

ಶೃಂಗೇರಿ: ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಯಲ್ಲಿ ಹಿಂದೆಬಿದ್ದಿದೆ. ಕ್ಷೇತ್ರ ಅಸಮರ್ಥ ಶಾಸಕರನ್ನು ಹೊಂದಿದೆ. ರೈತರ ಹಾಗೂ ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ನೀಡುವಲ್ಲಿ ಶಾಸಕ ಟಿ.ಡಿ.ರಾಜೇಗೌಡ ಸೋತಿದ್ದಾರೆ ಎಂದು ಮಾಜಿ ಶಾಸಕ ಡಿ.ಎನ್.ಜೀವರಾಜ್ ಟೀಕಿಸಿದರು.
ಮೆಣಸೆಯಲ್ಲಿ ಶನಿವಾರ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿ,
ಈ ಹಿಂದೆ ಟಿ.ಡಿ.ರಾಜೇಗೌಡ ಶಾಸಕರಾಗಿದ್ದಾಗ ಬಿಜೆಪಿ ಅಧಿಕಾರದಲ್ಲಿರುವುದರಿಂದ ಅಭಿವೃದ್ಧಿಗೆ ತೊಡಕಾಗಿದೆ ಎಂದು ಹೇಳುತ್ತಿದ್ದರು. ಈಗ ಪೂರ್ಣ ಬಹುಮತದ ಕಾಂಗ್ರೆಸ್ ಸರ್ಕಾರವಿದ್ದರೂ ಯಾವುದೇ ಅಭಿವೃದ್ಧಿ ಕಾರ್ಯವಾಗುತ್ತಿಲ್ಲ ಎಂದು ಟೀಕಿಸಿದರು.
ತಾಲೂಕಿಗೆ 100 ಬೆಡ್ ಆಸ್ಪತ್ರೆ ಮಂಜೂರಾಗಿದ್ದರೂ ಸ್ಥಳ ಗುರುತಿಸುವಲ್ಲಿ ಗೊಂದಲ ಮುಂದುವರಿದಿದೆ. ಆಸ್ಪತ್ರೆಯನ್ನು ಗ್ರಾಮೀಣ ಭಾಗದಲ್ಲಿ ಸ್ಥಾಪಿಸಿದರೆ ರೋಗಿಗಳಿಗೆ ಅನುಕೂಲವಾಗದು. ಅದನ್ನು ಪಟ್ಟಣದಲ್ಲಿಯೇ ಆರಂಭಿಸಬೇಕು ಎಂದು ಒತ್ತಾಯಿಸಿದರು.
ದೇಶದ ಉಳಿವಿಗಾಗಿ ಬಿಜೆಪಿ ಬೆಂಬಲಿಸಬೇಕಾಗಿದೆ. ತಳ ಹಂತದಿಂದ ರಾಜಕೀಯ ಅನುಭವ ಪಡೆದಿರುವ ಕೋಟ ಶ್ರೀನಿವಾಸ ಪೂಜಾರಿ ದೇವಸ್ಥಾನದ ಆದಾಯ ದೇಗುಲಗಳಿಗೆ ಮಾತ್ರ ಉಪಯೋಗವಾಗುವಂತೆ ಮಾಡಿದ್ದರು. ಕಾಂಗ್ರೆಸ್ ಸರ್ಕಾರ ಜನರಿಗೆ ಗ್ಯಾರಂಟಿ ಯೋಜನೆಯಿಂದ ಕೊಟ್ಟಿದ್ದಕ್ಕಿಂತ ಕಿತ್ತುಕೊಂಡಿರುವುದೇ ಹೆಚ್ಚು. ಗ್ಯಾರಂಟಿ ಯೋಜನೆಗಳು ಇರುವುದು ಕೆಲವಾರು ತಿಂಗಳು ಮಾತ್ರ. ನಮಗೆ ದೇಶ ಮುಖ್ಯ ಎಂದು ಹೇಳಿದರು.
ತಾಲೂಕು ಜೆಡಿಎಸ್ ಅಧ್ಯಕ್ಷ ಭರತ್ ಗೌಡ ಮಾತನಾಡಿ, ದೇಶದ ಉಳಿವಿಗಾಗಿ ಜೆಡಿಎಸ್ ಬಿಜೆಪಿಗೆ ಬೆಂಬಲ ನೀಡಿದೆ. ಪಕ್ಷದ ಕಾರ್ಯಕರ್ತರು ಬಿಜೆಪಿ ಅಭ್ಯರ್ಥಿ ಗೆಲುವಿಗಾಗಿ ಶ್ರಮಿಸಲಿದ್ದಾರೆ ಎಂದರು.
ಅಡ್ಡಗದ್ದೆ, ಧರೆಕೊಪ್ಪ, ಬೇಗಾನೆ, ಮೆಣಸೆ, ಶಿಡ್ಲೆ, ನೆಮ್ಮಾರ್, ಕೆರೆಕಟ್ಟೆ, ಕುತೂಗೋಡು, ಕಿಗ್ಗಾ ಗ್ರಾಪಂ ಕೆಲ್ಲಾರ್‌ನಲ್ಲಿ ಪ್ರಚಾರ ಸಭೆ ನಡೆಸಲಾಯಿತು.
ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ವಕ್ತಾರ ಬಿ.ಶಿವಶಂಕರ್, ಮಂಡಲ ಅಧ್ಯಕ್ಷ ಉಮೇಶ್ ತಲಗಾರು, ಬಿಜೆಪಿ ಮುಖಂಡರಾದ ಅಂಬ್ಲೂರು ರಾಮಕೃಷ್ಣ, ಕೆ.ಎಸ್.ರಮೇಶ್, ಅಜಿತ್ ಶೆಟ್ಟಿ, ತಾಲೂಕು ಜೆಡಿಎಸ್ ಅಧ್ಯಕ್ಷ ಭರತ್ ಗಿಣಕಲ್, ಮುಖಂಡರಾದ ದಿನೇಶ್ ಹೆಗಡೆ, ಆನಂದಸ್ವಾಮಿ ಇತರರಿದ್ದರು.