ಅಧಿಕಾರಿಗಳೊಂದಿಗೆ ಚರ್ಚಿಸಿ ಅಂಡರ್‌ಪಾಸ್ ನಿರ್ಮಾಣ

mp underpass cheking
Published on

ಸಂಸದ ಬಿ.ಎನ್.ಬಚ್ಚೇಗೌಡ ಭರವಸೆ

ಚಿಕ್ಕಬೆಳವಂಗಲದಲ್ಲಿ ಪ್ರತಿಭಟನಾಕಾರರ ಅಳಲು ಆಲಿಸಿದ ಸಂಸದ


ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ
ಚಿಕ್ಕಬೆಳವಂಗಲದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಂಡರ್‌ಪಾಸ್ ನಿರ್ಮಾಣ ಸಂಬಂಧ ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಸಂಸದ ಬಿ.ಎನ್.ಬಚ್ಚೇಗೌಡ ಭರವಸೆ ನೀಡಿದರು.
ದೊಡ್ಡಬಳ್ಳಾಪುರ ತಾಲೂಕು ಚಿಕ್ಕಬೆಳವಂಗಲದ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ
ಅಂಡರ್‌ಪಾಸ್ ನಿರ್ಮಾಣಕ್ಕೆ ಆಗ್ರಹಿಸಿ ನಡೆಯುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿದರು. ಈ ಭಾಗದಲ್ಲಿ ಅಂಡರ್‌ಪಾಸ್ ನಿರ್ಮಾಣದ ಅವಶ್ಯಕತೆ ಇದೆ. ಇದಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗಳ ಜತೆ ಮಾತನಾಡಿ, ಅನುಕೂಲ ಮಾಡಿಕೊಡಲಾಗುವುದು ಎಂದು ತಿಳಿಸಿದರು.
ತಾಲೂಕಿನ ದೊಡ್ಡಬೆಳವಂಗಲ ಹಾಗೂ ಚಿಕ್ಕಬೆಳವಂಗಲ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ 207ರ ರಸ್ತೆ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಚಿಕ್ಕಬೆಳವಂಗಲ ಗ್ರಾಮ ಸೇರಿ ಅಕ್ಕಪಕ್ಕದ ಊರುಗಳಲ್ಲಿ 500ಕ್ಕೂ ಹೆಚ್ಚು ಜಾನುವಾರುಗಳಿವೆ. ಪಶು ಚಿಕಿತ್ಸಾಲಯ ಕೂಡ ಇದ್ದು, ಜನ ಮತ್ತು ಜಾನುವಾರು ಹಾದು ಹೋಗಲು ಈ ಭಾಗದಲ್ಲಿ ಅಂಡರ್‌ಪಾಸ್ ನಿರ್ಮಿಸುವಂತೆ 4 ತಿಂಗಳ ಹಿಂದೆ ಮನವಿ ಮಾಡಲಾಗಿತ್ತು. ಆದರೆ ಕಾಮಗಾರಿ ಮುಕ್ತಾಯ ಹಂತಕ್ಕೆ ಬಂದರು ಜನರ ಮನವಿಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು. ಪ್ರಾಂತ್ಯ ರೈತ ಸಂಘ ಹಾಗೂ ಸ್ಥಳೀಯ ರೈತರು ಹಾಗೂ ಗ್ರಾಮಸ್ಥರು15 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಸಂಬಂಧಪಟ್ಟ ಅಧಿಕಾರಿಗಳು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಕನಿಷ್ಠ ಸ್ಥಳಕ್ಕೆ ಬಂದು ಜನರ ಮನವಿಯನ್ನು ಆಲಿಸುವ ವ್ಯವಧಾನವೂ ಇಲ್ಲ ಎಂದು ಪ್ರತಿಭಟನಕಾರರು ಅಳಲು ತೋಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net