

ಸುಬ್ರಹ್ಮಣ್ಯ: ಗ್ರಾಮೀಣ ಭಾಗದಲ್ಲಿ ಅದೆಷ್ಟೋ ಸ್ಥಳೀಯ ರಸ್ತೆಗಳಿಗೆ ಇಂದಿಗೂ ಅಭಿವೃದ್ಧಿ ಭಾಗ್ಯ ಕೂಡಿ ಬಂದಿಲ್ಲ. ಇದರಿಂದ ಇಂದಿಗೂ ಅಲ್ಲಿನ ಜನರು ದುಸ್ತರ ರಸ್ತೆಯಲ್ಲಿ ಸಂಕಷ್ಟದ ಸಂಚಾರ ಮಾಡಬೇಕಾದ ಅನಿವಾರ್ಯತೆ ಬಂದೊದಗಿದೆ. ಸುಳ್ಯ ತಾಲೂಕಿನ ಪಂಜ ಸಮೀಪದ ಪೆರ್ಮಾಜೆ-ಪಂಬೆತ್ತಾಡಿ ಸಂಪರ್ಕ ರಸ್ತೆ ಅಭಿವೃದ್ಧಿ ಕಾಣದೆ ಸಂಚಾರ ನರಕ ಯಾತನೆ ಸ್ಥಿತಿಯಲ್ಲಿದೆ.
ಸುಳ್ಯ ತಾಲೂಕಿನ ಪಂಜ ಗ್ರಾಪಂ ವ್ಯಾಪ್ತಿ, ಕಲ್ಮಡ್ಕ ಗ್ರಾಪಂ ವ್ಯಾಪ್ತಿಯನ್ನು ಹೊಂದಿಕೊಂಡಿರುವ ಪಂಜದ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನ ಸಮೀಪದ ಪೆರ್ಮಾಜೆ, ಕಂರ್ಬಿ, ಕೋಟೆಗುಡ್ಡೆ, ಪಂಬೆತ್ತಾಡಿ ಸಂಪರ್ಕ ರಸ್ತೆ ಯಾವುದೇ ರೀತಿಯಲ್ಲಿ ಪೂರ್ಣ ಪ್ರಮಾಣದ ಅಭಿವೃದ್ಧಿಯಾಗದೆ ಇಂದಿಗೂ ಮಣ್ಣಿನ ರಸ್ತೆಯಾಗಿಯೇ ಉಳಿದು, ಸ್ಥಳೀಯರ ಸುಗಮ ಸಂಚಾರಕ್ಕೆ ಅಡ್ಡಿಯಾಗಿದೆ.
ಕೋಟೆಗುಡ್ಡೆ ಎಂಬಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆ, ಅಂಗನವಾಡಿ ಕೇಂದ್ರವಿದೆ. ಪಂಬೆತ್ತಾಡಿ ಭಾಗದ ಜನರು ಪಂಜ ದೇವಸ್ಥಾನ, ನಾಗತೀರ್ಥ ಆರೋಗ್ಯ ಉಪಕೇಂದ್ರ, ಪಂಜ ಆಸ್ಪತ್ರೆ, ಪಂಜ ಪೇಟೆ, ಕಲ್ಮಡ್ಕ ಗ್ರಾಪಂ ಕಚೇರಿ, ನ್ಯಾಯಬೆಲೆ ಅಂಗಡಿ, ಮತ್ತಿತರ ಕಡೆಗಳಿಗೆ ತೆರಳಲು ಇದೇ ರಸ್ತೆ ಅವಶ್ಯಕವಾಗಿದೆ. ಈ ರಸ್ತೆ ಅಭಿವೃದ್ಧಿ ಮಾಡುವಂತೆ ಕಳೆದ ಕೆಲ ವರ್ಷಗಳಿಂದ ಸರ್ಕಾರ, ಸ್ಥಳೀಯಾಡಳಿತ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದರೂ ಇದುವರೆಗೆ ಬೇಡಿಕೆ ಈಡೇರಿಸಲಾಗಿಲ್ಲ ಎಂದು ಊರವರು ಆರೋಪಿಸಿದ್ದಾರೆ. ಈ ರಸ್ತೆಯನ್ನು ಪೂರ್ಣಪ್ರಮಾಣದಲ್ಲಿ ಅಭಿವೃದ್ಧಿ ಮಾಡಲು ಸಂಬಂಧಿಸಿದವರು ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಈ ಭಾಗದ ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪಂಬೆತ್ತಾಡಿ ಭಾಗದಿಂದ ಕೋಟೆಗುಡ್ಡೆ-ಕಂರ್ಬಿ ಮೂಲಕ ಪೆರ್ಮಾಜೆ ಮುಖಾಂತರ ಪಂಜ ಪೇಟೆ ಸಂಪರ್ಕಿಸುವ ಈ ರಸ್ತೆ ಪಂಚಾಯಿತಿ ರಸ್ತೆಯಾಗಿ ಗುರುತಿಸಿಕೊಂಡಿದ್ದು, ಸುಮಾರು 3.5 ಕಿ.ಮೀ. ಉದ್ದವಿದೆ. ಈ ರಸ್ತೆಯ ಮೂರು ಕಡೆಗಳಲ್ಲಿ ಸೇತುವೆ ಇದೆ. ಇಲ್ಲಿ ಕೆಲ ದೂರ ಕಾಂಕ್ರೀಟ್ ರಸ್ತೆ ನಿರ್ಮಾಣಗೊಂಡಿದ್ದು, ಉಳಿದ ಕಡೆಗಳಲ್ಲಿ ಇದುವರೆಗೆ ರಸ್ತೆ ಅಭಿವೃದ್ಧಿಗೊಂಡಿಲ್ಲ. ಮಳೆಗಾಲದಲ್ಲಿ ಕೆಸರುಮಯಗೊಳ್ಳುವ ಈ ರಸ್ತೆ, ಬೇಸಿಗೆಯಲ್ಲಿ ಧೂಳುಮಯವಾಗಿರುತ್ತದೆ. ಶಾಲಾ ಮಕ್ಕಳು, ಸಾರ್ವಜನಿಕರು ನಡೆದಾಡಲು ಸಾಧ್ಯವಾಗದ ಸ್ಥಿತಿ ಇರುತ್ತದೆ ಎನ್ನುವುದು ಸ್ಥಳೀಯರ ಆರೋಪ.
ಮಳೆಗಾಲದಲ್ಲಿ ಈ ರಸ್ತೆ ಸಂಪೂರ್ಣ ಹದಗೆಟ್ಟು ವಾಹನಗಳ ಸಂಚಾರಕ್ಕೆ ಸಮಸ್ಯೆ ಆಗುತ್ತಿರುವುದಿಂದ ವಾಹನಗಳನ್ನು ಕೆಲವೊಮ್ಮೆ ಒಂದೆಡೆ ನಿಲ್ಲಿಸಿ ಮನೆಗೆ ತೆರಳುವ ಸ್ಥಿತಿ ಇಲ್ಲಿದೆ. ಅನಾರೋಗ್ಯ ಉಂಟಾದಲ್ಲಿ ತುರ್ತು ಸಂದರ್ಭದಲ್ಲಿ ಆಂಬುಲೆನ್ಸ್ ಸಂಚಾರಕ್ಕೂ ಪರದಾಟ ನಡೆಸುವ ಸ್ಥಿತಿ ಇಲ್ಲಿದೆ ಎನ್ನುವುದು ಸ್ಥಳೀಯರ ಆರೋಪ. ಹೊಂಡ-ಗುಂಡಿ, ಕೆಸರುಮಯ, ಧೂಳುಮಯ ರಸ್ತೆಯಲ್ಲಿ ಎದ್ದು-ಬಿದ್ದು ಸಂಚರಿಸಬೇಕಾದ ಸ್ಥಿತಿಯಲ್ಲಿ ಇಲ್ಲಿನ ಜನ ದಿನ ದೂಡುತ್ತಿದ್ದಾರೆ.
ಪೆರ್ಮಾಜೆ-ಪಂಬೆತ್ತಾಡಿ ಸಂಪರ್ಕ ರಸ್ತೆ ಅಭಿವೃದ್ಧಿ ಆಗದೆ ಸಂಚರಿಸಲು ಕಷ್ಟವಾಗುತ್ತಿದೆ. ಮಳೆಗಾಲದಲ್ಲಂತೂ ಈ ರಸ್ತೆ ತೀರ ಹದಗೆಟ್ಟು ತೀವ್ರ ತೊಂದರೆ ಅನುಭವಿಸಬೇಕಾಗುತ್ತಿದೆ. ಈ ರಸ್ತೆಯನ್ನು ಕಾಂಕ್ರೀಟೀಕರಣ ರಸ್ತೆಯಾಗಿ ಅಭಿವೃದ್ಧಿ ಮಾಡಬೇಕು. ಜಯಶ್ರೀ ಸಂಪ, ಸ್ಥಳೀಯರು
ಜಯಶ್ರೀ ಸಂಪ, ಸ್ಥಳೀಯರು