ಜಮೆ ಆಗದ ಅನ್ನಭಾಗ್ಯ ಹಣ

Anna Bhagya Cash
Published on

ಮಂಜುನಾಥ ತಿಮ್ಮಯ್ಯ ಮೈಸೂರು

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಅನ್ನಭಾಗ್ಯ ಯೋಜನೆಯಡಿ ಪಡಿತರ ಬದಲು ಪಾವತಿಸುತ್ತಿರುವ ಹಣ ಜಿಲ್ಲೆಯ ಸಾವಿರಾರು ಫಲಾನುಭವಿಗಳಿಗೆ ದೊರೆಯುತ್ತಿಲ್ಲ. ಇದರಿಂದಾಗಿ ಪಡಿತರದಾರರು ಕಂಗಾಲಾಗಿದ್ದಾರೆ.

ಈ ಯೋಜನೆಯಡಿ 2023ರ ಜುಲೈ ಮಾಹೆಯಿಂದ ಉಚಿತವಾಗಿ 5 ಕೆಜಿ ಆಹಾರ ಧಾನ್ಯ ವಿತರಣೆ ಮಾಡಲಾಗುತ್ತದೆ. ಅಕ್ಕಿ ಪೂರೈಕೆ ಕೊರತೆ ಕಾರಣಕ್ಕೆ ಪರ್ಯಾಯವಾಗಿ ಹಣ ಪಾವತಿ ಮಾಡಲಾಗುತ್ತಿದೆ. ಹೆಚ್ಚುವರಿ 5 ಕೆಜಿ ಅಕ್ಕಿಯ ಹಣ ನೀಡುತ್ತಿದ್ದು, ಪ್ರತಿ ಕೆಜಿಗೆ 34 ರೂ.ನಂತೆ 5 ಕೆಜಿಗೆ 170 ರೂ. ಪಡಿತರ ಚೀಟಿದಾರರ ಮುಖ್ಯಸ್ಥರ ಖಾತೆಗೆ ನೇರವಾಗಿ ಜಮೆ ಮಾಡಲಾಗುತ್ತದೆ. ಆದರೆ ಜಿಲ್ಲೆಯ 7,340 ಪಡಿತರ ಕಾರ್ಡ್‌ಗಳಿಗೆ ಈ ಹಣ ದೊರೆಯುತ್ತಿಲ್ಲ. ಬ್ಯಾಂಕ್ ಖಾತೆಗಳಿಗೆ ಕೆಲ ಫಲಾನುಭವಿಗಳು ಆಧಾರ್ ಜೋಡಣೆ ಮಾಡಿಸಿಲ್ಲ. ಇದರೊಂದಿಗೆ ವಿವಿಧ ತಾಂತ್ರಿಕ ಕಾರಣಕ್ಕೆ ಇವರ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮೆ ಮಾಡಲು ಆಗುತ್ತಿಲ್ಲ. ಇದರ ಫಲವಾಗಿ ಪಡಿತರದಾರರು ಅನ್ನಭಾಗ್ಯ ಯೋಜನೆಯ ಸೌಲಭ್ಯದಿಂದ ವಂಚಿತರಾಗಿದ್ದಾರೆ.

ಕೆಲ ತಾಂತ್ರಿಕ ಸಮಸ್ಯೆ

ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಅನುಷ್ಠಾನಕ್ಕೆ ಬಂದಿರುವ ಅನ್ನಭಾಗ್ಯ ಯೋಜನೆಯ ಹಣವನ್ನು ನೇರ ನಗದು ವರ್ಗಾವಣೆ ವ್ಯವಸ್ಥೆ(ಡಿಬಿಟಿ) ಮೂಲಕ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮೆ ಮಾಡಲಾಗುತ್ತಿದೆ. ಇದರಲ್ಲೇ ಕೆಲ ತಾಂತ್ರಿಕ ಸಮಸ್ಯೆ ಎದುರಾಗಿವೆ.

ಬಿಪಿಎಲ್ ಅಥವಾ ಅಂತ್ಯೋದಯ ಪಡಿತರ ಚೀಟಿಯನ್ನು ಹೊಂದಿರುವ ಫಲಾನುಭವಿಗಳು ಮಾನ್ಯವಾದ ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಹೊಂದಿರಬೇಕು. ಆದರೆ, ಕೆಲ ಫಲಾನುಭವಿಗಳು ಆಧಾರ್ ಮತ್ತು ಪಾನ್ ಕಾರ್ಡ್ ಜೋಡಣೆಯೇ ಮಾಡಿಕೊಂಡಿಲ್ಲ. ಕೆಲವರು ಪಾನ್ ಕಾರ್ಡ್ ಸಹ ಮಾಡಿಸಿಲ್ಲ. ಇದು ಸಹ ನಗದು ವರ್ಗಾವಣೆಗೆ ತೊಡಕಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಯೋಜನೆ ವ್ಯಾಪ್ತಿಯಿಂದ ಹೊರಗೆ ಉಳಿದ ಪಡಿತರದಾರರು

ಜಿಲ್ಲೆಯಲ್ಲಿ ಡಿಬಿಟಿಗೆ ಅರ್ಹವಾದ ಪಡಿತರ ಚೀಟಿಗಳ ಸಂಖ್ಯೆ 6,69,477 ಆಗಿದ್ದು, ಇದರಲ್ಲಿ 6,62,137 ಪಡಿತರ ಚೀಟಿಗಳಿಗೆ ಹಣ ಪಾವತಿ ಪ್ರತಿ ತಿಂಗಳು ನಿಯಮಿತವಾಗಿ ಆಗುತ್ತಿದೆ. ಆದರೆ ಬ್ಯಾಂಕ್ ಖಾತೆ ಸಮಸ್ಯೆ ಇರುವ ಕಾರಣಕ್ಕೆ 7,340 ಪಡಿತರ ಚೀಟಿಗಳಿಗೆ ಹಣ ರವಾನೆಯಾಗುತ್ತಿಲ್ಲ. ಇದರಿಂದ ಇಷ್ಟೂ ಕಾರ್ಡ್‌ದಾರರು ಯೋಜನೆ ವ್ಯಾಪ್ತಿಯಿಂದ ಹೊರಗೆ ಉಳಿದುಕೊಂಡಿದ್ದಾರೆ.

2023ರ ಜುಲೈಯಿಂದ 2024ರ ಜೂನ್‌ವರೆಗೆ ಜಿಲ್ಲೆಯಲ್ಲಿ ಬಿಡುಗಡೆಯಾದ ಅನುದಾನ ಮತ್ತು ಪಾವತಿಯಾಗಿರುವ ಒಟ್ಟು ಮೊತ್ತ 408.16 ಕೋಟಿ ರೂ. ಆಗಿದೆ. ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (ಎನ್‌ಪಿಸಿಐ) ಮೂಲಕವೇ ಹಣ ಜಮೆ ಮಾಡಲಾಗುತ್ತಿದೆ. ಹೀಗಾಗಿ ಈ ಎನ್‌ಪಿಸಿಐ ಸಮಸ್ಯೆಯಿಂದಾಗಿ ಏಪ್ರಿಲ್ ಅಂತ್ಯಕ್ಕೆ ಹಣ ಪಾವತಿಯಾದ 9,492 ಪ್ರಕರಣಗಳು ಇದ್ದವು. ಇದರಲ್ಲಿ ಮೇ ಮಾಹೆಯಲ್ಲಿ 656, ಜೂನ್ ಮಾಹೆಯಲ್ಲಿ 1,496, ಜುಲೈ ಮಾಹೆಯಲ್ಲಿ 4,105 ಪ್ರಕರಣಗಳನ್ನು ಸರಿಪಡಿಸಿ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡಲಾಗುತ್ತಿದೆ. ಈ ಸಮಸ್ಯೆ ಸರಿಪಡಿಸುವ ಕೆಲಸ ಇನ್ನೂ ಪ್ರಗತಿಯಲ್ಲಿ ಇದೆ.

ಈ ತಾಂತ್ರಿಕ ಸಮಸ್ಯೆ ಸರಿಪಡಿಸುವ ಕೆಲಸವನ್ನು ಆಹಾರ ಇಲಾಖೆಯಿಂದ ಮಾಡಲಾಗುತ್ತಿದೆ. ಎನ್‌ಪಿಸಿಐ ವೈಫಲ್ಯದಿಂದ ಹಣ ಜಮೆ ಆಗದ ಫಲಾನುಭವಿಗಳ ಪಟ್ಟಿಯನ್ನು ನ್ಯಾಯಬೆಲೆ ಅಂಗಡಿವಾರು ಸಿದ್ಧಪಡಿಸಲಾಗಿದೆ. ಈ ಪಟ್ಟಿಯನ್ನು ನ್ಯಾಯಬೆಲೆ ಅಂಗಡಿ ಮುಂದೆ ಸಹ ಪ್ರದರ್ಶಿಸಲಾಗಿದೆ. ಜತೆಗೆ ಫಲಾನುಭವಿಗಳ ಗಮನಕ್ಕೂ ತರಲಾಗಿದೆ. ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ವತಿಯಿಂದ ಶಿಬಿರ ಮಾಡಿಸಲಾಗುತ್ತಿದೆ. ಫಲಾನುಭವಿಗಳಿಂದ ಇತರ ಬ್ಯಾಂಕ್‌ಗಳಿಂದ ಬ್ಯಾಂಕ್ ಖಾತೆ ತೆರೆಸಲಾಗುತ್ತಿದೆ. ಎನ್‌ಪಿಸಿಐ ಮ್ಯಾಪ್ ಮಾಡಿಸಿ ಸಮಸ್ಯೆ ಬಗೆಹರಿಸಲು ಕ್ರಮ ವಹಿಸಲಾಗಿದೆ ಎಂದು ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಜಂಟಿ ನಿರ್ದೇಶಕಿ ಕುಮುದಾ ಶರತ್ ವಿಜಯವಾಣಿಗೆ ತಿಳಿಸಿದ್ದಾರೆ.

ಮೈಸೂರಿನಲ್ಲೇ ಹೆಚ್ಚು ಪ್ರಕರಣ

ಜಿಲ್ಲೆಯಲ್ಲಿ ಮೈಸೂರು ಮತ್ತು ನಂಜನಗೂಡು ತಾಲೂಕಿನಲ್ಲೇ ಬಹಳಷ್ಟು ಫಲಾನುಭವಿಗಳಿಗೆ ಹಣ ಬಂದಿಲ್ಲ. ಉಳಿದ ತಾಲೂಕಿನಲ್ಲಿ ಈ ಸಂಖ್ಯೆ ಮೂರಂಕಿ ದಾಟಿಲ್ಲ. ಗ್ರಾಮಾಂತರ ಪ್ರದೇಶದ ಫಲಾನುಭವಿಗಳು ಬ್ಯಾಂಕ್ ಖಾತೆ, ಅದಕ್ಕೆ ಆಧಾರ್ ಮತ್ತು ಪಾನ್ ಕಾರ್ಡ್ ಜೋಡಣೆಯನ್ನು ವ್ಯವಸ್ಥಿತವಾಗಿ ಮಾಡಿಸಿಕೊಂಡಿದ್ದಾರೆ. ಈ ವಿಷಯದಲ್ಲಿ ಗ್ರಾಮಾಂತರ ಫಲಾನುಭವಿಗಳಿಗಿಂತ ನಗರ ಪ್ರದೇಶ ಫಲಾನುಭವಿಗಳು ಹಿಂದೆ ಉಳಿದಿದ್ದಾರೆ.

ತಾಂತ್ರಿಕ ಕಾರಣಕ್ಕೆ ಅನ್ನಭಾಗ್ಯ ಯೋಜನೆಯ ಹಣ ಕೆಲ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಜಮಾ ಆಗುತ್ತಿಲ್ಲ. ಈ ಸಮಸ್ಯೆ ಸರಿಪಡಿಸಲು ಕ್ರಮ ತೆಗೆದುಕೊಳ್ಳಲಾಗಿದೆ.ಕುಮುದಾ ಶರತ್, ಜಂಟಿ ನಿರ್ದೇಶಕಿ, ಆಹಾರ ಇಲಾಖೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net