ಉಂಡೆ, ಕಡಬು ನೈವೇದ್ಯ

21-ANP-P1
ಆನಂದಪುರದ ಗಾಣಿಗನ ಕೆರೆ ಮೇಲ್ಭಾಗದಲ್ಲಿರುವ ಅರಳಿ ಕಟ್ಟೆಯಲ್ಲಿ ಭಕ್ತರು ನಾಗರ ಪೂಜೆ ಸಲ್ಲಿಸಿದರು.
Published on

ಆನಂದಪುರ: ಸುತ್ತಮುತ್ತಲ ಊರುಗಳಲ್ಲಿ ನಾಗ ಪಂಚಮಿ ಹಬ್ಬ ಶ್ರದ್ಧಾ ಭಕ್ತಿಗಳಿಂದ ಆಚರಿಸಲ್ಪಟ್ಟಿತ್ತು. ಮಹಿಳೆಯರು ಮತ್ತು ಮಕ್ಕಳು ಸೇರಿ ಕುಟುಂಬಸ್ಥರೆಲ್ಲ ನಾಗರ ಬನದಲ್ಲಿ ಪೂಜೆ ಸಲ್ಲಿಸಿದರು.
ಮಾವಿನ ತೋರಣ, ಬಾಳೆ ಕಂದು, ಹೂವಿನ ಹಾರಗಳಿಂದ ನಾಗ ದೇವರಿರುವ ಕಟ್ಟೆಯನ್ನು ಹಬ್ಬದ ಮುನ್ನ್ನ ದಿನವಾದ ಭಾನುವಾರವೇ ಅಲಂಕರಿಸಲಾಗಿತ್ತು. ಎಳನೀರು, ಹಾಲು, ಮೊಸರು, ಜೇನು ತುಪ್ಪ ಇತ್ಯಾದಿಗಳ ಅಭಿಷೇಕ ಮಾಡಿ, ಹೂವಿನಿಂದ ಅಲಂಕರಿಸಿ ನಾಗರಕಲ್ಲನ್ನು ಪೂಜಿಸಿದ ದೃಶ್ಯ ಕಂಡು ಬಂದಿತು. ದೇವರ ವಿಗ್ರಹಕ್ಕೆ ಹೂವಿನ ಹಾರ, ಗೆಜ್ಜೆ ವಸ್ತ್ರದ ಹಾರ ಇತ್ಯಾದಿ ಸಮರ್ಪಿಸಿದ ಭಕ್ತರು ಉಂಡೆ, ಕಡಬು, ಹಣ್ಣು -ಕಾಯಿ ಇತ್ಯಾದಿಗಳ ನೈವೇದ್ಯ ನೀಡಿ ಒಳಿತಿಗಾಗಿ ಪ್ರಾರ್ಥಿಸಿದರು.
ಇಲ್ಲಿನ ಗಾಣಿಗನ ಕೆರೆ ಮೇಲ್ಭಾಗದಲ್ಲಿರುವ ಅರಳಿಕಟ್ಟೆ, ಬಳ್ಳೀಬೈಲು ರಸ್ತೆಯ ತಿರುವಿನಲ್ಲಿರುವ ನಾಗರಕಟ್ಟೆ, ರಾಮ ಮಂದಿರ ಸಮೀಪದ ಒಣಿಯ ಒಳಗಿರುವ ಕಟ್ಟೆ, ಅಶೋಕ ರಸ್ತೆಯ ಸುಬ್ರಹ್ಮಣ್ಯ ದೇವಾಲಯ, ಜೇಡಿಸರದ ನಾಗಮ್ಮ ದೇವಾಲಯಗಳಲ್ಲಿ ಭಕ್ತರು ಅಧಿಕ ಸಂಖ್ಯೆಯಲ್ಲಿ ತೆರಳಿ ಪೂಜೆ ಸಲ್ಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net