

ಬೈಂದೂರು: ಕೆರ್ಗಾಲ್ ಗ್ರಾಪಂನಲ್ಲಿ ನಿಯಮದಂತೆ ಹೆಸರು ದಾಖಲಿಸಿಕೊಂಡ ಕೂಲಿಯಾಳುಗಳಿಗೆ ನರೇಗಾ ಕೆಲಸ ನೀಡಬೇಕು ಎಂದು ನಡೆಸಿದ ಹೋರಾಟಕ್ಕೆ ಜಯ ಲಭಿಸಿದೆ. ಗ್ರಾಪಂ ನೀಡಿದ ಕಾರ್ಯಾದೇಶ ಅನುಸರಿಸಿ ಮಂಗಳವಾರ ಗ್ರಾಪಂನ ಸಾಮಾಜಿಕ ಅರಣ್ಯ ಪ್ರದೇಶದಲ್ಲಿ ನೂರಕ್ಕೂ ಅಧಿಕ ಕೂಲಿಕಾರರು ಅಂತರ್ಜಲ ವೃದ್ಧಿಗಾಗಿ ಇಂಗುಗುಂಡಿ ಕಾಮಗಾರಿ ಆರಂಭಿಸಿದರು.
ಕೆರ್ಗಾಲ್ ಗ್ರಾಪಂ ವ್ಯಾಪ್ತಿಯಲ್ಲಿ ಮುನ್ನೂರು ಮಹಿಳಾ ಕಾರ್ಮಿಕರು ಆರು ಕಾಯಕ ಸಂಘಗಳನ್ನು ರಚಿಸಿ ಯೋಜನೆಯಡಿ ಹೆಸರು ನೋಂದಾಯಿಸಿ ಕೆಲಸ ಕೊಡಬೇಕು ಎಂದು ಆಗ್ರಹಿಸಿದ್ದರು. ಬೇಡಿಕೆ ಸಲ್ಲಿಸಿ 25 ದಿನ ಕಳೆದರೂ ಈಡೇರದಿದ್ದಾಗ ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘದ ನೇತೃತ್ವದಲ್ಲಿ ಕೆಲವು ದಿನಗಳ ಹಿಂದೆ ಬೈಂದೂರು ತಾಪಂ ಕಚೇರಿ ಎದುರು ಕೆಲಸ ಕೊಡಿ, ಇಲ್ಲ ನಿರುದ್ಯೋಗ ಭತ್ಯೆ ಕೊಡಿ ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು. ಅಂತಿಮವಾಗಿ ಕಾರ್ಯನಿರ್ವಹಣಾಧಿಕಾರಿ ಭಾರತಿ ನರೇಗಾ ಕೂಲಿ ಕೆಲಸ ಕೊಡಿಸುವ ಭರವಸೆ ನೀಡಿದರೂ ಪಟ್ಟು ಬಿಡದ ಕಾರ್ಮಿಕರು ಲಿಖಿತ ಹಿಂಬರಹ ಪಡೆದು ಧರಣಿ ಹಿಂಪಡೆದಿದ್ದರು. ಈಗ ಕೆರ್ಗಾಲ್ ಗ್ರಾಪಂ ಅಧಿಕಾರಿಗಳು ಸೂಚಿಸಿದಂತೆ ಕೂಲಿಕಾರರು ಮಂಗಳವಾರದಿಂದ ಉದ್ಯೋಗ ಖಾತ್ರಿ ಕೆಲಸ ಆರಂಭಿಸಿದರು.
ಅಭಿವೃದ್ಧಿ ಅಧಿಕಾರಿ ನಾಗವೇಣಿ, ಕೃಷಿ ಕೂಲಿಕಾರರ ಸಂಘದ ಮುಖಂಡ ಕೋಣಿ ವೆಂಕಟೇಶ ನಾಯಕ್, ಕಾರ್ಯಕರ್ತ ಉದಯ ಗಾಣಿಗ ಮೊಗೇರಿ ಇದ್ದರು.
ವೈದ್ಯರೊಂದಿಗೆ ವಾಗ್ವಾದ: ಕೆಲಸ ನಡೆಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಕಿರಿಮಂಜೇಶ್ವರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಮತ್ತು ಆರೋಗ್ಯ ಸಿಬ್ಬಂದಿ ಎಲ್ಲ ಕಾರ್ಮಿಕರು ಕರೊನಾ ಸೋಂಕು ಪತ್ತೆ ಪರೀಕ್ಷೆ ನಡೆಸಿಕೊಳ್ಳಬೇಕು ಎಂದು ಸೂಚಿಸಿದರು. ಕಾರ್ಮಿಕರು ದೀರ್ಘಕಾಲದಿಂದ ಕೆಲಸ ವಂಚಿತರಾಗಿರುವ ತಮಗೆ ಈಗ ಕೆಲಸ ಸಿಕ್ಕಿದೆ. ತಾವೆಲ್ಲ ಆರೋಗ್ಯವಾಗಿದ್ದೇವೆ. ನಿಯಮದಂತೆ ಅಂತರ ಕಾಪಾಡಿಕೊಂಡು ಕೆಲಸ ಮಾಡುತ್ತಿದ್ದೇವೆ. ಪರೀಕ್ಷೆಗೆ ಒಳಗಾಗುವುದಿಲ್ಲ ಎಂದು ವಾದಿಸಿದರು. ಕೆಲಕಾಲ ವಾಗ್ವಾದ ನಡೆಯಿತು. ಮಹಿಳೆಯರು ಪಟ್ಟು ಬಿಡದಿದ್ದಾಗ ವೈದ್ಯಾಧಿಕಾರಿಗಳು ಜಿಲ್ಲಾಧಿಕಾರಿ ಸೇರಿದಂತೆ ಉನ್ನತಾಧಿಕಾರಿಗಳಿಗೆ ವಿಚಾರ ವರದಿ ಮಾಡುವುದಾಗಿ ಹೇಳಿ ನಿರ್ಗಮಿಸಿದರು. ಆ ಬಳಿಕ ಕೆಲಸ ಮುಂದುವರಿಯಿತು.