ಭೂಗತ ಪಾತಕಿ ರವಿ ಪೂಜಾರಿ ಸಹಚರ ಮೊಹಮ್ಮದ್ ಹನೀಫ್ ಬಂಧನ

mng--24 Oct Mohammad Haneef
Published on

ಮಂಗಳೂರು: ಭೂಗತ ಪಾತಕಿ ರವಿ ಪೂಜಾರಿ ಹಾಗೂ ಕಲಿ ಯೋಗೀಶನ ಸಹಚರ ಮೊಹಮ್ಮದ್ ಹನೀಫ್ ಯಾನೆ ಅಲಿ ಮುನ್ನಾ ಎಂಬಾತನನ್ನು ಕೊಣಾಜೆ ಪೊಲೀಸರು ಕೇರಳದಲ್ಲಿ ಬಂಧಿಸಿದ್ದಾರೆ.


ಶಾರ್ಪ್ ಶೂಟರ್ ಆಗಿದ್ದ ಕೇರಳದ ಮಂಜೇಶ್ವರ ನಿವಾಸಿ ಮೊಹಮ್ಮದ್ ಹನೀಫ್, ರವಿ ಪೂಜಾರಿಯ ಪಾತಕ ಕೃತ್ಯಗಳಿಗೆ ಕರಾವಳಿ ಭಾಗದಲ್ಲಿ ಸಹಕಾರ ನೀಡುತ್ತಿದ್ದ. ಈತನ ವಿರುದ್ಧ ಹಲವು ಶೂಟೌಟ್, ದರೋಡೆ, ಬೆದರಿಕೆ ಪ್ರಕರಣಗಳು ದಾಖಲಾಗಿದ್ದು, ಬಂಧನ ವಾರಂಟ್ ಜಾರಿಯಾಗಿತ್ತು.


ಕೊಣಾಜೆ, ಮಂಗಳೂರು ಉತ್ತರ, ಪುತ್ತೂರು, ಬರ್ಕೆ, ವಿಟ್ಲ, ಉಳ್ಳಾಲ, ಬೆಂಗಳೂರು ಸೇರಿ ಅನೇಕ ಠಾಣೆಗಳಲ್ಲಿ ಈತನ ವಿರುದ್ಧ ಪ್ರಕರಣಗಳಿವೆ. ಅಲ್ಲದೆ 2013ರಲ್ಲಿ ಕಾಸರಗೋಡು ಬೇವಿಂಜ ಪಿಡಬ್ಲ್ಯುಡಿ ಗುತ್ತಿಗೆದಾರರ ಶೂಟೌಟ್ ಪ್ರಕರಣ, ಮಂಜೇಶ್ವರದಲ್ಲಿ ಕಳ್ಳತನ, ಕುಂಬಳೆ ಹಾಗೂ ವಿದ್ಯಾನಗರ ಠಾಣೆಯಲ್ಲೂ ವಿವಿಧ ಪ್ರಕರಣಗಳು ದಾಖಲಾಗಿವೆ. ಮುಖ್ಯವಾಗಿ, ಮಂಗಳೂರಿನ ಸಂಜೀವ ಶೆಟ್ಟಿ ಸಿಲ್ಕ್ಸ್ ಮಳಿಗೆ ಮತ್ತು ಪುತ್ತೂರು ರಾಜಧಾನಿ ಜ್ಯುವೆಲ್ಲರ್ಸ್ ಶೂಟೌಟ್ ಪ್ರಕರಣದ ಆರೋಪಿಯೂ ಆಗಿದ್ದಾನೆ.


ಎಸಿಪಿ ಧನ್ಯಾ ನಾಯಕ್ ನೇತೃತ್ವದಲ್ಲಿ ಕೊಣಾಜೆ ಪೊಲೀಸರು ಕಾರ್ಯಾಚರಣೆ ನಡೆಸಿ ಮೊಹಮ್ಮದ್ ಹನೀಫ್‌ನನ್ನು ಬಂಧಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net