

ಹುಬ್ಬಳ್ಳಿ : ರಾಷ್ಟ್ರಭಕ್ತರ ತ್ಯಾಗ, ಬಲಿದಾನದಿಂದಾಗಿ ದೇಶಕ್ಕೆ ಸ್ವಾತಂತ್ರ್ಯ ದೊರೆಯಿತು. ಹೋರಾಟಗಾರರ ತ್ಯಾಗ, ಬಲಿದಾನದಿಂದ ಬಂದಿರುವ ಸ್ವಾತಂತ್ರದ ಮಹತ್ವವನ್ನು ಅರಿತುಕೊಳ್ಳುವ ಜತೆಗೆ ದೇಶದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹುಬ್ಬಳ್ಳಿ ಶಹರ ತಹಶೀಲ್ದಾರರಾದ ಮಹೇಶ ಗಸ್ತೆ ಹೇಳಿದರು.
79ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಇಲ್ಲಿನ ನೆಹರು ಮೈದಾನದಲ್ಲಿ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಧ್ವಜಾರೋಹಣ ನೆರವೇರಿಸಿ ಅವರು ಮಾತನಾಡಿದರು.
ಸ್ವಾತಂತ್ರ್ಯ ದಿನಾಚರಣೆ ಆಚರಿಸುವುದಷ್ಟೇ ನಮ್ಮ ಕರ್ತವ್ಯವಲ್ಲ. ಸಮಾಜದಲ್ಲಿ ನೈತಿಕತೆ ಕಾಪಾಡುವುದು, ಭ್ರಷ್ಟಾಚಾರ ನಿವಾರಣೆ ಮಾಡುವುದು, ಶಿಕ್ಷಣಕ್ಕೆ ಮಹತ್ವ ಕೊಡುವುದು, ಪರಿಸರ ಸಂರಕ್ಷಿಸುವುದು ಹಾಗೂ ಸಂವಿಧಾನಬದ್ಧ ಹಕ್ಕುಗಳನ್ನು ಕಾಪಾಡುವುದರ ಜತೆಗೆ ಸಮ ಸಮಾಜ ನಿರ್ವಿುಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ಹುಬ್ಬಳ್ಳಿಯ ಮೂರುಸಾವಿರಪ್ಪ ಗಂಗಪ್ಪ ಇಚಗೇರಿ ಹಾಗೂ ನಾರಾಯಣ ಡೋಣಿ ಚಳುವಳಿಯಲ್ಲಿ ಪಾಲ್ಗೊಂಡು ಹಲವಾರು ಯುವಕರಲ್ಲಿ ಹೊಸ ಹುರುಪು ತುಂಬುವುದರೊಂದಿಗೆ ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯು ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಜ್ವಲಿಸಿತು ಎಂದರು.
ಪ್ರತಿಯೊಬ್ಬರೂ ಭೇದಭಾವ ಮರೆತು ಸರ್ವೆ ಜನೋ ಸುಖಿನೋಭವಂತು ಎನ್ನುವಂತೆ ಬಾಳಬೇಕು. ಅಂದಾಗ ಮಾತ್ರ ಸಧೃಡ, ಆರೋಗ್ಯ ರಾಷ್ಟ್ರ ನಿಮಾಣವಾಗುತ್ತದೆ ಎಂದು ಹೇಳಿದರು.
ಶಾಸಕ ಮಹೇಶ ಟೆಂಗಿನಕಾಯಿ ಮಾತನಾಡಿ, ಭಾರತವು ಅಭಿವೃದ್ಧಿ ಪಥದಲ್ಲಿ ಮುನ್ನಡೆಯುತ್ತಿದೆ. ವಿಜ್ಞಾನ, ತಂತ್ರಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಭಾರತ ತನ್ನದೇ ಛಾಪು ಮೂಡಿಸಿದೆ ಎಂದು ಬಣ್ಣಿಸಿದರು.
2047ರಲ್ಲಿ ದೇಶ ವಿಕಸಿತ ಭಾರತವಾಗಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಮೇಕ್ ಇನ್ ಇಂಡಿಯಾ, ಸ್ಕಿಲ್ ಇಂಡಿಯಾ ಸೇರಿದಂತೆ ಸಾಕಷ್ಟು ಅಭಿವೃದ್ಧಿ ಪರ ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಅವರ ದೂರದೃಷ್ಟಿಯಿಂದ ದೇಶದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ದೇಶದ ಅಭಿವೃದ್ಧಿಗೆ ಯುವಕರು ಕೊಡುಗೆ ನೀಡಲು ಮುಂದಾಗಬೇಕಿದೆ ಎಂದರು.
ವಿವಿಧ ತಂಡಗಳು ಪಥ ಸಂಚಲನ ನಡೆಸಿದವು. ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಗ್ರೇಡ್ 2 ತಹಶೀಲ್ದಾರ ಶಿವಾನಂದ ಹೆಬ್ಬಳ್ಳಿ, ಹುಬ್ಬಳ್ಳಿ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಬೊಮ್ಮಕ್ಕನವರ, ವಿವಿಧ ಇಲಾಖೆಗಳ ಅಧಿಕಾರಿಗಳು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.