

ತಿ.ನರಸೀಪುರ: ಬೆನಕನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಬಿ.ಎಂ.ಬಸವಣ್ಣ(ಟ್ರ್ಯಾಕ್ಟರ್), ಉಪಾಧ್ಯಕ್ಷರಾಗಿ ಬಿ.ಎನ್.ಪ್ರಕಾಶ್ ಗುರುವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದರು.
ಬೆನಕನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಸಭಾ ಭವನದಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ಸಂಬಂಧ ಕರೆಯಲಾಗಿದ್ದ ಚುನಾವಣಾ ವಿಶೇಷ ಸಭೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಬಯಸಿ ಬಿ.ಎಂ.ಬಸವಣ್ಣ ಹಾಗೂ ಬಿ.ಎನ್. ಪ್ರಕಾಶ್ ಇಬ್ಬರು ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಇವರಿಬ್ಬರ ಅವಿರೋಧ ಆಯ್ಕೆಯನ್ನು ಸಹಕಾರ ಸಂಘದ ಚುನಾವಣಾಧಿಕಾರಿ ರಾಜಣ್ಣ ಪ್ರಕಟಿಸಿದರು.
ಸಂಘದ ಆಡಳಿತ ಮಂಡಳಿಯ ನಿರ್ದೇಶಕರಾದ ನಾಗೆಂದ್ರ, ಬಿ.ಎಂ.ಮಹೇಶ್, ಬಿ.ಎಂ.ಶಿವಕುಮಾರಸ್ವಾಮಿ, ಮಹದೇವಸ್ವಾಮಿ, ರಾಜಬುದ್ದಿ, ಸಿ.ಮರಿಸ್ವಾಮಿ, ಬಿ.ಎಂ.ಬಸವಣ್ಣ, ಸಿ.ಎಂ.ಇಂದ್ರಮ್ಮ ಹಾಗೂ ಶಿವಮ್ಮ ಚುನಾವಣೆಗೆ ಹಾಜರಾಗಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಗೆ ಅನುಮೋದನೆ ನೀಡಿದರೆ, ಮತ್ತೊಬ್ಬ ನಿರ್ದೇಶಕ ಎಂ.ಗಿರೀಶ್ ಗೈರಾಗಿದ್ದರು.
ಡೇರಿಯ ನೂತನ ಅಧ್ಯಕ್ಷ ಬಿ.ಎಂ.ಬಸವಣ್ಣ ಮಾತನಾಡಿ, ಹಾಲು ಉತ್ಪಾದಕರಿಗೆ ದೊರಕಬೇಕಾದ ಸವಲತ್ತು ಹಾಗೂ ಸೌಲಭ್ಯಗಳನ್ನು ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಬೆನಕನಹಳ್ಳಿ ಡೇರಿಯನ್ನು ತಾಲೂಕಿನಲ್ಲಿಯೇ ಮಾದರಿ ಡೈರಿ ಮಾಡಬೇಕೆಂಬ ಅಭಿಲಾಷೆ ಹೊಂದಿರುವ ನನ್ನ ಆಶಯಕ್ಕೆ ನಿರ್ದೇಶರು ಸಹಕರಿಸಿ ಎಂದು ಮನವಿ ಮಾಡಿದರು.
ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಬಿ.ಎಂ.ಶಿವಮಲ್ಲಪ್ಪ, ಗ್ರಾಮದ ಮಠಾಧೀಶ ಶ್ರೀ ಮಹಾದೇವ ಸ್ವಾಮೀಜಿ, ಯಜಮಾನರಾದ ಬಿ.ಜೆ.ರಾಜಶೇಖರಮೂರ್ತಿ, ಬಿ.ಜೆ.ರಮೇಶನ್, ಬಿ.ಪಿ.ಮಹದೇವಸ್ವಾಮಿ, ಬಿ.ಜಿ.ಗುರುಸ್ವಾಮಿ, ಬಿ.ಎಸ್.ಪ್ರಭುಸ್ವಾಮಿ, ರವೀಂದ್ರಬಾಬು, ಹೂವಿನ ಸಿದ್ದಪ್ಪ, ವಿಜಯಕುಮಾರ್, ಕುಮಾರ್, ಬಿ.ಪಿ.ಶಿವಸ್ವಾಮಿ, ಭಜನೆ ಮಧು, ಮಹಾಲಿಂಗಪ್ಪ, ಗುರುಮೂರ್ತಿ, ಬಿ.ಜಿ.ಮಲ್ಲಿಕಾರ್ಜುನಸ್ವಾಮಿ, ಗ್ರಾಪಂ ಅಧ್ಯಕ್ಷ ಮಂಟೇಲಿಂಗು, ಸದಸ್ಯ ಸಂಭ್ರಮ್, ಬಿ.ಸಿ.ನಾಗೇಶ್, ಗಂಗಾಧರಸ್ವಾಮಿ, ಗೌರಮ್ಮ ಮತ್ತಿತರರಿದ್ದರು.