

ಹರೀಶ್ ಮೊಟುಕಾನ ಮಂಗಳೂರು
ನಗರದ ಕ್ಲಾಕ್ ಟವರ್ ವೃತ್ತದ ಬಳಿ ಬಹು ಕಾಲದಿಂದ ನಿರೀಕ್ಷೆಯಾಗಿಯೇ ಉಳಿದಿದ್ದ ಪಾದಚಾರಿ ಭೂಗತ ಮಾರ್ಗ(ಅಂಡರ್‌ಪಾಸ್) ಕಾಮಗಾರಿ ಶೇ.90 ರಷ್ಟು ಪೂರ್ಣಗೊಂಡಿದೆ.
ಮಂಗಳೂರು ತಾಲೂಕು ಕಚೇರಿ ಮುಂಭಾಗದಿಂದ ಗಾಂಧಿ ಉದ್ಯಾನವನ ತನಕ 30 ಮೀ. ಉದ್ದ ಹಾಗೂ 10 ಮೀ. ಅಗಲದ ಭೂಗತ ಮಾರ್ಗ ಕಾಮಗಾರಿ ಪೂರ್ಣಗೊಂಡಿದೆ. ಗಾಂಧಿ ಉದ್ಯಾನವನದಿಂದ ಹೋಟೆಲ್ ತಾಜ್‌ಮಹಲ್ ತನಕದ 26 ಮೀ. ಉದ್ದ ಹಾಗೂ 10 ಮೀ. ಅಗಲದ ಮಾರ್ಗ ಶೇ.90ರಷ್ಟು ಪೂರ್ಣಗೊಂಡಿದೆ. ಒಟ್ಟು 7 ಕೋಟಿ ರೂ.ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.
ಗಾಂಧಿ ಉದ್ಯಾನವನದ ಪಾದಚಾರಿ ಮಾರ್ಗದಲ್ಲಿ ನೆಲಹಾಸು ಕಾರ್ಯ ಪ್ರೃಗತಿಯಲ್ಲಿದ್ದು, ಉದ್ಯಾನವನದ ಆವರಣ ಗೋಡೆ, ನೀರಾವರಿ ಹಾಗೂ ವಿದ್ಯುತ್ ಕೆಲಸಗಳು ಹಾಗೂ ತೋಟಗಾರಿಕೆಯ ಪೂರ್ವಸಿದ್ಧತಾ ಕಾಮಗಾರಿ ಪ್ರಗತಿಯಲ್ಲಿದೆ. ಎರಡು ತಿಂಗಳ ಒಳಗಾಗಿ ಎಲ್ಲವೂ ಪೂರ್ಣಗೊಳ್ಳಲಿದೆ ಎಂದು ಸ್ಮಾರ್ಟ್‌ಸಿಟಿ ಅಧಿಕಾರಿಗಳು ತಿಳಿಸಿದ್ದಾರೆ.
ಎರಡು ವರ್ಷಗಳಿಂದ ಹಂತ ಹಂತವಾಗಿ ಕಾಮಗಾರಿ ನಡೆದಿದೆ. ಮಂದಗತಿಯ ಕೆಲಸದ ಬಗ್ಗೆ ಸಾರ್ವಜನಿಕರಿಂದ ವ್ಯಾಪಕ ಟೀಕೆಯೂ ವ್ಯಕ್ತವಾಗಿತ್ತು. ಕೋವಿಡ್ ಲಾಕ್‌ಡೌನ್ ಹಾಗೂ ಮಳೆಗಾಲದ ಅವಧಿಯಲ್ಲಿ ಕಾಮಗಾರಿ ನಿರೀಕ್ಷಿತ ವೇಗದಲ್ಲಿ ನಡೆಯದಿರುವುದು ಕೆಲಸ ಪೂರ್ಣಗೊಳ್ಳುವಲ್ಲಿ ವಿಳಂಬಕ್ಕೆ ಕಾರಣವಾಗಿತ್ತು.
ಬೇಡಿಕೆ ಈಡೇರಿಕೆ: ಪ್ರತಿ ದಿನ ರೈಲು ನಿಲ್ದಾಣದಿಂದ ನಗರಕ್ಕೆ ಬರುವ ಸಾವಿರಾರು ಸಾರ್ವಜನಿಕರಿಗೆ ಈ ಪಾದಚಾರಿ ಭೂಗತ ಮಾರ್ಗ ಉಪಯೋಗ ವಾಗಿದೆ. ಹಿಂದೆ ಇಲ್ಲಿ ರಸ್ತೆ ದಾಟುವುದೇ ಹರಸಾಹಸವಾಗಿತ್ತು. ಮಹಿಳೆಯರು, ಹಿರಿಯರು ರಸ್ತೆ ದಾಟಲು ಜೀವ ಕೈಯ್ಯಲ್ಲಿ ಹಿಡಿದುಕೊಳ್ಳಬೇಕಾದ ಸ್ಥಿತಿ ಇತ್ತು. ಸ್ಕೈವಾಕ್ ಅಥವಾ ಭೂಗತ ಮಾರ್ಗ ನಿರ್ಮಾಣ ಮಾಡಬೇಕು ಎನ್ನುವ ಬೇಡಿಕೆ ದಶಕದಿಂದ ಇತ್ತು. ಈ ಹಿಂದೆ ಸ್ಕೈ ವಾಕ್ ಮಾಡಲು ಯೋಜನೆ ರೂಪಿಸಿ, ಟೆಂಡರ್ ಪ್ರಕ್ರಿಯೆ ನಡೆದು, ಅಂದಿನ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಶಿಲಾನ್ಯಾಸವನ್ನೂ ನೆರವೇರಿಸಿದ್ದರು. ಆದರೆ ಬಳಿಕ ಈ ಯೋಜನೆಯ ನಿರ್ವಹಣಾ ವೆಚ್ಚ ಅಧಿಕವಾದ ಕಾರಣ ರದ್ದಾಯಿತು. ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಪ್ರಸ್ತುತ ಪಾದಚಾರಿ ಭೂಗತ ಮಾರ್ಗದ ಕನಸು ನನಸಾಗಿದೆ.
ಮಂಗಳೂರಿನ ಹೃದಯ ಭಾಗದಲ್ಲಿ ಪಾದಚಾರಿ ಭೂಗತ ಮಾರ್ಗ ಕಾಮಗಾರಿ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ. ಇದರಿಂದ ರೈಲು ನಿಲ್ದಾಣದಿಂದ ಬರುವ ಪ್ರಯಾಣಿಕರು ಹಾಗೂ ಇತರ ಸಾರ್ವಜನಿಕರು ಭಯವಿಲ್ಲದೆ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಂಚರಿಸಲು ಸಾಧ್ಯವಾಗಲಿದೆ.
ವಿ.ಸುನೀಲ್ ಕುಮಾರ್,
ಜಿಲ್ಲಾ ಉಸ್ತುವಾರಿ ಸಚಿವ