ಕಾಂಗ್ರೆಸ್​ನಿಂದ ಸಂವಿಧಾನ ವಿರೋಧಿ ಆಡಳಿತ

Chikkaballapuradalli Congress Viruddha BJP Pratibatane
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
Published on

ಚಿಕ್ಕಬಳ್ಳಾಪುರದಲ್ಲಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬಿಜೆಪಿ ಪ್ರತಿಭಟನೆ

ವಿಜಯವಾಣಿ ಸುದ್ದಿಜಾಲ ಚಿಕ್ಕಬಳ್ಳಾಪುರ
ಬೆಂಗಳೂರಿನಲ್ಲಿ ಶಂಕಿತ ಭಯೋತ್ಪಾದಕರ ಬಂಧನ ಪ್ರಕರಣವನ್ನು ಎನ್​ಐಎ ತನಿಖೆಗೆ ವಹಿಸುವಿಕೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಗರದಲ್ಲಿ ಬಿಜೆಪಿ ಪ್ರತಿಭಟಿಸಿತು.
ಅಂಬೇಡ್ಕರ್​ ವೃತ್ತದಲ್ಲಿ ಸೋಮವಾರ ರಸ್ತೆ ತಡೆ ನಡೆಸಿ ಧಿಕ್ಕಾರಗಳನ್ನು ಕೂಗಿದ ಪ್ರತಿಭಟನಾಕಾರರು, ರಾಜ್ಯ ಕಾಂಗ್ರೆಸ್​ ಧೋರಣೆಗೆ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾ ಬಿಜೆಪಿ ಅಧ್ಯ ಎಂ.ರಾಮಲಿಂಗಪ್ಪ ಮಾತನಾಡಿ, ಗ್ಯಾರಂಟಿ ಭರವಸೆಗಳ ಮೂಲಕ ಸ್ಪಷ್ಟ ಬಹುಮತದೊಂದಿಗೆ ಆಡಳಿತಕ್ಕೆ ಬಂದ ಕಾಂಗ್ರೆಸ್​, ಆರ್ಥಿಕ ಹೊರೆಯನ್ನು ತಪ್ಪಿಸಿಕೊಳ್ಳಲು ಇತರ ವಸ್ತುಗಳ ಮತ್ತು ಸೇವೆಗಳ ದರವನ್ನು ಹೆಚ್ಚಿಸುತ್ತಿದೆ. ಒಂದು ಕಡೆ ಕೊಟ್ಟು, ಮತ್ತೊಂದು ಕಡೆ ಕಿತ್ತುಕೊಳ್ಳುವ ತಂತ್ರಗಾರಿಕೆಯಿಂದ ಜನರು ತೊಂದರೆ ಅನುಭವಿಸುವಂತಾಗಿದೆ. ಈಗಾಗಲೇ ಹೂವು, ಹಣ್ಣು, ತರಕಾರಿ, ವಿದ್ಯುತ್​ ದರ ಏರಿಕೆಯಾಗಿದೆ ಎಂದು ಕಿಡಿಕಾರಿದರು.
ಸಂವಿಧಾನ ವಿರೋಧಿ ನಡೆಯ ಆಡಳಿತವನ್ನು ಪ್ರದರ್ಶಿಸಿರುವುದನ್ನು ಖಂಡಿಸಿ, ವಿಧಾನಸೌಧದ ಅಧಿವೇಶನದಲ್ಲಿ ಪ್ರತಿಭಟಿಸಿದ ಶಾಸಕರನ್ನು ಅಮಾನತುಗೊಳಿಸಲಾಗಿದೆ. ಇದು ಪ್ರತಿಪದ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನ. ಆದರೆ, ಇದರಲ್ಲಿ ಸಫಲವಾಗುವುದಿಲ್ಲ ಎಂದು ಕಿಡಿಕಾರಿದರು.
ವಿಧಾನಪರಿಷತ್​ ಸದಸ್ಯ ಕೇಶವ್​ ಪ್ರಸಾದ್​ ಮಾತನಾಡಿ, ಬೆಂಗಳೂರಿನಲ್ಲಿ ಶಂಕಿತ ಭಯೋತ್ಪಾದಕರನ್ನು ಬಂಧಿಸಿದ್ದು ಜೈಲಿನಲ್ಲಿ ಕುಳಿತು ವಿವಿಧೆಡೆ ದಾಳಿಗಳಿಗೆ ಸಂಚು ರೂಪಿಸುವ ಮಾಹಿತಿಯು ಆತಂಕಕಾರಿ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯು ಹದಗೆಟ್ಟಿದೆ. ಬೆಳೆ ನಷ್ಟದಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೂ ಸರ್ಕಾರ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕ ಎಂ.ರಾಜಣ್ಣ, ಕೋಚಿಮುಲ್​ ಮಾಜಿ ನಿರ್ದೇಶಕ ಕೆ.ವಿ.ನಾಗರಾಜ್​, ವಿಭಾಗೀಯ ಬಿಜೆಪಿ ಸಂಟನಾ ಪ್ರಧಾನ ಕಾರ್ಯದರ್ಶಿ ಕಾಂತರಾಜ್​, ಪ್ರಧಾನ ಕಾರ್ಯದರ್ಶಿ ಎಚ್​.ಎಸ್​.ಮುರಳೀಧರ್​, ಮುಖಂಡರಾದ ಎ.ವಿ.ಭೈರೇಗೌಡ, ಮೋಹನ್​ ಮತ್ತಿತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net