

ಮಂಗಳೂರು : ಸದಾ ಒಂದಲ್ಲೊಂದು ಅವಾಂತರಗಳಿಂದ ಸುದ್ದಿಯಲ್ಲಿರುವ ಮಂಗಳೂರು ಜೈಲ್‌ನಲ್ಲಿ ಭಾನುವಾರ ಬೆಳಗ್ಗಿನ ಜಾವ ವಿಚಾರಣಾಧೀನ ಕೈದಿಯೋರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೂಡುಬಿದಿರೆ ಠಾಣೆಯ ಪೋಕ್ಸೋ ಪ್ರಕರಣದಲ್ಲಿ ಬಂಧಿತನಾಗಿದ್ದ ಪ್ರಕಾಶ್ (57) ಆತ್ಮಹತ್ಯೆಗೆ ಶರಣಾದ ಕೈದಿ. ತನ್ನ ಶಾಲನ್ನು ಶೌಚಗೃಹದ ಕಿಟಕಿಗೆ ಕಟ್ಟಿ ನೇಣು ಬಿಗಿದುಕೊಂಡಿದ್ದಾನೆ. ಭಾನುವಾರ ನಸುಕಿನ 4ರಿಂದ 4.50ರ ನಡುವೆ ಘಟನೆ ನಡೆದಿದೆ. ಕೆಲಸ ಸಮಯದ ಬಳಿಕ ಜೈಲು ಸಿಬಂದಿ ಗಮನಿಸಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಷ್ಟರಲ್ಲಿ ಆತ ಮೃತಪಟ್ಟಿದ್ದ.
ಬಾಲಕಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಮಾ.11ರಂದು ನ್ಯಾಯಾಂಗ ಬಂಧನಕ್ಕೆ ಒಳಗಾಗಿ ಮಂಗಳೂರು ಜೈಲು ಸೇರಿದ್ದ. ಫೋಕ್ಸೋ ಪ್ರಕರಣದಲ್ಲಿ ಬೇಗ ಜಾಮೀನು ಸಿಗುವುದಿಲ್ಲ. ಜೈಲಿನಿಂದ ಬಿಡಿಸಲು ಯಾರು ಕೂಡ ಬರುವುದಿಲ್ಲ ಎಂದು ಜಿಗುಪ್ಸೆಯಿಂದ ಸಾವಿಗೆ ಶರಣಾಗಿದ್ದಾನೆ ಎನ್ನಲಾಗುತ್ತಿದೆ.
ಮೂಡುಬಿದಿರೆ ಲಾಡಿಯಲ್ಲಿ ನೆಲೆಸಿದ್ದ ಪ್ರಕಾಶ್ ಬೆಳಗಾವಿ ಮೂಲದ ಕೂಲಿ ಕಾರ್ಮಿಕನಾಗಿದ್ದು, ವಿಪರೀತ ಕುಡಿತದ ಚಟ ಹೊಂದಿದ್ದ. ಅಲ್ಲಿಯೇ ಪರಿಸರದ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಅತ್ಯಾಚಾರ ಮಾಡಿದ್ದಲ್ಲದೆ, ಅದರ ವಿಡಿಯೋ ಮಾಡಿಟ್ಟು ಬ್ಲಾಕ್‌ಮೇಲ್ ಮಾಡುತ್ತಿದ್ದ. ಆತನ ಮೊಬೈಲ್ ನಲ್ಲಿ ವಿಡಿಯೋ ಸಿಕ್ಕಿದ್ದು ಪೊಲೀಸರು ಆರೋಪಿ ವಿರುದ್ಧ ಪೋಕ್ಸೋ ಪ್ರಕರಣ ದಾಖಲಿಸಿ ಬಂಧಿಸಿದ್ದರು.
ಮನೆಯಲ್ಲಿ ಪತ್ನಿಗೆ ಕುಡಿದು ಬಂದು ಹೊಡೆಯುತ್ತಿದ್ದುದರಿಂದ ಬಂಧನ ಆಗಿದ್ದರೂ ನೋಡಲು ಬಂದಿರಲಿಲ್ಲ. ಜಿಗುಪ್ಪೆಗೊಂಡು ನೇಣಿಗೆ ಶರಣಾಗಿದ್ದಾನೆ ಎನ್ನುವ ಮಾಹಿತಿ ಪೊಲೀಸರದ್ದು. ಈ ಬಗ್ಗೆ ಮಂಗಳೂರಿನ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಂಗಳೂರು ಜೈಲ್‌ನಲ್ಲಿ ಕೈದಿಗಳ ಹೊಡೆದಾಟ, ಕೈದಿಗಳಿಂದ ಸಿಬಂದಿಗಳ ಮೇಲೆ ಹಲ್ಲೆ, ಗಾಂಜಾ ಸಾಗಾಟ, ನಿಷೇಧಿತ ಸೊತ್ತುಗಳ ಬಳಕೆ ಮೊದಲಾದ ವಿಚಾರಗಳಲ್ಲಿ ಪ್ರಕರಣಗಳು ದಾಖಲಾಗುತ್ತಲೇ ಇದೆ. ಕೆಲವು ದಿನಗಳ ಹಿಂದೆ ಗಾಂಜಾ ಹೊಂದಿದ್ದ ಪೊಟ್ಟಣವನ್ನು ಜೈಲ್ ಆವರಣದೊಳಗೆ ಬಿಸಾಡಿದ ಪ್ರಕರಣವೂ ಸುದ್ದಿಯಾಗಿತ್ತು. ಈ ಹಿನ್ನೆಯಲ್ಲಿ ಬಂಧೀಖಾನೆ ಇಲಾಖೆ ಡಿಐಜಿ ದಿವ್ಯಶ್ರೀ ಅವರು ಮಂಗಳೂರಿನಲ್ಲಿ ವಾಸ್ತವ್ಯವಿದ್ದು, ಜೈಲ್‌ನ ಆಗು ಹೋಗುಗಳ ಮೇಲೆ ಕಣ್ಣಿಟ್ಟಿದ್ದಾರೆ. ಈ ಸಂದರ್ಭಲ್ಲೇ ವಿಚಾರಣಾಧೀನ ಕೈದಿಯೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.