

ಮೂಡಲಗಿ: ಸಮೀಪದ ಗುರ್ಲಾಪುರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ 3 ಕಿ.ಮೀ. ರಸ್ತೆ ಸುಮಾರು 9 ವರ್ಷಗಳಿಂದ ರಿಪೇರಿ ಭಾಗ್ಯವನ್ನೇ ಕಂಡಿಲ್ಲ.
ಅಧಿಕಾರಿಗಳ ನಿರ್ಲಕ್ಷೃಕ್ಕೆ ಬೇಸತ್ತಿರುವ ವಾಹನ ಸವಾರರು ಪರ್ಯಾಯ ಮಾರ್ಗವಿಲ್ಲದೆ ನಿತ್ಯ ಸಮಸ್ಯೆ ಅನುಭವಿಸುತ್ತ ಇದೇ ಮಾರ್ಗದಲ್ಲಿ ಸಂಚಾರ ಮಾಡುತ್ತಿದ್ದಾರೆ.
ಈಡೇರದ ಕನಸು: ಗುರ್ಲಾಪುರ ಗ್ರಾಮವು ಮೂಡಲಗಿ ಪುರಸಭೆ ವ್ಯಾಪ್ತಿಗೆ ಸೇರಿದ ನಂತರ ಗ್ರಾಮಸ್ಥರು ರಸ್ತೆ ಸುಧಾರಣೆಯಾಗಬಹುದು ಎಂದು ಕನಸು ಕಂಡಿದ್ದರು. ಆದರೆ, ಬೇಡಿಕೆ ಮಾತ್ರ ಇನ್ನೂ ಈಡೇರಿಲ್ಲ. ಸಂಬಂಧಿಸಿದ ಅಧಿಕಾರಿಗಳು ಕ್ರಮಕ್ಕೂ ಮುಂದಾಗಿಲ್ಲ.
ಹೆಜ್ಜೆ ಹೆಜ್ಜೆಗೂ ತಗ್ಗುಗಳಿಂದ ಕೂಡಿರುವ ಇಕ್ಕಟ್ಟಾದ ರಸ್ತೆಯ ಸುಧಾರಣೆ ಜವಾಬ್ದಾರಿ ತಮ್ಮದಲ್ಲ ಎಂದು ಪುರಸಭೆಯವರು ನೀರಾವರಿ ಇಲಾಖೆಯತ್ತ ಕೈ ತೋರಿಸುತ್ತಾರೆ. ನೀರಾವರಿ ಇಲಾಖೆ ಅಧಿಕಾರಿಗಳು ಲೋಕೋಪಯೋಗಿ ಇಲಾಖೆಯ ಹೆಸರು ಹೇಳುತ್ತಾರೆ. ಇದರಿಂದ ರಸ್ತೆಗೆ ನಿಜವಾದ ವಾರಸುದಾರರು ಯಾರು ಎಂಬುದು ಪ್ರಶ್ನೆಯಾಗಿ ಕಾಡುತ್ತಿದೆ. ಇಂತಹ ಪರಿಸ್ಥಿತಿ ಇತರ ಯಾವುದೇ ರಸ್ತೆಗಳಿಗೆ ಬಂದಂತೆ ಕಾಣುತ್ತಿಲ್ಲ ಎನ್ನುವುದು ವಾಹನ ಸವಾರರು ಹಾಗೂ ಸಾರ್ವಜನಿಕರ ಕಳವಳವಾಗಿದೆ.
ಇದೇ ರೀತಿ ಪಟ್ಟಣದ ಕಲ್ಮೇಶ್ವರ ಸರ್ಕಲ್‌ನಿಂದ ಎಪಿಎಂಸಿ ವರೆಗಿನ ರಸ್ತೆ ಹಾಗೂ ಗೋಕಾಕ ಸೇರುವ ರಸ್ತೆಗಳು ಕೂಡ ಹದಗೆಟ್ಟಿವೆ. ಉಭಯ ರಸ್ತೆಗಳು ವರ್ಷ ಮುಗಿದರೂ ಇನ್ನೂ ದುರಸ್ತಿ ಭಾಗ್ಯ ಕಂಡಿಲ್ಲ. ಅನೇಕ ವಾಹನ ಸವಾರರು ಈ ರಸ್ತೆಯಲ್ಲಿ ಬಿದ್ದು ಗಾಯಗೊಂಡಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳಿಗೆ ವಾಹನ ಸವಾರರು ಮನವಿ ಸಲ್ಲಿಸಿ ಬೇಸರಗೊಂಡಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕು ಎಂದು ಸ್ಥಳೀಯ ನಿವಾಸಿಗಳು ಹಾಗೂ ವಾಹನ ಸವಾರರು ಆಗ್ರಹಿಸಿದ್ದಾರೆ.
ಪುರಸಭೆ ಕ್ರಿಯಾಯೋಜನೆಯಲ್ಲಿ ರಸ್ತೆ ರಿಪೇರಿಗೆ 45 ಲಕ್ಷ ರೂ. ಅನುದಾನ ಮಂಜೂರಾಗಿದ್ದು, ಟೆಂಡರ್ ಕರೆಯಲಾಗಿದೆ. ಕಲ್ಮೇಶ್ವರ ವೃತ್ತದಿಂದ ಗೋಕಾಕ ಕ್ರಾಸ್ ರಸ್ತೆ ರಿಪೇರಿಗಾಗಿ ಕ್ರಿಯಾಯೋಜನೆ ತಯಾರಿಸಲಾಗುತ್ತಿದೆ. ಶೀಘ್ರ ಉಭಯ ಕಾಮಗಾರಿ ಆರಂಭಿಸಲಾಗುವುದು.| ದೀಪಕ ಹರ್ದಿ ಪುರಸಭೆ ಮುಖ್ಯಾಧಿಕಾರಿ