

ಬೇಲೂರು: ತಾಲೂಕಿನ ಮಲೆನಾಡು ಭಾಗದ ವಿವಿಧ ಗ್ರಾಮಗಳಲ್ಲಿ ಬೀಡು ಬಿಟ್ಟಿರುವ ಕಾಡಾನೆಗಳ ಹಿಂಡಿನಿಂದ ತೋಟ, ಗದ್ದೆಗಳಲ್ಲಿ ಬೆಳೆ ನಾಶವಾಗುತ್ತಿದ್ದು, ಇನ್ನಷ್ಟು ಹಾನಿ ಆಗುವ ಮುನ್ನ ಅರಣ್ಯ ಇಲಾಖೆ ಅಧಿಕಾರಿಗಳು ಕಾಡಾನೆಗಳನ್ನು ತಾಲೂಕಿನಿಂದ ಓಡಿಸಲು ಮುಂದಾಗಬೇಕಿದೆ.
ಅರೇಹಳ್ಳಿ ಹೋಬಳಿಯ ಕಾನನಹಳ್ಳಿ, ಕುಂಬಾರಹಳ್ಳಿ ಹಾಗೂ ಶಿರಗುರ, ನೇರಲಮಕ್ಕಿ, ಸೂಳೇಗುಡ್ಡ, ಚೀಕನಹಳ್ಳಿ ಬಂಡೆ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಬೀಡು ಬಿಟ್ಟಿರುವ 13ಕ್ಕೂ ಹೆಚ್ಚಿನ ಕಾಡಾನೆಗಳ ಹಿಂಡು, ಸಮೀಪದ ತೋಟಗಳಲ್ಲಿನ ಕಾಫಿ, ಅಡಕೆ, ಬಾಳೆ ಬೆಳೆ ಸೇರಿ ಇತರ ಬೆಳೆಗಳನ್ನು ತಿಂದು, ತುಳಿದು ನಾಶಪಡಿಸುತ್ತಿವೆ. ಇದರಿಂದಾಗಿ ರೈತರು ಸಾಕಷ್ಟು ನಷ್ಟ ಅನುಭವಿಸುವಂತಾಗಿದೆ. ಅಲ್ಲದೆ, ಒಂದು ವಾರದಿಂದ ಈ ಗ್ರಾಮಗಳ ಆಸುಪಾಸಿನಲ್ಲೇ ಕಾಡಾನೆಗಳು ಬೀಡು ಬಿಟ್ಟಿದ್ದರೂ ಅರಣ್ಯ ಇಲಾಖೆಯ ಯಾವುದೇ ಸಿಬ್ಬಂದಿಯೂ ಇತ್ತ ಸುಳಿದಿಲ್ಲ. ಪ್ರಸ್ತುತ ಆನೆಗಳ ಉಪಟಳ ಹೆಚ್ಚಾಗಿದ್ದು, ನಿತ್ಯ ಸಂಜೆಯಾಗುತ್ತಲೇ ಹಿಂಡುಹಿಂಡಾಗಿ ತೋಟಗಳಿಗೆ ನುಗ್ಗುವ ಮೂಲಕ ಭಯದ ವಾತಾವರಣ ಸೃಷ್ಟಿಸುತ್ತಿವೆ. ಜತೆಗೆ, ಬೆಳೆ ಹಾನಿ ಮಾಡುತ್ತಿವೆ ಎಂದು ಬೆಳೆಗಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮಲೆನಾಡ ಭಾಗದ ಗ್ರಾಮಗಳಲ್ಲಿ ಕತ್ತಲಾಗುತ್ತಿದ್ದಂತೆಯೇ ಮನೆಯಿಂದ ಆಚೆ ಬರುವಂತಿಲ್ಲ. ಕಾಡಾನೆಗಳು ಎಲ್ಲಿ, ಯಾವಾಗ ರಸ್ತೆ, ಜಮೀನುಗಳಲ್ಲಿ ಪ್ರತ್ಯಕ್ಷವಾಗುತ್ತವೋ ಎಂಬುದು ತಿಳಿಯದಂತಾಗಿದೆ. ಅಲ್ಲದೆ, ಮನುಷ್ಯರನ್ನು ಕಂಡರೆ ಕೆಲ ಆನೆಗಳು ಓಡಿಸಿಕೊಂಡು ಬರುವ ಘಟನೆಗಳೂ ನಡೆದಿವೆ. ಇತ್ತೀಚಿನ ದಿನಗಳಲ್ಲಿ ಆನೆಗಳ ದಾಳಿಯಿಂದ ಸಾಕಷ್ಟು ಜನರು ಗಾಯಗೊಂಡಿರುವ ಪ್ರಕರಣಗಳು ನಡೆದಿವೆ. ಈ ಎಲ್ಲ ಘಟನೆಗಳ ಬಗ್ಗೆ ಗ್ರಾಮಸ್ಥರು, ವಿವಿಧ ಸಂಘ-ಸಂಸ್ಥೆಗಳ ಮೂಲಕ ಸಂಬಂಧಿಸಿದ ಅಧಿಕಾರಿಗಳಿಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ ಎಂದು ಕಾಫಿ ಬೆಳೆಗಾರರು ಮತ್ತು ಕೂಲಿಕಾರ್ಮಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸರ್ಕಾರ ತಾಲೂಕಿನಲ್ಲಿ ಬೀಡುಬಿಟ್ಟಿರುವ ಆನೆಗಳನ್ನು ಕಾಡಿಗಟ್ಟುವ ಮೂಲಕ ಕಾಡಾನೆಗಳ ಉಪಟಳದಿಂದ ಮುಕ್ತಿ ನೀಡುವಂತೆ ತಾಲೂಕಿನ ಜನತೆ ಆಗ್ರಹಿಸಿದ್ದಾರೆ.