ಭಗವದ್ಗೀತೆಯ ಮಹತ್ವ ಅರಿಯಿರಿ

28 vikram 6
Published on

ವಿಜಯವಾಣಿ ಸುದ್ದಿಜಾಲ ಧಾರವಾಡ

ಭಗವದ್ಗೀತೆ ಅಧ್ಯಯನ ಮಾಡಿದಷ್ಟು ಮನುಷ್ಯ ಜೀವನದಲ್ಲಿ ಎತ್ತರಕ್ಕೆ ಬೆಳೆಯುತ್ತಾನೆ. ಅದರಲ್ಲಿನ ಪ್ರತಿ ಅಂಶವೂ ಪ್ರತಿಯೊಬ್ಬರ ಶ್ರೇಯಸ್ಸನ್ನು ಬಯಸುತ್ತದೆ ಎಂದು ಕಾಶ್ಮೀರದ ಪಂಡಿತರಾದ ಸುಶೀಲ್​ ಪಂಡಿತ್​ ಅಭಿಪ್ರಾಯಪಟ್ಟರು.

ಶ್ರೀಮದ್​ ಜಗದ್ಗುರು ಶಂಕರಾಚಾರ್ಯ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನ, ಶ್ರೀ ಸರ್ವಜ್ಞೇಂದ್ರ ಸರಸ್ವತಿ ಪ್ರತಿಷ್ಠಾನ ಹಾಗೂ ಧಾರವಾಡ ತಾಲೂಕಿನ ಶ್ರೀ ಭಗವದ್ಗೀತಾ ಅಭಿಯಾನ ಸಮಿತಿ ವತಿಯಿಂದ ಇಲ್ಲಿನ ಕೆ.ಎನ್​.ಕೆ. ಪ್ರೌಢ ಶಾಲೆಯಲ್ಲಿ ಸೋಮವಾರ ಏರ್ಪಡಿಸಿದ್ದ ತಾಲೂಕಿನ ಶ್ರೀ ಭಗವದ್ಗೀತಾ ಅಭಿಯಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರತಿಯೊಬ್ಬರೂ ಭಗವದ್ಗೀತೆಯ ಮಹತ್ವ ಅರಿಯಬೇಕು. ಶ್ರೀಕೃಷ್ಣನು ಅರ್ಜುನನಿಗೆ ರಣರಂಗದಲ್ಲಿ ಭಗವದ್ಗೀತೆ ಬೋಧಿಸಿ ಎಲ್ಲರೂ ಸ್ವ ಧರ್ಮ ಪಾಲನೆ ಮಾಡಬೇಕು ಎಂಬುದನ್ನು ತಿಳಿಸಿದ್ದಾನೆ ಎಂದ ಅವರು, ಗೀತೆಯ ಮಹತ್ವ ತಿಳಿಸಿ, ಗೀತೆಯಲ್ಲಿ ಲೌಕಿಕ ಮತ್ತು ಅಲೌಕಿಕ ಪ್ರಯೋಜನಗಳಿವೆ ಎಂದು ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ವಿದ್ವಾನ್​ ವಾಚಸ್ಪತಿ ಶಾಸ್ತ್ರಿ ಜೋಶಿ ಮಾತನಾಡಿ, ಎಲ್ಲರೂ ಗೀತೆಯ ಸಾರ ತಿಳಿಯುವುದರ ಜತೆಗೆ ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ವ್ಯಕ್ತಿಗಳಾಗಿ ಬದುಕುವ ಪ್ರಯತ್ನ ಮಾಡಬೇಕು ಎಂದರು.

ವಿದ್ವಾನ್​ ಹರ್ಷಾ ಭಟ್​ ಹಾಗೂ ವಿದ್ವಾನ್​ ಗಿರೀಶ ಗಾಂವಕರ ವೇದ ಘೋಷ ನಡೆಸಿದರು. ರಾಧಾ ದೇಸಾಯಿ ಭಗವದ್ಗೀತೆ ಪಠಣ ಮಾಡಿದರು. ವಿ.ಎಂ.ಭಟ್​, ಸೂರ್ಯನಾರಾಯಣ ಭಟ್​, ಸುಜಾತಾ ಬಾಸೂರ, ಹರ್ಷ ಆಚಾರ್ಯ, ರಾಜೀವ ಪಾಟೀಲ ಕುಲಕರ್ಣಿ, ಇತರರು ಇದ್ದರು.

ಸಂಚಾಲಕ ಜಿ.ಆರ್​. ಭಟ್​ ಪ್ರಾಸ್ತಾವಿಕವಾಗಿ ಮಾತನಾಡಿ ಅಭಿಯಾನದ ಉದ್ದೇಶ ವಿವರಿಸಿದರು. ಮಹೇಶ್​ ಭಟ್​ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net