗುತ್ತಿಲ್ಲ. ಹೀಗಾಗಿ ರೈತರು ಬೆಳೆದ ಬೆಳೆಗಳನ್ನೇ ಆಹಾರವಾಗಿ ಮಾಡಿಕೊಂಡಿದ್ದು ನಿತ್ಯ ಲಗ್ಗೆ ಇಡಲು ಕಾರಣವಾಗಿದೆ. ಆನೆಗಳ ಉಪಟಳದಿಂದ ರೋಸಿ ಹೋದ ಕೆಲವು ರೈತರು ಬೆಳೆ ಬೆಳೆಯುವುದನ್ನೇ ನಿಲ್ಲಿಸಿದ್ದಾರೆ. ಬೆಳೆ ಬೆಳೆದರೂ ಆನೆಗಳಿಗೆ ಆಹಾರವಾಗುತ್ತಿದ್ದು ಕಷ್ಟಪಟ್ಟು ಬೆಳೆದ ಅನ್ನದಾತರು ಮಾಡಿದ ಸಾಲ ತೀರಿಸಲು ಸಾಧ್ಯವಾಗದ ಚಿಂತೆಯಲ್ಲಿ ಮುಳುಗಿದ್ದಾರೆ. ಕಾಡಾನೆಗಳನ್ನು ನಿಯಂತ್ರಿಸುವಂತೆ ಹಲವು ಸಲ ಹೋರಾಟ ನಡೆಸಿದರೂ ಪ್ರಯೋಜವಾಗುತ್ತಿಲ್ಲ ಎನ್ನುತ್ತಾರೆ ಬೆಳೆಗಾರರು.

ನಾವಂತೂ ಕಾಡನೆಗಳ ದಾಳಿಯಿಂದ ಬೆಳೆ ಕಳೆದುಕೊಂಡು ನಷ್ಟ ಅನುಭವಿಸುವುದು ಸಾಕಾಗಿ ಹೋಗಿದೆ. ಕಟ್ಟೇಪುರ ಅರಣ್ಯ ಪ್ರದೇಶದ ಕಡೆಯಿಂದ ಬರುವ ಆನೆಗಳು ಬೆಳೆದು ನಿಂತಿದ್ದ ಅಡಕೆ, ತೆಂಗಿನ ಮರಗಳನ್ನು ಮುರಿದು ಚಿಕ್ಕ ಗಿಡಗಳನ್ನು ಸಿಗಿದು ಹಾಕುತ್ತಿವೆ. ಕಳೆದ 2022ರಲ್ಲಿ ಮನವಿ ಸಲ್ಲಿಸಿದರೂ ಇಂದಿಗೂ ಪರಿಹಾರ ಸಿಕ್ಕಿಲ್ಲ ಎಂದು ಪಾರಸಹಳ್ಳಿ ಮಹಿಳೆ ಶಾರದಮ್ಮ ಅಳಲು ತೋಡಿಕೊಳ್ಳುತ್ತಾರೆ.

ಪ್ರತಿ ವರ್ಷ ನಿರಂತರವಾಗಿ ಕಾಡಾನೆಗಳು ಬೆಳೆ ಜಮೀನಿಗೆ ದಾಳಿ ನಡೆಸುತ್ತಿದ್ದು ಅಪಾರ ಬೆಲೆ ಬಾಳುವ ಅಡಕೆ, ತೆಂಗು, ಕಾಫಿ, ಜೋಳದ ಬೆಳೆಗಳನ್ನು ಬಲಿ ಪಡೆದುಕೊಳ್ಳುತ್ತಿವೆ. ಸರ್ಕಾರ ಆನೆಗಳ ಹಾವಳಿಗೆ ಶಾಶ್ವತ ಪರಿಹಾರವನ್ನೂ ಒದಗಿಸುತ್ತಿಲ್ಲ. ಬೆಳೆ ಪರಿಹಾರವನ್ನೂ ಸಹ ನೀಡದೆ ಅರಣ್ಯ ಇಲಾಖೆ ಅಧಿಕಾರಿಗಳನ್ನು ಭೇಟಿ ಮಾಡಿ ರೋಸಿ ಹೋಗಿದ್ದೇವೆ.

ಮನ ರೈತ, ಮಾಗೋಡು ಪಾರಸನಹಳ್ಳಿ

ಕಾಡಾನೆಗಳ ದಾಳಿಯಿಂದ ಬೆಳೆ ಕಳೆದುಕೊಂಡ ಕೆಲವು ರೈತರಿಗೆ ಪರಿಹಾರ ವಿತರಿಸಲಾಗಿದೆ. ಇನ್ನುಳಿದ ಸಂತ್ರಸ್ತರಿಗೆ ಸರ್ಕಾರ ಪರಿಹಾರ ನೀಡಿದ ನಂತರ ನಿಯಮಾನುಸಾರ ವಿತರಣೆ ಮಾಡಲಾಗುವುದು. ಆನೆಗಳ ಹಾವಳಿ ತಪ್ಪಿಸಲು ಅರಣ್ಯ ಇಲಾಖೆ ಶ್ರಮಿಸುತ್ತಿದೆ.

ಶಂಕರ್ ಅರಣ್ಯ ಇಲಾಖೆ ಅಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net