

ಮಂಡ್ಯ: ಭಾರತದಲ್ಲಿ ಹುಟ್ಟಿರುವ ನಾವು ಧರ್ಮವನ್ನು ತಿಳಿದುಕೊಂಡು ಒಳ್ಳೆಯವರಾಗಿ ಬಾಳಬೇಕು ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಸಲಹೆ ನೀಡಿದರು.
ತಾಲೂಕಿನ ಕಾರಸವಾಡಿ ಗ್ರಾಮದಲ್ಲಿ ಬುಧವಾರ ಶ್ರೀ ಕಾತ್ಯಾಯಿನಿ ಅಮ್ಮನವರ ದೇವಸ್ಥಾನ ಉದ್ಘಾಟಿಸಿ ಮಾತನಾಡಿದ ಅವರು, ಅಮೆರಿಕದಲ್ಲಿ ವಿಜ್ಞಾನ, ಜಪಾನ್‌ನಲ್ಲಿ ತಂತ್ರಜ್ಞಾನ, ಫ್ರಾನ್ಸ್‌ನಲ್ಲಿ ರಾಜಕೀಯ ಬೆಳೆಯುತ್ತಿದೆ. ಇಂಗ್ಲೆಂಡ್‌ನಲ್ಲಿ ವ್ಯಾಪಾರ ವಹಿವಾಟು ವೃದ್ಧಿಸುತ್ತಿದೆ. ಅದರಂತೆ ಭಾರತದಲ್ಲಿ ಧರ್ಮ ಜಾಗೃತಿಯಾಗುತ್ತಿದೆ ಎಂದು ಅಭಿಪ್ರಾಯಿಸಿದರು.
ಭಗವಂತ ಎಲ್ಲೆಡೆ ಇರುತ್ತಾನೆ. ಆದರೂ, ನಾವು ಗುಡಿ-ಗೋಪುರಗಳನ್ನು ನಿರ್ಮಿಸಿ ದೇವಾಲಯಗಳಲ್ಲೇ ದೇವರನ್ನು ಕಾಣುತ್ತೇವೆ. ಆಕಳಿನ ಹಾಲು ಮೊಲೆಯಲ್ಲಿರುವಂತೆ ದೇವಾಲಯದಲ್ಲಿ ದೇವರನ್ನು ಕಂಡು ತಮ್ಮ ಭಕ್ತಿಯನ್ನು ಸಮರ್ಪಿಸುತ್ತೇವೆ. ಆ ಮೂಲಕ ಮನಃಶಾಂತಿ, ನೆಮ್ಮದಿ ಕಂಡುಕೊಳ್ಳುತ್ತಿದ್ದೇವೆ. ಅಂತೆಯೇ, ಹೆಜ್ಜೆ ಹೆಜ್ಜೆಗೂ ಭಗವಂತನ ಧ್ಯಾನ ಮಾಡಬೇಕು. ಪಂಚಭೂತಗಳಲ್ಲೂ ದೇವರು ಇದ್ದಾನೆಂಬುದನ್ನು ಯಾರೂ ಮರೆಯಬಾರದು ಎಂದು ಸಲಹೆ ನೀಡಿದರು.
ಭಾರತದಲ್ಲಿ ವಾಸ ಮಾಡುವರೆಲ್ಲರೂ ದಡ್ಡರು. ಅವರಿಗೆ ಧರ್ಮದ ಬಗ್ಗೆ ಶಿಕ್ಷಣ ನೀಡಬೇಕು ಎಂದು ಪಾಶ್ಚಿಮಾತ್ಯ ದೇಶಗಳು ಭಾರತಕ್ಕೆ ಕ್ರಿಶ್ಚಿಯನ್ ಮಿಷಿನರಿಗಳನ್ನು ಕಳುಹಿಸಿ ಧರ್ಮದ ಬಗ್ಗೆ ಉಪದೇಶ ನೀಡಬೇಕೆಂದು ಸಂಕಲ್ಪ ಮಾಡಿದ್ದವು. ಆದರೆ, 120 ವರ್ಷದ ಹಿಂದೆಯೇ ಸ್ವಾಮಿ ವಿವೇಕಾನಂದರು ಅಮೆರಿಕದ ಚಿಕಾಗೋ ನಗರಕ್ಕೆ ಭೇಟಿ ನೀಡಿ ಅದಕ್ಕೆ ಸರಿಯಾದ ಉತ್ತರವನ್ನೇ ನೀಡಿದ್ದಾರೆ. ನಮ್ಮ ಜನರಿಗೆ ಧರ್ಮದ ಬಗ್ಗೆ ಹೇಳಿಕೊಡಬೇಕಿಲ್ಲ. ಅದು ಅವರಿಗೆ ರಕ್ತಗತವಾಗಿ ಬಂದಿದೆ ಎಂದು ತಿಳಿಸಿ ಬಂದಿದ್ದರು ಎಂದರು.
ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥಸ್ವಾಮೀಜಿ, ಕಬ್ಬಳಿ ಶಾಖಾ ಮಠದ ಶ್ರೀ ಶಿವಪುತ್ರ ಸ್ವಾಮೀಜಿ, ರಾಮನಗರ ಶಾಖಾ ಮಠದ ಶ್ರೀ ಅನ್ನದಾನೇಶ್ವರನಾಥ ಸ್ವಾಮೀಜಿ, ಕೋಟಲೂರು ಶ್ರೀ ರಾಜಣ್ಣ ಸ್ವಾಮೀಜಿ, ಮುಖಂಡರಾದ ಸಿದ್ದರಾಮು, ಕಾರಸವಾಡಿ ಮಹದೇವು, ದೇವಸ್ಥಾನದ ಗುಡ್ಡಪ್ಪ ರಾಮಣ್ಣ ಇತರರಿದ್ದರು.
ಸಮಾರಂಭಕ್ಕೂ ಮುನ್ನ ದೇವಸ್ಥಾನದಲ್ಲಿ ಗೋದೂಳಿ ಲಗ್ನದಲ್ಲಿ ಗಣಪತಿ ಪೂಜೆ, ವಾಸ್ತು ಪ್ರಾರ್ಥನೆ, ಪುಣ್ಯಾಹ, ಪಂಚಗವ್ಯ, ನಾಂದಿಪೂಜೆ, ದಿಗ್ಬಲಿ, ನವಗ್ರಹ ಪೂಜೆ, ಮಂಡಲ ಪೂಜೆ, ನೇತ್ರೋನ್ಮಿಲನ, ಪ್ರಾಣ ಪ್ರತಿಷ್ಠಾಪನೆ, ಕಳಾಹೋಮ, ಗೋ ಪೂಜೆ ಮತ್ತು ವಿಶೇಷವಾಗಿ ದುರ್ಗಾ ಹೋಮ, ದೇವರಿಗೆ ಪಂಚಾಮೃತ ಅಭಿಷೇಕ ಮತ್ತು ಮಹಾ ಮಂಗಳಾರತಿ ನಡೆಯಿತು.
ಬಳಿಕ ಪೂರ್ಣಕುಂಭದೊಂದಿಗೆ ಗ್ರಾಮದ ಮಹಾದ್ವಾರದಿಂದ ಶ್ರೀಗಳನ್ನು ದೇವಸ್ಥಾನದವರೆಗೆ ಮೆರವಣಿಗೆಯಲ್ಲಿ ಕರೆತರಲಾಯಿತು. ಸಮಾರಂಭದ ಬಳಿಕ ಸುತ್ತಮುತ್ತಲ ಗ್ರಾಮಸ್ಥರರಿಗೆ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು.