

ಧಾರವಾಡ: ಪ್ರಸ್ತುತ ಡಿಜಿಟಲ್ ಕ್ರಾಂತಿ, ಕೃತಕ ಬುದ್ಧಿಮತ್ತೆ, ಸೈಬರ್ ಕಾನೂನು, ದತ್ತಾಂಶ ರಕ್ಷಣೆ ಮತ್ತು ಅಂತರರಾಷ್ಟ್ರೀಯ ನ್ಯಾಯ ಕ್ಷೇತ್ರಗಳಲ್ಲಿ ತ್ವರಿತ ಬದಲಾವಣೆಗಳು ನಡೆಯುತ್ತಿವೆ. ಆದ್ದರಿಂದ, ನಮ್ಮ ಕಾನೂನು ವಿದ್ಯಾರ್ಥಿಗಳು ಸಾಂಪ್ರದಾಯಿಕ ಕಾನೂನುಗಳಲ್ಲಿ ಜ್ಞಾನವನ್ನು ಪಡೆದುಕೊಳ್ಳುವುದರ ಜತೆಗೆ ಸಮಕಾಲೀನ ತಾಂತ್ರಿಕ ಮತ್ತು ಜಾಗತಿಕ ಸವಾಲುಗಳನ್ನು ಅರ್ಥಮಾಡಿಕೊಳ್ಳುವಲ್ಲಿ ಮುಂಚೂಣಿಯಲ್ಲಿರುವುದು ಅತ್ಯಗತ್ಯವಾಗಿದೆ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.
ಹುಬ್ಬಳ್ಳಿಯಲ್ಲಿ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ 7ನೇ ಘಟಿಕೋತ್ಸವದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ನ್ಯಾಯದ ಪ್ರವೇಶವು ಪ್ರತಿಯೊಬ್ಬ ನಾಗರಿಕನ ಹಕ್ಕು ಮತ್ತು ತಂತ್ರಜ್ಞಾನವು ಅದನ್ನು ಸಬಲೀಕರಣಗೊಳಿಸುವ ಸಾಧನವಾಗಿದೆ. ಇ-ಕೋರ್ಟ್‌ಗಳು, ಆನ್‌ಲೈನ್ ಕಾನೂನು ನೆರವು ಮತ್ತು ಡಿಜಿಟಲ್ ಕಾನೂನು ಶಿಕ್ಷಣದಂತಹ ಉಪಕ್ರಮಗಳು ಈ ದಿಕ್ಕಿನಲ್ಲಿ ಮೈಲಿಗಲ್ಲುಗಳಾಗಿವೆ. ಈ ನಾವೀನ್ಯತೆಗಳಲ್ಲಿ ಕಾನೂನು ವಿದ್ಯಾರ್ಥಿಗಳು ಸಕ್ರಿಯ ಪಾತ್ರ ವಹಿಸಬೇಕು ಮತ್ತು ನ್ಯಾಯ ವ್ಯವಸ್ಥೆಯನ್ನು ಹೆಚ್ಚು ಪಾರದರ್ಶಕ ಮತ್ತು ಸುಲಭವಾಗಿಸಬೇಕು ಎಂದು ಕರೆ ನೀಡಿದರು.
ಡಾ. ಭೀಮರಾವ್ ಅಂಬೇಡ್ಕರ್ ಅವರ ಕಾನೂನಿನ ವಿಧಾನವು ಆಳವಾದ, ಪ್ರಾಯೋಗಿಕ ಮತ್ತು ಮಾನವೀಯವಾಗಿತ್ತು. ಅವರು ಕಾನೂನನ್ನು ಸಾಮಾಜಿಕ ಬದಲಾವಣೆಗೆ ಪ್ರಾಥಮಿಕ ಸಾಧನವೆಂದು ಪರಿಗಣಿಸಿದರು. ಕಾನೂನು ಎಲ್ಲರಿಗೂ ಸಮಾನವಾಗಿದ್ದಾಗ ಮತ್ತು ಪ್ರತಿಯೊಬ್ಬ ವ್ಯಕ್ತಿಗೂ ಸಮಾನ ಅವಕಾಶಗಳನ್ನು ಹೊಂದಿರುವಾಗ ಮಾತ್ರ ನ್ಯಾಯಯುತ ಸಮಾಜ ಸಾಧ್ಯ ಎಂದು ಅವರು ನಂಬಿದ್ದರು. ಭಾರತೀಯ ಸಂವಿಧಾನದ ಮೂಲಕ, ಅವರು ಕಾನೂನನ್ನು ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವದ ಆದರ್ಶಗಳಿಗೆ ಜೋಡಿಸಿದರು ಎಂದರು.
ಕಾನೂನು ಕೇವಲ ನಿಯಮಗಳ ಸಂಗ್ರಹವಲ್ಲ, ನ್ಯಾಯ ಮತ್ತು ಮಾನವ ಹಕ್ಕುಗಳನ್ನು ರಕ್ಷಿಸುವ ಸಾಧನ ಎಂದು ಅಂಬೇಡ್ಕರ್ ನಂಬಿದ್ದರು. ಸಮಾಜವು ಅದನ್ನು ನೈತಿಕವಾಗಿ ಸ್ವೀಕರಿಸಿದಾಗ ಮಾತ್ರ ಕಾನೂನು ಪರಿಣಾಮಕಾರಿಯಾಗುತ್ತದೆ. ಆದ್ದರಿಂದ, ಅಂಬೇಡ್ಕರ್ ಅವರು ಸಾಮಾಜಿಕ ನ್ಯಾಯ, ದಲಿತರ ಉನ್ನತಿ ಮತ್ತು ಕಾನೂನಿನ ಮೂಲಕ ಪ್ರಜಾಪ್ರಭುತ್ವ ಮೌಲ್ಯಗಳ ಸ್ಥಾಪನೆಯ ಮಹತ್ವವವನ್ನು ಒತ್ತಿ ಹೇಳಿದ್ದರು ಎಂದು ರಾಜ್ಯಪಾಲರು ತಿಳಿಸಿದರು.
ಕಾನೂನು ಸಮಾಜದ ಆತ್ಮ. ಇದು ಸಮಾಜವನ್ನು ಶಿಸ್ತುಬದ್ಧ, ಸಮತೋಲಿತ ಮತ್ತು ನ್ಯಾಯಯುತವಾಗಿಡುವ ಮಾರ್ಗದರ್ಶಿ ಶಕ್ತಿಯಾಗಿದೆ. ನಮ್ಮ ಸಂವಿಧಾನ ತಯಾರಕರು ಕಾನೂನನ್ನು ನಾಗರಿಕರ ಹಕ್ಕುಗಳನ್ನು ರಕ್ಷಿಸುವ ಸಾಧನವೆಂದು ಪರಿಗಣಿಸಿದ್ದಾರೆ. ಕಾನೂನು ವಿದ್ಯಾರ್ಥಿಗಳು ಕಾನೂನಿನ ಜ್ಞಾನ ಪಡೆದುಕೊಳ್ಳುವುದದರ ಜೊತೆಗೆ ಸಮಕಾಲೀನ ತಾಂತ್ರಿಕ ಮತ್ತು ಜಾಗತಿಕ ಸವಾಲುಗಳನ್ನು ಅರ್ಥಮಾಡಿಕೊಂಡು, ಮುಂಚೂಣಿಯಲ್ಲಿರಬೇಕು ಎಂದು ಕರೆ ನೀಡಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿ ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಡಾ.ಶಿವರಾಜ್ ವಿ.ಪಾಟೀಲ್, ವಿಶ್ವವಿದ್ಯಾಲಯ ಕುಲಪತಿ ಪ್ರೊ. ಡಾ.ಸಿ.ಬಸವರಾಜು ಸೇರಿ ಹಲವು ಗಣ್ಯರು ಉಪಸ್ಥಿತರಿದ್ದರು.