ಆಕಾಂಕ್ಷಿಗಳ ಮಧ್ಯೆ ಅಘೋಷಿತ ಬಣ ಸೃಷ್ಟಿ

Undeclared faction creation among aspirants
ಶಿರಸಿಯ ಕೆಡಿಸಿಸಿ ಬ್ಯಾಂಕ್ ಪ್ರಧಾನ ಕಚೇರಿ.
Published on

ಮಂಜುನಾಥ ಸಾಯೀಮನೆ ಶಿರಸಿ

ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಕೆಡಿಸಿಸಿ ಬ್ಯಾಂಕ್‌ನ ನಿರ್ದೇಶಕ ಸ್ಥಾನಗಳಿಗೆ ಚುನಾವಣಾ ದಿನಾಂಕ ಹತ್ತಿರ ಬರುತ್ತಿದ್ದಂತೆಯೇ ಆಕಾಂಕ್ಷಿತರ ನಡುವೆ ಈಗ ಅಘೋಷಿತ ಬಣ ನಿರ್ಮಾಣವಾಗಿದೆ.

ಹಾಲಿ ಅಧ್ಯಕ್ಷ ಶಿವರಾಮ ಹೆಬ್ಬಾರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ನಡುವೆ ಅಘೋಷಿತ ಶೀತಲ ಸಮರ ಆರಂಭಗೊಂಡಿದೆ. 16 ನಿರ್ದೇಶಕ ಸ್ಥಾನದಲ್ಲಿ ಅತಿ ಹೆಚ್ಚು ಸ್ಥಾನ ಪಡೆದು ಅಧ್ಯಕ್ಷ ಸ್ಥಾನ ಗಿಟ್ಟಿಸಿಕೊಳ್ಳುವ ಕಸರತ್ತು ಆರಂಭಗೊಂಡಿದೆ.

ಹೌದು, ಕೆಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನ, ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಮುಸುಕಿನ ಗುದ್ದಾಟ ಹೊಸದಲ್ಲ. ಆದರೆ, ಈ ಬಾರಿ ಪ್ರತಿಷ್ಠೆ, ಛಲದೊಂದಿಗೆ ಹೋರಾಟ ನಿರೀಕ್ಷೆಗೂ ಮುನ್ನವೇ ಆರಂಭಗೊಂಡಿದೆ. ಅ.25ರಂದು ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆಲಿದೆ. ಈಗಲೇ ಶಿವರಾಮ ಹೆಬ್ಬಾರ್ ಹಾಗೂ ಮಂಕಾಳ ವೈದ್ಯ ಎಂಬ ಎರಡು ಧ್ರುವಗಳ ನಿರ್ಮಾಣವಾಗಿದೆ.

ಹಾಲಿ ನಿರ್ದೇಶಕರು, ಸಂಭಾವ್ಯರಲ್ಲಿ ಹೆಚ್ಚಿನವರು ಈಗ ಈ ಎರಡರಲ್ಲಿ ಒಂದು ಧ್ರುವದತ್ತ ವಾಲಿದ್ದಾರೆ. ಕುತೂಹಲದ ಸಂಗತಿ ಎಂದರೆ ಕೆಲವರು ಒಂದು ದಿನ ಆ ಧ್ರುವದತ್ತ ವಾಲಿದದರೆ ಮರುದಿನ ತಟಸ್ಥರಂತೆಯೂ, ಮಾರನೇ ದಿನ ಇನ್ನೊಂದು ಧ್ರುವದತ್ತ ವಾಲಿಕೊಂಡಂತೆ ಕಂಡುಬರುತ್ತಿದೆ. ಹೆಚ್ಚಿನವರು ಯಾವ ಬಣದಿಂದ ಸ್ಪರ್ಧಿಸಲಿದ್ದಾರೆ ಎಂಬುದು ಖಚಿತಗೊಂಡಿರುವುದರಿಂದ, ಅರಲು ಗದ್ದೆಯಲ್ಲಿಯ ಗೂಟದಂತೆ ಇರುವವರು ಕುತೂಹಲಕ್ಕೆ ಕಾರಣರಾಗಿದ್ದಾರೆ.

ಪ್ರತಿ ತಾಲೂಕಿಗೆ ಒಂದರಂತೆ 11 ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳು ನಿರ್ಣಾಯಕ ಪಾತ್ರ ವಹಿಸಲಿವೆ. ಪ್ರತಿ ತಾಲೂಕಿನಲ್ಲಿ ಸ್ಥಳೀಯ ಸಹಕಾರಿ ಸಂಘಗಳ ಅಧ್ಯಕ್ಷರು ಅಥವಾ ಅಧ್ಯಕ್ಷರು ಸೂಚಿಸಿದ ವ್ಯಕ್ತಿ ಮತ ಚಲಾಯಿಸಿ ತಾಲೂಕಿನಿಂದ ಒಬ್ಬ ನಿರ್ದೇಶಕನನ್ನು ಕೆಡಿಸಿಸಿಗೆ ಆಯ್ಕೆ ಮಾಡಿ ಕಳಿಸಬೇಕಾಗುತ್ತದೆ. ವಿಶೇಷವೆಂದರೆ ಘಟ್ಟದ ಕೆಳಗಿನ ತಾಲೂಕುಗಳಲ್ಲಿ ಶಿವರಾಮ ಹೆಬ್ಬಾರ್ ಶಕ್ತಿಯೇ ಅಧಿಕವಾಗಿದೆ. ಭಟ್ಕಳವನ್ನು ಹೊರತು ಪಡಿಸಿ ಉಳಿದ ತಾಲೂಕುಗಳಲ್ಲಿ ಶಿವರಾಮ ಹೆಬ್ಬಾರ್ ಅಲೆ ಕಂಡುಬರುತ್ತಿದೆ. ಆದರೆ, ಘಟ್ಟದ ಮೇಲಿನ ತಾಲೂಕುಗಳಲ್ಲಿ ಕೆಲವೆಡೆ ಮಿಶ್ರ ಪ್ರತಿಕ್ರಿಯೆ ಇದ್ದರೂ ಕೆಲ ತಾಲೂಕುಗಳಲ್ಲಿ ಮಂಕಾಳ ವೈದ್ಯ ಅವರ ಪರ ಅಲೆ ಕಾಣಿಸುತ್ತಿದೆ. ಹೀಗಾಗಿ, ತಮ್ಮ ಅಭ್ಯರ್ಥಿ ಗೆಲುವಿನ ಸಾಧ್ಯತೆ ಕಡಿಮೆ ಇರುವ ತಾಲೂಕುಗಳಲ್ಲಿ ಈ ಇಬ್ಬರೂ ಸಹಕಾರಿ ಸಂಘಗಳ ಅಧ್ಯಕ್ಷರ ಮನವೊಲಿಸಲು ತೀವ್ರ ಕಸರತ್ತು ನಡೆಸಿದ್ದಾರೆ. ಶಿವರಾಮ ಹೆಬ್ಬಾರ್ ಅವರ ಕ್ಷೇತ್ರವಾದ ಯಲ್ಲಾಪುರ ತಾಲೂಕಿನಲ್ಲಿ ಮಂಕಾಳ ವೈದ್ಯ ಬಣದಿಂದ ಸಹಕಾರಿ ಜಿ.ಎನ್. ಗಾಂವಕರ್ ಸ್ಪರ್ಧಿಸುವುದು ಬಹುತೇಕ ಖಚಿತಗೊಂಡಿದೆ. ಇನ್ನು ಮಂಕಾಳ ವೈದ್ಯ ಅವರ ಭಟ್ಕಳ ಕ್ಷೇತ್ರದಲ್ಲಿ ಶಿವರಾಮ ಹೆಬ್ಬಾರ್ ಅವರ ಬಣದಿಂದ ಪ್ರಬಲ ಸ್ಪರ್ಧಿಯ ಹುಡುಕಾಟ ನಡೆದಿದೆ.

ಯಾವ ಕ್ಷೇತ್ರಕ್ಕೆ ಯಾರ ಸಾಧ್ಯತೆ?

ಪ್ರಾಥಮಿಕವಾಗಿ ಶಿವರಾಮ ಹೆಬ್ಬಾರ್ ಬಣ ಹಾಗೂ ಮಂಕಾಳ ವೈದ್ಯ ಬಣದಿಂದ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸಿದ್ಧವಾಗಿದೆ. ಶಿವರಾಮ ಹೆಬ್ಬಾರ್ ಬಣದಿಂದ ಶಿರಸಿಗೆ ಎಂ.ಎ. ಹೆಗಡೆ, ಸಿದ್ದಾಪುರಕ್ಕೆ ರಾಘವೇಂದ್ರ ಶಾಸ್ತ್ರಿ, ಕುಮಟಾಕ್ಕೆ ರಾಜಗೋಪಾಲ ಅಡಿ, ಹೊನ್ನಾವರಕ್ಕೆ ವಿ.ಎನ್. ಭಟ್ ಅಳ್ಳಂಕಿ, ಭಟ್ಕಳಕ್ಕೆ ಇನ್ನೂ ಆಯ್ಕೆ ಆಗಬೇಕಿದೆ. ಯಲ್ಲಾಪುರದಿಂದ ಶಿವರಾಮ ಹೆಬ್ಬಾರ್, ಮುಂಡಗೋಡದಿಂದ ಎಚ್.ಎಂ. ನಾಯ್ಕ, ಹಳಿಯಾಳದಿಂದ ಶ್ರೀನಿವಾಸ ಘೋಟ್ನೇಕರ್, ಜೊಯಿಡಾದಿಂದ ಕೃಷ್ಣ ದೇಸಾಯಿ, ಅಂಕೋಲಾದಿಂದ ಬಾಬು ಸುಂಕೇರಿ, ಕಾರವಾರದಿಂದ ಪ್ರಕಾಶ ಗುನಗಿ ಬಹುತೇಕ ಖಚಿತಗೊಂಡಿದ್ದಾರೆ.

ಇನ್ನು ಮಾರ್ಕೆಟಿಂಗ್ ವಿಭಾಗದಿಂದ ಆರ್.ಎಂ. ಹೆಗಡೆ, ಔದ್ಯೋಗಿಕ ಕ್ಷೇತ್ರದಿಂದ ರಾಜೇಂದ್ರ ತಟ್ಟಿಸರ, ಅರ್ಬನ್ ಹಾಗೂ ಸೌಹಾರ್ದ ಬ್ಯಾಂಕ್‌ಗಳಿಂದ ಅಭ್ಯರ್ಥಿ ನಿರ್ಧಾರವಾಗಬೇಕಿದ್ದು, ಹಾಲು ಒಕ್ಕೂಟ ಹಾಗೂ ಮೀನುಗಾರರ ಸಂಘಗಳಿಂದ ಶಂಕರ ಹೆಗಡೆ ಹಾಗೂ ಗ್ರಾಹಕರ ಪ್ರತಿನಿಧಿ ಕ್ಷೇತ್ರದಿಂದ ತಿಮ್ಮಯ್ಯ ಹೆಗಡೆ ಸ್ಪರ್ಧೆಗಿಳಿಯುವುದು ಖಚಿತವಾಗಿದೆ.

ಮಂಕಾಳ ವೈದ್ಯ ಬಣದಿಂದ ಶಿರಸಿಗೆ ಜಿ.ಆರ್. ಹೆಗಡೆ, ಸಿದ್ದಾಪುರಕ್ಕೆ ವಿವೇಕ ಭಟ್ ಗುಡಿಹಿತ್ಲು, ಕುಮಟಾದಿಂದ ಗಜಾನನ ಪೈ, ಹೊನ್ನಾವರದಿಂದ ಎನ್.ಕೆ. ವಿಶಾಲ, ಭಟ್ಕಳದಿಂದ ಮಂಕಾಳ ವೈದ್ಯ, ಯಲ್ಲಾಪುರದಿಂದ ಜಿ.ಎನ್. ಗಾಂವಕರ್, ಮುಂಡಗೋಡಿನಿಂದ ಎಲ್.ಟಿ. ಪಾಟೀಲ, ಹಳಿಯಾಳದಿಂದ ಸುಭಾಷ ಕೊರ್ವೇಕರ್, ಜೊಯಿಡಾದಿಂದ ಮಂಗೇಶ, ಅಂಕೋಲಾದಿಂದ ವಿಜಯಕುಮಾರ ಬಹುತೇಕ ಖಚಿತವಾಗಿದೆ.

ಕಾರವಾರದಿಂದ ಮಂಕಾಳ ವೈದ್ಯ ಬಣದಿಂದ ಸತೀಶ ಸೈಲ್ ಹೆಸರು ಅಂತಿಮಗೊಂಡಿತ್ತಾದರೂ ಅಕ್ರಮ ಆಸ್ತಿ ಗಳಿಕೆ ಹಿನ್ನೆಲೆಯಲ್ಲಿ ಅವರು ಜೈಲು ಪಾಲಾಗಿರುವುದರಿಂದ ಬದಲಿ ಅಭ್ಯರ್ಥಿಯ ಹುಡುಕಾಟ ನಡೆದಿದೆ. ಮಾರ್ಕೆಟಿಂಗ್ ವಿಭಾಗಕ್ಕೆ ಮಂಕಾಳ ವೈದ್ಯ ಅವರ ಒಲವು ಟಿಎಸ್‌ಎಸ್ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಅವರೆಡೆ ಇದ್ದರೆ, ಔದ್ಯೋಗಿಕ ವಿಭಾಗದಲ್ಲಿ ವಿಶ್ವನಾಥ ಭಟ್ ಅವರಿಗೆ ಅವಕಾಶ ಸಾಧ್ಯತೆ ಇದೆ. ಹಾಲಿ ಉಪಾಧ್ಯಕ್ಷ ಮೋಹನದಾಸ ನಾಯಕ ಅರ್ಬನ್, ಸೌಹಾರ್ದ ವಿಭಾಗದಿಂದ, ಗ್ರಾಹಕರ ಪ್ರತಿನಿಧಿ ವಿಭಾಗದಿಂದ ನಿರಂಜನ ಹೆಗಡೆ ಖಚಿತಗೊಂಡಿದ್ದಾರೆ.

ಧಾರವಾಡ ಹಾಲು ಒಕ್ಕೂಟದ ಉಪಾಧ್ಯಕ್ಷ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಹಾಲು ಉತ್ಪಾದಕರ ಸಮಸ್ಯೆಗಳಿಗೆ ಸ್ಪಂದಿಸಿ ಗೆಲುವನ್ನು ಬಹುತೇಕ ಧೃಢಪಡಿಸಿಕೊಂಡಿದ್ದಾರೆ. ಧಾರವಾಡ ಹಾಲು ಒಕ್ಕೂಟದ ಚುನಾವಣೆಯಲ್ಲಿ ಕೆಶಿನ್ಮನೆ ವಿರುದ್ಧ ಶಿವರಾಮ ಹೆಬ್ಬಾರ್ ತಮ್ಮ ಅಭ್ಯರ್ಥಿಯೋರ್ವನನ್ನು ಕಣಕ್ಕಿಳಿಸಿದ್ದರು ಎನ್ನಲಾಗಿದೆ. ಹೀಗಾಗಿ ಈಗ ಮಂಕಾಳ ವೈದ್ಯ ಅವರನ್ನೇ ಕೆಶಿನ್ಮನೆ ಬೆಂಬಲಿಸುವ ಸಾಧ್ಯತೆಇದೆ.

ಹೆಬ್ಬಾರ್-ವೈದ್ಯ ಕಾಳಗದ ಮಧ್ಯೆ ಬೇರೆಯವರೂ ಆಸಕ್ತಿ ತೋರುತ್ತಿದ್ದಾರೆ. ಶಿರಸಿಯ ಸ್ಕೊಡ್ವೆಸ್ ಸಂಸ್ಥೆಯ ಸರಸ್ವತಿ ಎನ್. ರವಿ, ಅಂಕೋಲಾ ಶ್ರೀರಾಮ ಸಂಸ್ಥೆಯ ವಸಂತ ನಾಯಕ, ವಿನಾಯಕ ಹೆಗಡೆ ಮುಂಡಗೇಸರ ಸಹ ಸ್ಪರ್ಧಿಸುವುದಾಗಿ ಆಪ್ತ ವಲಯದಲ್ಲಿ ಹೇಳಿಕೊಂಡಿದ್ದಾರೆ. ಯಾವ ಕ್ಷೇತ್ರಕ್ಕೆ ಸ್ಪರ್ಧಿಸಲಿದ್ದಾರೆ, ಯಾರ ಬೆಂಬಲ ಪಡೆಯಲಿದ್ದಾರೆ ಎಂಬುದೆಲ್ಲ ಇನ್ನು ಮೇಲಷ್ಟೇ ಗೊತ್ತಾಗಬೇಕಿದೆ.

ಸದ್ದು ಮಾಡಲಿದೆಯಾ ಕಾಂಚಾಣ?

ಶಿವರಾಮ ಹೆಬ್ಬಾರ್ ಹಾಗೂ ಮಂಕಾಳ ವೈದ್ಯ ಇಬ್ಬರೂ ಕೆಡಿಸಿಸಿ ಬ್ಯಾಂಕ್ ಹುದ್ದೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿದ್ದು, ಕಾಂಚಾಣ ಹರಿದಾಡಲಿದೆಯಾ ಎಂಬ ಪ್ರಶ್ನೆ ಮೂಡಿದೆ. ಏಕೆಂದರೆ, 16ರಲ್ಲಿ 9 ಸ್ಥಾನ ಪಡೆದುಕೊಳ್ಳುವ ಬಣಕ್ಕೆ ಅಧ್ಯಕ್ಷ ಗಾದಿ ಸಿಗಲಿದೆ. ಮತದಾರರಾದ ಪ್ರಾಥಮಿಕ ಪತ್ತಿನ ಸಹಕಾರಿ ಸಂಘಗಳ ಅಧ್ಯಕ್ಷರನ್ನು ಮುಂದಿನ ದಿನಗಳಲ್ಲಿ ಈ ಇಬ್ಬರೂ ಬುಟ್ಟಿಗೆ ಹಾಕಿಕೊಳ್ಳುವ ಕಸರತ್ತು ನಡೆಸಲಿದ್ದಾರೆ. ಎದುರಾಳಿ ಸ್ಪರ್ಧಿಯನ್ನು ಹಣಿಯುವ ತೀವ್ರ ಕಸರತ್ತಿನ ನಡುವೆ ಕಾಂಚಾಣ ಸದ್ದು ಮಾಡಲಿದೆ ಎಂಬ ಮಾತುಗಳೂ ಕೇಳಿಬರುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net