

ಸುಗ್ಗರಾಜು ಜಿ.ಕೆ.ನೆಲಮಂಗಲ
ತಾಲೂಕಿನ ಟಿ.ಬೇಗೂರು ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಕನಿಷ್ಠ ಮೂಲಸೌಕರ್ಯ ಕಲ್ಪಿಸದ ಪರಿಣಾಮ ಜನಸಾಮಾನ್ಯರು ಪರದಾಡುವಂತಾಗಿದೆ.
ಗ್ರಾಪಂ ಕೇಂದ್ರವಾದ ಟಿ.ಬೇಗೂರು ಸೇರಿ ವಿವಿಧ ಗ್ರಾಮಗಳಲ್ಲಿ ವ್ಯವಸ್ಥಿತ ರಸ್ತೆ, ಚರಂಡಿ ನಿರ್ಮಾಣ ಮಾಡಿಲ್ಲ. ವಿದ್ಯುತ್ ದೀಪ ನಿರ್ವಹಣೆ ದೂರದ ಮಾತಾಗಿದೆ. ತ್ಯಾಜ್ಯ ವಿಲೇವಾರಿಗೂ ನಿರ್ಲಕ್ಷ್ಯವಹಿಸಿರುವುದರಿಂದ ಎಲ್ಲೆಂದರಲ್ಲಿ ಕಸ ಸಂಗ್ರಹವಾಗಿ, ದುರ್ವಾಸನೆ ಬೀರುತ್ತಿದೆ.
ಸಾಂಕ್ರಾಮಿಕ ರೋಗಗಳ ಭೀತಿ:
ಪಂಚಾಯಿತಿಯ ಟಿ.ಬೇಗೂರು, ಅರಳೇದಿಬ್ಬ, ಕಂಬಯ್ಯನಪಾಳ್ಯ, ಬೈರನಹಳ್ಳಿ, ಗೆದ್ದಲಹಳ್ಳಿ ಸೇರಿ ಕೆಲ ವಸತಿ ಪ್ರದೇಶದಲ್ಲಿ ತ್ಯಾಜ್ಯ ವಿಲೇವಾರಿ ಮಾಡಲು ಕ್ರಮಕೈಗೊಳ್ಳದ ಪರಿಣಾಮ ರಸ್ತೆ ಇಕ್ಕೆಲಗಳಲ್ಲಿ ಕಸ ಸಂಗ್ರಹಗೊಂಡಿದೆ. ಈ ತ್ಯಾಜ್ಯವನ್ನು ತಿನ್ನಲು ಬೀದಿನಾಯಿಗಳ ಗುಂಪೇ ಸೇರುವುದರಿಂದ ಇಡೀ ವಾತಾವರಣ ಗಬ್ಬುನಾರುತ್ತಿದ್ದು, ಸ್ಥಳೀಯರಲ್ಲಿ ಸಾಂಕ್ರಾಮಿಕ ಭೀತಿ ಆವರಿಸಿದೆ. ಜತೆಗೆ ಬೀದಿನಾಯಿಗಳ ಹಾವಳಿಯಿಂದ ಸಾರ್ವಜನಿಕರು ಒಂಟಿಯಾಗಿ ಓಡಾಡಲು ಭಯಪಡುವಂತಾಗಿದೆ.
ಗ್ರಾಮಸ್ಥರಿಂದ ಕಾಯಕಲ್ಪ ಹಲವು ಗ್ರಾಮಗಳಲ್ಲಿ ಚರಂಡಿ ಸೌಲಭ್ಯ ಇಲ್ಲದೆ ಕಲುಷಿತ ರಸ್ತೆ, ತಗ್ಗು ಪ್ರದೇಶಗಳಿಗೆ ಹರಿದು ಸೊಳ್ಳೆಗಳ ಉತ್ಪತ್ತಿಗೆ ಎಡೆಮಾಡಿಕೊಟ್ಟಿದೆ. ಈ ಅವ್ಯವಸ್ಥೆ ಸರಿಪಡಿಸಲು ಎಷ್ಟೇ ಬಾರಿ ಮನವಿ ಮಾಡಿದರೂ ಗ್ರಾಮ ಪಂಚಾಯಿತಿ ಅಧಿಕಾರಿಗಳು ಸ್ಪಂದಿಸದ ಹಿನ್ನೆಲೆಯಲ್ಲಿ ಕೆಲವು ಗ್ರಾಮಸ್ಥರೇ ಸ್ವಂತ ಖರ್ಚಿನಲ್ಲಿ ಜೆಸಿಬಿ ತರಿಸಿ ಚರಂಡಿಯಲ್ಲಿ ಭರ್ತಿಯಾಗಿದ್ದ ಕಸವನ್ನು ತೆರವು ಮಾಡಿ, ಕಲುಷಿತ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಮಾಡಿರುವ ಜತೆಗೆ ಕಸದ ರಾಶಿಯನ್ನು ವಿಲೇವಾರಿ ಮಾಡಿಸಲು ಮುಂದಾಗಿದ್ದಾರೆ.
ಮನವಿಗಿಲ್ಲ ಸ್ಪಂದನೆ: ಕೆಲ ದಿನಗಳ ಹಿಂದೆ ಪಿಡಿಒ ಅವರನ್ನು ಭೇಟಿ ಮಾಡಿದ ಗ್ರಾಮಸ್ಥರು ಗ್ರಾಪಂ ವ್ಯಾಪ್ತಿಯ ಸಮಸ್ಯೆ ಕುರಿತು ಮನವರಿಕೆ ಮಾಡಿಕೊಟ್ಟು, ಕಸದ ರಾಶಿ ತೆರವು, ಹದಗೆಟ್ಟ ವಿದ್ಯುತ್ ದೀಪ ನಿರ್ವಹಣೆ ಸೇರಿ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂತೆ ಮನವಿ ಸಲ್ಲಿಸಿದ್ದರು. ಆದರೆ ಸೂಕ್ತ ಪರಿಹಾರ ಮಾತ್ರ ದೊರೆತಿಲ್ಲ.
ಗ್ರಾಮದ ವಿವಿಧೆಡೆ ಸಂಗ್ರಹವಾದ ಕಸದರಾಶಿ, ಕಸ, ಮಣ್ಣಿನಿಂದ ತುಂಬಿರುವ ಚರಂಡಿಯನ್ನು ಸ್ವಚ್ಛಗೊಳಿಸಿ, ರೋಗ ಭೀತಿಯಿಂದ ಜನರನ್ನು ಕಾಪಾಡಬೇಕಿದೆ. ಕೆಟ್ಟಿರುವ ದೀಪಗಳನ್ನು ರಿಪೇರಿ ಮಾಡದಿರುವುದು ಕಳ್ಳಕಾಕರಿಗೆ ಅನುಕೂಲ ಮಾಡಿಕೊಟ್ಟಂತಾಗಿದೆ. ಸಂಜೆಯ ವೇಳೆ ಮಹಿಳೆಯರು, ಮಕ್ಕಳು ಮನೆಯಿಂದ ಹೊರಗೆ ಬರಲು ಭಯಪಡುವಂತಾಗಿದೆ.
ಜಯರಾಮ್