

ಬೆಳಗಾವಿ: ವಿದ್ಯಾರ್ಥಿ ಜೀವನದಲ್ಲಿ ಕಠಿಣ ಪರಿಶ್ರಮ ಹಾಗೂ ಶಿಕ್ಷಕರ ಸಲಹೆ, ಸೂಚನೆ, ಮಾರ್ಗದರ್ಶನ ಪಾಲಿಸಿದರೆ ಗುರಿ ಮುಟ್ಟಲು ಸಾಧ್ಯ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ಮಹಾಂತೇಶ ಕವಟಗಿಮಠ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ನಗರದ ಕೆಎಲ್‌ಇ ಸಂಸ್ಥೆಯ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದ ವತಿಯಿಂದ ಜೆಎನ್‌ಎಂಸಿ ಜಿರಗೆ ಸಭಾಭವನದಲ್ಲಿ ರವಿವಾರ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಮುಂದಿರುವ ಶಿಕ್ಷಣದ ಅವಕಾಶಗಳ ಕುರಿತು ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರತಿ ಮಕ್ಕಳು ಇತರೆ ಮಕ್ಕಳಿಗಿಂತ ವೈಯಕ್ತಿಕ ಭಿನ್ನತೆ ಹೊಂದಿದ್ದು, ಪ್ರತಿಯೊಬ್ಬ ಪಾಲಕರು ತಮ್ಮ ಮಕ್ಕಳ ಮನಸ್ಥಿತಿ ಅರಿತುಕೊಂಡು ಅವರ ಇಚ್ಚಿಸಿದ ವಿಷಯಗಳ ಅಧ್ಯಯನಕ್ಕೆ ಪ್ರೋತ್ಸಾಹ ನೀಡಬೇಕೆಂದು ತಿಳಿಸಿದರು. ಕೋವಿಡ್ ನಂತರದ ದಿನಗಳಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶಗಳು ಲಭ್ಯವಿದ್ದು, ಅವುಗಳ ಸದುಪಯೋಗ ಪಡೆದುಕೊಳ್ಳಬೇಕೆಂದು ಕರೆ ನೀಡಿದರು.
ಅತಿಥಿಗಳಾಗಿ ಆಗಮಿಸಿದ್ದ ತಿರುಪತಿಯ ಬಾಹ್ಯಾಕಾಶ ವಿಭಾಗದ ಮುಖ್ಯಸ್ಥ ಎನ್.ವೆಂಕಟೇಶ್ವರಾವ್ ಮಾತನಾಡಿ, ವಿಜ್ಞಾನ ಕ್ಷೇತ್ರದಲ್ಲಿ ಸಾಕಷ್ಟು ಉದ್ಯೋಗಾವಕಾಶಗಳಿವೆ. ಅದಕ್ಕೆ ತಕ್ಕಂತೆ ಕೌಶಲ ಬೆಳೆಸಿಕೊಳ್ಳಬೇಕು ಹಾಗೂ ಮೇಕ್ ಇನ್ ಇಂಡಿಯಾ, ರೈಲ್ವೆ ತಂತ್ರಜ್ಞಾನ ಹಾಗೂ ಹಡಗು ನಿರ್ಮಾಣ ಕ್ಷೇತ್ರಗಳಲ್ಲಿ ಮುಂದೆ ಸಿಗಬಹುದಾದಂತಹ ಉದ್ಯೋಗಗಳ ಬಗ್ಗೆ ಮಾಹಿತಿ ನೀಡಿದರು.
ಜೆಎನ್‌ಎಂಸಿ ಹದ್ರೋಗ ವಿಭಾಗದ ಮುಖ್ಯಸ್ಥ ಡಾ.ಸಂಜಯ ಪೋರವಾಲ ಮಾತನಾಡಿದರು. ಪ್ರಾಸ್ತಾವಿಕವಾಗಿ ಪಾಚಾರ್ಯ ವೇಣುಗೋಪಾಲ ರೆಡ್ಡಿ ಮಾತನಾಡಿದರು.
ಇದೇ ವೇಳೆ ಕೆಎಲ್‌ಇ ವಿದ್ಯಾರ್ಥಿ ವೇತನಕ್ಕಾಗಿ ನಡೆದ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಿ 17,26,600 ರೂಪಾಯಿಗಳ ವಿದ್ಯಾರ್ಥಿ ವೇತನ ವಿತರಿಸಲಾಯಿತು. ರಜನಿ ಅಥಣಿಮಠ ನಿರೂಪಿಸಿದರು. ಪೂನಂ ಪಾಟೀಲ ವಂದಿಸಿದರು.