ಗಾಂಧಿ, ಅಂಬೇಡ್ಕರ್ ಚಿಂತನೆ ಅರ್ಥೈಸಿಕೊಳ್ಳಿ: ಯುವ ಸಮೂಹಕ್ಕೆ ಅಂಕಣಕಾರ ರಾಮಚಂದ್ರ ಗುಹಾ ಕಿವಿಮಾತು

14
Published on

ಮೈಸೂರು: ಗಾಂಧೀಜಿ ದೇವರನ್ನು ನಂಬಿದರೆ, ಅಂಬೇಡ್ಕರ್ ತರ್ಕ ಮತ್ತು ವಿಚಾರಗಳನ್ನು ತಮ್ಮ ಚಿಂತನೆಯ ಮೂಲವನ್ನಾಗಿಸಿಕೊಂಡಿದ್ದರು ಎಂದು ಅಂಕಣಕಾರ ರಾಮಚಂದ್ರ ಗುಹಾ ಪ್ರತಿಪಾದಿಸಿದರು.
ಮೈಸೂರು ವಿಶ್ವವಿದ್ಯಾಲಯದ ಗಾಂಧಿ ಅಧ್ಯಯನ ಕೇಂದ್ರದಿಂದ ಮಾನಸಗಂಗೋತ್ರಿಯ ಗಾಂಧಿ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಮಹಾತ್ಮಗಾಂಧಿ-ಡಾ.ಬಿ.ಆರ್.ಅಂಬೇಡ್ಕರ್ ಪ್ರಸ್ತುತತೆ ಕುರಿತ ಮಾತುಕತೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸ್ವಾತಂತ್ರ್ಯ ಪೂರ್ವದಲ್ಲಿ ಗಾಂಧಿ ಹೊರತುಪಡಿಸಿ ಮೇಲ್ವರ್ಗದ ಯಾವ ನಾಯಕರೂ ದಲಿತರ ಬಗ್ಗೆ ಚಿಂತಿಸಲಿಲ್ಲ. ಅಸ್ಪೃಶ್ಯತೆ ವಿರುದ್ಧ ಧ್ವನಿ ಎತ್ತಿ, ದೇವಾಲಯಗಳಿಗೆ ದಲಿತರಿಗೆ ಪ್ರವೇಶ ನೀಡಿದರು ಎನ್ನುವ ಕಾರಣಕ್ಕೆ ಗಾಂಧಿಯನ್ನೇ ಹಿಂದು ಧರ್ಮದಿಂದ ಹೊರಹಾಕುವ ಪ್ರಯತ್ನ ನಡೆದಿತ್ತು ಎಂದು ಹೇಳಿದರು.
ಗಾಂಧೀಜಿಗೆ ಅಸ್ಪಶ್ಯತೆ ನಿವಾರಣೆ ಒಂದೇ ಕಾರ್ಯಕ್ರಮವಾಗಿರಲಿಲ್ಲ. ಸ್ವಾತಂತ್ರ್ಯ ಹೋರಾಟ, ಮುಸ್ಲಿಮರ ಸಮಸ್ಯೆ ಸೇರಿದಂತೆ ಹಲವು ಕಾರ್ಯಕ್ರಮಗಳಿಗಿದ್ದವು. ನೆಹರೂ, ಪಟೇಲ್, ಭಗತ್‌ಸಿಂಗ್ ಸಹಿತ ಮೇಲ್ವರ್ಗದ ಯಾವ ನಾಯಕರೂ ಅಸ್ಪಶ್ಯತೆ ಬಗ್ಗೆ ಮಾತನಾಡದಿದ್ದಾಗ ಗಾಂಧೀಜಿ ಅಸ್ಪಶ್ಯತೆ ನಿವಾರಣೆ ಕಾರ್ಯಕ್ರಮ ರೂಪಿಸಿದರು ಎಂದು ಹೇಳಿದರು.
ಗಾಂಧೀಜಿಗಿಂತ ಅಂಬೇಡ್ಕರ್ 27 ವರ್ಷ ಚಿಕ್ಕವರಾದರೂ ಇಬ್ಬರ ನಡುವೆ ಒಂದು ತಲೆಮಾರಿನ ವ್ಯತ್ಯಾಸವೇ ಇತ್ತು. ಅಸ್ಪೃಶ್ಯತೆ ಎನ್ನುವುದು ಗಾಂಧಿಗೆ ಹೊರಗಿನ ಭಾವವಾಗಿದ್ದರೆ, ಅಂಬೇಡ್ಕರ್‌ಗೆ ಅದು ತನ್ನೊಳಗಿನ ಅನುಭವ ಆಗಿತ್ತು ಎಂದು ವಿವರಿಸಿದರು.
ಅಸ್ಪೃಶ್ಯತೆ ವಿರುದ್ಧ ಗಾಂಧಿ ಹೋರಾಟ ಮಾಡುತ್ತಿದ್ದರೆ, ಮತ್ತೊಂದೆಡೆ ಕಾಂಗ್ರೆಸ್‌ನಲ್ಲಿ ಬಹುತೇಕ ಬ್ರಾಹ್ಮಣರೇ ಇದ್ದರು. ಹೀಗಾಗಿ ಇವರ ಕೈಗೆ ದೇಶದ ಅಧಿಕಾರ ಸಿಕ್ಕರೆ ದಲಿತರ ಉದ್ಧಾರ ಸಾಧ್ಯವಿಲ್ಲ ಎನ್ನುವ ಕಾರಣಕ್ಕೆ ಅಂಬೇಡ್ಕರ್ ಕಾಂಗ್ರೆಸ್ ಸೇರಲು ಒಪ್ಪಿರಲಿಲ್ಲ ಎಂದು ಹೇಳಿದರು.
ಅಂಬೇಡ್ಕರ್ ಅವರು ಸಂವಿಧಾನ ಸಮರ್ಪಿಸುವ ಮುನ್ನ ಭಕ್ತಿ ಮತ್ತು ಧರ್ಮ ಮನಸ್ಸಿನ ಶಾಂತಿಗೆ ಅಗತ್ಯ. ಭಕ್ತಿ ಹಾಗೂ ಧರ್ಮವನ್ನು ರಾಜಕೀಯಕ್ಕೆ ಬೆರೆಸಿದರೆ ಸರ್ವಾಧಿಕಾರಕ್ಕೆ ದಾರಿಯಾಗುತ್ತದೆಂದು ಎಚ್ಚರಿಸಿದ್ದರು. ಆದರೆ ಅವರ ಎಚ್ಚರಿಕೆಯನ್ನು ಮೀರಿ ಇವತ್ತಿನ ಪರಿಸ್ಥಿತಿ ಅಂಬೇಡ್ಕರ್ ಹೇಳಿಕೆಯಂತೆ ರಾಜಕೀಯದಲ್ಲಿ ಧರ್ಮ ಬೆರೆತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಗಾಂಧೀಜಿ- ಅಂಬೇಡ್ಕರ್ ಇಬ್ಬರ ಚಿಂತನೆಗಳು ಭಿನ್ನವಾಗಿ ಕಂಡರೂ ಆಂತರ್ಯದಲ್ಲಿ ಗುರಿ ಒಂದೇ ಆಗಿದೆ. ಹಾಗಾಗಿ, ವರ್ತಮಾನಕ್ಕೆ ತಕ್ಕಂತೆ ಇಬ್ಬರನ್ನೂ ಅರ್ಥೈಸಿಕೊಳ್ಳುವ ಪ್ರಯತ್ನವನ್ನು ಯುವಸಮೂಹ ಮಾಡಬೇಕು ಎಂದು ಸಲಹೆ ನೀಡಿದರು.
ಸಾಹಿತಿ ದೇವನೂರ ಮಹಾದೇವ ಮಾತನಾಡಿ, ಸನಾತನ ಹಿಂದು ನನ್ನ ಧರ್ಮವೆಂದು ಹೇಳಿದ್ದ ಗಾಂಧೀಜಿ, ಕೊನೆಗೆ ಸಹನೆ ಮತ್ತು ಪ್ರೀತಿ ನನ್ನ ಧರ್ಮ ಎಂದರು. ಅಂಬೇಡ್ಕರ್ ಕೂಡ ಅಂತಿಮ ದಿನಗಳಲ್ಲಿ ಕಾರುಣ್ಯ ನನ್ನ ಧರ್ಮ ಎಂದರು. ಸ್ವಭಾವತಃ ಧಾರ್ಮಿಕ ವ್ಯಕ್ತಿಗಳಾದ ಇಬ್ಬರೂ ಹೇಳುತ್ತಿರುವುದು ಒಂದೇ ಎಂದು ಅಭಿಪ್ರಾಯಪಟ್ಟರು.
ಯುವಕರು ಓದಬೇಕು. ಮನನ ಮಾಡಬೇಕು. ಅವುಗಳನ್ನು ಮಗುವಿನ ಮನಸ್ಸಿನಿಂದ ನೋಡಬೇಕು. ಆ ಕಾಲಘಟ್ಟದಲ್ಲಿ ನಡೆದ ಘಟನೆಗಳಿಗೆ ಚೌಕಟ್ಟು ಹಾಕಿ ಕಿತ್ತಾಡುವುದನ್ನು ಬಿಟ್ಟು, ವರ್ತಮಾನದ ಬದುಕನ್ನು ನೋಡುತ್ತ ಮುಂದೆ ಸಾಗಬೇಕು ಎಂದು ಗಾಂಧಿ-ಅಂಬೇಡ್ಕರ್ ನಡುವಿನ ಭಿನ್ನಾಭಿಪ್ರಾಯ ಕುರಿತ ಪ್ರಶ್ನೆಯೊಂದಕ್ಕೆ ದೇವನೂರು ಉತ್ತರಿಸಿದರು.
ಗಾಂಧಿ- ಅಂಬೇಡ್ಕರ್ ಅವರನ್ನು ಇಕ್ಕಟ್ಟಿಗೆ ಸಿಲುಕಿಸಲಾಗಿದೆ. ಇಬ್ಬರ ನಡುವೆ ಭಿನ್ನಾಭಿಪ್ರಾಯ ಇದೆ. ಗಾಂಧೀಜಿ ಅಸ್ಪಶ್ಯತೆ ಪಾಪ ಎಂದರೆ, ಅಂಬೇಡ್ಕರ್ ಅಪರಾಧ ಎಂದರು. ಇವರಿಬ್ಬರ ಆಂತರ್ಯದ ಆಲೋಚನೆಯ ಮೂಲ ಬೇರೆ ಬೇರೆ ತರ ಇದೆ ಎನ್ನುತ್ತಾರೆ. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಅಂಬೇಡ್ಕರ್-ಗಾಂಧೀಜಿ ಕೊನೆಯ ದಿನಗಳನ್ನು ನೋಡಬೇಕು ಎಂದು ಕಿವಿ ಮಾತು ಹೇಳಿದರು.
ನಂತರ ಆಸಕ್ತರೊಂದಿಗೆ ಸಂವಾದ ನಡೆಯಿತು. ಸಾಹಿತಿ ವಿವೇಕ ಶಾನಭಾಗ, ಗಾಂಧಿ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ. ಎಸ್.ನರೇಂದ್ರ ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net