ಪೂರ್ಣಗೊಳ್ಳದ ಜಲಜೀವನ್ ಮಿಷನ್ ಕಾಮಗಾರಿ

ಅರಕಲಗೂಡು ತಾಲೂಕಿನ ಶಣವಿನಕುಪ್ಪೆ ಗ್ರಾಮದಲ್ಲಿ ಪೈಪ್‌ಲೈನ್ ಅಳವಡಿಸಿ ಕಾಮಗಾರಿಯನ್ನು ಅಪೂರ್ಣ ಮಾಡಿರುವುದು.
ಅರಕಲಗೂಡು ತಾಲೂಕಿನ ಶಣವಿನಕುಪ್ಪೆ ಗ್ರಾಮದಲ್ಲಿ ಪೈಪ್‌ಲೈನ್ ಅಳವಡಿಸಿ ಕಾಮಗಾರಿಯನ್ನು ಅಪೂರ್ಣ ಮಾಡಿರುವುದು.
Published on

ಅರಕಲಗೂಡು: ತಾಲೂಕಿನಲ್ಲಿ ಕೈಗೆತ್ತಿಕೊಳ್ಳಲಾಗಿರುವ ಜಲಜೀವನ್ ಮಿಷನ್ ಯೋಜನೆ ಕಾಮಗಾರಿ ಕುಂಟುತ್ತ ಸಾಗುತ್ತಿದ್ದು, ತ್ವರಿತಗತಿಯಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸುವತ್ತ ಗುತ್ತಿಗೆದಾರರು ಆಸಕ್ತಿ ತೋರುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ.

ತಾಲೂಕಿನ 36 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ 285 ಕೋಟಿ ರೂ. ವೆಚ್ಚದಲ್ಲಿ ಈ ಯೋಜನೆಯನ್ನು ಅನುಷ್ಠಾನಗೊಳಿಸಲು ಕ್ರಮ ವಹಿಸಲಾಗಿದೆಯಾದರೂ, ಆಮೆಗತಿಯಲ್ಲಿ ಕಾಮಗಾರಿ ಸಾಗುತ್ತಿರುವುದರಿಂದ ಯೋಜನೆಯ ಉದ್ದೇಶವೇ ಮಣ್ಣು ಪಾಲಾಗುತ್ತಿದೆ.

ಪ್ರತಿ ಮನೆಗೆ ಶುದ್ಧ ಕುಡಿಯುವ ನೀರು ಒದಗಿಸುವ ಈ ಯೋಜನೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಶೇ.50 ರಷ್ಟು ಅನುದಾನ ನೀಡಿವೆ. ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಗಳಲ್ಲಿ ಇದು ಒಂದಾಗಿದೆ. ಕುಡಿಯುವ ನೀರಿನ ಜಲ ಜೀವನ್ ಮಿಷನ್ ಯೋಜನೆ ತಾಲೂಕಿನಲ್ಲಿ ಆರಂಭವಾಗಿ ಒಂದು ವರ್ಷ ಕಳೆದಿದ್ದು, ಗುತ್ತಿಗೆದಾರರಿಗೆ ನೀಡಿರುವ ಕಾಮಗಾರಿ ಅವಧಿ ಪೂರ್ಣಗೊಂಡಿದೆ. ಆದರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಕಷ್ಟು ಹಳ್ಳಿಗಳಲ್ಲಿ ಕಾಮಗಾರಿ ಅಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ಯೋಜನೆ ಹಳ್ಳ ಹಿಡಿಯುತ್ತಿದೆ. ಈ ನಡುವೆ ಕೆಲವು ಗ್ರಾಮಗಳಲ್ಲಿ ಕಾಮಗಾರಿಯನ್ನು ಇನ್ನೂ ಕೈಗೆತ್ತಿಕೊಂಡಿಲ್ಲ. ಕಾಮಗಾರಿಗಳನ್ನು ಪೂರ್ಣಗೊಳಿಸುವ ಸಂಬಂಧ ಗುತ್ತಿಗೆದಾರರು ಪೂರಕವಾಗಿ ಸ್ಪಂದಿಸುತ್ತಿಲ್ಲ ಎನ್ನುವುದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಆರೋಪ.

ಪ್ರತಿವರ್ಷ ಬೇಸಿಗೆ ಬಂತೆಂದರೆ ಕುಡಿಯುವ ನೀರಿಗೆ ತತ್ವಾರ ಉಂಟಾಗುವ ದೊಡ್ಡಬೆಮ್ಮತ್ತಿ, ಮಾರಗೌಡನಹಳ್ಳಿ, ವಡ್ಡರಹಳ್ಳಿ, ಹೆಬ್ಬಾಲೆ, ಲಕ್ಕನಹಳ್ಳಿ, ಚಿಕ್ಕಹಳ್ಳಿ, ಗ್ರಾಪಂ ಹಾಗೂ ಹಂಡ್ರಂಗಿ ಗ್ರಾಪಂ ವ್ಯಾಪ್ತಿಯ ಕೆಸವತ್ತೂರು, ಹೆಗ್ಗತ್ತೂರು, ಮಾಳೇನಹಳ್ಳಿ, ಸಬ್ಬತ್ತಿ, ಅಕ್ಕಲವಾಡಿ ಗ್ರಾಮದಲ್ಲಿ ಇನ್ನೂ ಕಾಮಗಾರಿಯೇ ನಡೆದಿಲ್ಲ. ಹಂಡ್ರಂಗಿ ಗ್ರಾಮದಲ್ಲಿ ಪೈಪ್‌ಲೈನ್ ಅಳವಡಿಸಿದ್ದು ಕೊಳವೆಬಾವಿ ಕೊರೆದು ನೀರಿನ ಸಂಪರ್ಕ ಕಲ್ಪಿಸಬೇಕಿದೆ. ಕಾಮಗಾರಿ ಆಗಿರುವ ನೆಹರು ನಗರದಲ್ಲಿ ಶಾಲೆ ಮತ್ತು ಅಂಗನವಾಡಿಗಳ ಸಿಂಟೆಕ್ಸ್‌ಗೆ ನೀರು ಹತ್ತುತ್ತಿಲ್ಲ. ನಲ್ಲಿಗಳಲ್ಲಿ ನೀರು ಬಿಟ್ಟಾಗಷ್ಟೆ ಹಿಡಿದುಕೊಳ್ಳುವ ಪರಿಸ್ಥಿತಿ ಇದೆ. ಗ್ರಾಮದಲ್ಲಿ ಡಿಸೆಂಬರ್ ಕಳೆದ ನಂತರ ಕುಡಿಯುವ ನೀರಿಗೆ ಅಭಾವ ಎದುರಾಗಲಿದೆ. ಹೀಗಾಗಿ ಹೆಚ್ಚುವರಿ ಕೊಳವೆ ಬಾವಿ ಕೊರೆಸುವಂತೆ ಕೇಳಿದರೂ ಗುತ್ತಿಗೆದಾರ ಸ್ಪಂದಿಸುತ್ತಿಲ್ಲ ಎನ್ನುತ್ತಾರೆ ಪಿಡಿಒ ಗಿರೀಶ್.

ಬೈಚನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರವಳಲು ಗ್ರಾಮದಲ್ಲಿ ಪೈಪ್‌ಲೈನ್ ಕೂಡ ಆಗಿಲ್ಲ. ದೇವೀಪುರ, ಚಿಕ್ಕಗಾವನಹಳ್ಳಿ ಹಾಗೂ ಗಂಜಲಗೂಡು ಗ್ರಾಪಂ ವ್ಯಾಪ್ತಿಯ ಬಸವನಹಳ್ಳಿ ಕೊಪ್ಪಲು, ಹೆಗ್ಗಡಿಹಳ್ಳಿಯ ಮುದಗನೂರು, ಅಲ್ಲಾಪಟ್ಟಣ ಗ್ರಾಮದಲ್ಲಿ ನೀರಿನ ಟ್ಯಾಂಕ್ ಸ್ಥಾಪನೆಯಾಗಿಲ್ಲ. ಕೆಲವು ಕಡೆ ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲ. ದೊಡ್ಡಮಗ್ಗೆ ಗ್ರಾಪಂ ವ್ಯಾಪ್ತಿಯ ಅನದಂತಪುರ ಗ್ರಾಮದಲ್ಲಿ ಕಳಪೆ ಕ್ಯಾಪ್ ಅಳವಡಿಸಿದ್ದು ನೀರು ಸರಬರಾಜು ಮಾಡಿದರೆ ಪೋಲಾಗುತ್ತಿದೆ ಎನ್ನುತ್ತಾರೆ ಪಿಡಿಒ ನಾಗರಾಜು. ಹಾನಗಲ್ ಗ್ರಾಮದಲ್ಲಿ ಕ್ಯೂರಿಂಗ್ ಗುಣಮಟ್ಟ ಕಾಪಾಡಿಲ್ಲ ಎನ್ನುತ್ತಾರೆ ಪಿಡಿಒ ಸಂತೋಷ್.

ಗಂಗೂರು ಗ್ರಾಪಂ ವ್ಯಾಪ್ತಿಯಲ್ಲಿ ಕಾಮಗಾರಿ ಮುಗಿಸಲು ಗುತ್ತಿಗೆದಾರರು ಮೀನಮೇಷ ಎಣಿಸುತ್ತಿದ್ದಾರೆ. ಜೆ.ಹೊಸಹಳ್ಳಿ ಗ್ರಾಮದಲ್ಲಿ ಪೈಪ್ ಒಡೆದು ನೀರು ಪೋಲಾಗುತ್ತಿದ್ದು ಪೈಪ್ ಬದಲಿಸುವಂತೆ ಹೇಳಿದರೂ ಗುತ್ತಿಗೆದಾರ ತಲೆಕೆಡಿಸಿಕೊಳ್ಳುತ್ತಿಲ್ಲ ಎನ್ನುತ್ತಾರೆ ಪಿಡಿಒ ಹೇಮಲತಾ.

ರಾಮನಾಥಪುರ ಗ್ರಾಪಂ ವ್ಯಾಪ್ತಿಯ ಕೂಡಲೂರು ಗ್ರಾಮದಲ್ಲಿ ಟ್ಯಾಂಕ್ ನಿರ್ಮಿಸಿಲ್ಲ. ನಿಯಮಾನುಸಾರ 3 ಅಡಿ ಆಳದಲ್ಲಿ ಪೈಪ್‌ಲೈನ್ ಅಳವಡಿಸಬೇಕು. ಕೆಲವು ಕಡೆ ಒಂದೆರಡು ಅಡಿಗೆ ಪೈಪ್ ಲೈನ್ ಹಾಕಲಾಗಿದೆ. ಕೊಡಕಳ್ಳಿ ಗ್ರಾಮದಲ್ಲಿ ಕಾಮಗಾರಿ ಸರಿಯಾಗದೆ ಅಳವಡಿಸಿದ್ದ ಪೈಪ್‌ಲೈನ್ ಅನ್ನು ಕಿತ್ತು ಹಾಲಾಗಿದೆ. ಬಿಳಗೂಲಿ ಗ್ರಾಮದಲ್ಲಿ 3 ಅಡಿ ಆಳಕ್ಕೆ ಪೈಪ್ ಲೈನ್ ಅಳವಡಿಸದೆ ನಿರ್ಲಕ್ಷ್ಯಿಸಲಾಗಿದೆ. ಜತೆಗೆ ಇಂಟರ್‌ಲಾಕ್ ಸರಿಯಿಲ್ಲ. ರಾಮನಾಥಪುರದಲ್ಲಿ ಸುಸ್ಥಿತಿಯಲ್ಲಿದ್ದ ಸಿಮೆಂಟ್ ರಸ್ತೆ ಮತ್ತು ಚರಂಡಿ ಅಗೆಯಲಾಗಿದ್ದು ಮರು ಕಾಮಗಾರಿ ನಡೆಸಿಲ್ಲ. ಕುಡಿಯುವ ನೀರಿನ ಮಹತ್ವಾಕಾಂಕ್ಷೆಯ ಯೋಜನೆ ಕಾಮಗಾರಿ ಅವ್ಯವಸ್ಥೆಯಿಂದ ಕೂಡಿದೆ. ಗುತ್ತಿಗೆದಾರರನ್ನು ಕೇಳಿದರೆ ಸಬೂಬು ಹೇಳುತ್ತಾರೆ ಎನ್ನುವುದು ಪಿಡಿಒ ಕುಮಾರಸ್ವಾಮಿ ಅವರ ಆರೋಪ. ಅಂತೆಯೇ ಬಸವನಹಳ್ಳಿ ಕೊಪ್ಪಲಿನಲ್ಲಿ ನೀರಿನ ಟ್ಯಾಂಕ್ ನಿರ್ಮಿಸದೆ ಸಮಸ್ಯೆಯಾಗಿದೆ. ಗುತಿಗೆದಾರ ಫೋನ್ ಕೂಡ ತೆಗೆಯುತ್ತಿಲ್ಲ ಎನ್ನುತ್ತಾರೆ ಪಿಡಿಪ ತಾಹಿರ.

ಕಾಮಗಾರಿ ಅಪೂರ್ಣವಾಗಿರುವ ಸ್ಥಳಗಳಲ್ಲಿ ಗುತ್ತಿಗೆದಾರರಿಗೆ ನೋಟಿಸ್ ನೀಡಿ ತುರ್ತು ಕ್ರಮ ವಹಿಸಬೇಕು. ಮುಂದಿನ ಬೇಸಿಗೆಯ ದಿನಗಳಲ್ಲಿ ಯಾವುದೇ ಗ್ರಾಮದಲ್ಲಿ ಕುಡಿಯುವ ನೀರಿನ ಕೊರತೆ ಎದುರಾಗದಂತೆ ಯೋಜನೆ ಜಾರಿಗೊಳಿಸಿ ಶುದ್ಧ ನೀರು ನೀಡಬೇಕು ಎಂಬುದು ಜನರ ಆಗ್ರಹ.

ಜಲ ಜೀವನ್ ಮಿಷನ್ ಯೋಜನೆಯಡಿ ಕೈಗೊಂಡಿರುವ ಕಾಮಗಾರಿಗಳು ಅಧ್ವಾನವಾಗಿದೆ. ಕೆಲವು ಕಡೆ ಕಾಮಗಾರಿಯೇ ಆಗಿಲ್ಲ. ಹಳೆಯ ಪೈಪ್‌ಲೈನ್ ವ್ಯವಸ್ಥೆ ಇದ್ದಾಗಲೇ ಉತ್ತಮವಾಗಿ ನೀರು ಸರಬರಾಜಾಗುತ್ತಿತ್ತು. ಈಗ ಕಾಮಗಾರಿಯನ್ನು ಸರಿಯಾಗಿ ಮುಗಿಸಿಲ್ಲ. ಗ್ರಾಮಗಳಲ್ಲಿ ಪೈಪ್‌ಲೈನ್ ಅಳವಡಿಸಿದ್ದು ನೀರಿನ ಸಂಪರ್ಕ ಕಲ್ಪಿಸಿಲ್ಲ. ಎತ್ತರ ಪ್ರದೇಶದಲ್ಲಿ ನೀರಿನ ಟ್ಯಾಂಕ್ ನಿರ್ಮಿಸದೆ ತಗ್ಗು ಜಾಗದಲ್ಲಿ ಸ್ಥಾಪಿಸಲಾಗಿದ್ದು ಕಾಮಗಾರಿ ಅವೈಜ್ಞಾನಿಕವಾಗಿದೆ. ಬೇಸಿಗೆ ವೇಳೆಗೆ ಕಾಮಗಾರಿ ಪೂರ್ಣಗೊಳಿಸದಿದ್ದರೆ ಕುಡಿಯುವ ನೀರಿಗೆ ತೊಂದರೆ ಅನುಭವಿಸುವುದು ತಪ್ಪುವುದಿಲ್ಲ.

ಸಂತೋಷ್ ಗ್ರಾಪಂ ಸದಸ್ಯ ಶಣವಿನಕುಪ್ಪೆ

ಜಲಜೀವನ್ ಮಿಷನ್ ಯೋಜನೆ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸದಿದ್ದರೆ ಮಾರ್ಚ್ ವೇಳೆಗೆ ಕೇಂದ್ರ ಸರ್ಕಾರದಿಂದ ಬರುವ ಅನುದಾನ ಸಿಗದೆ ಗುತ್ತಿಗೆದಾರರಿಗೆ ಸಮಸ್ಯೆ ಆಗಲಿದೆ. ಅಪೂರ್ಣವಾಗಿರುವ ಉಳಿಕೆ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ನೋಟಿಸ್ ನೀಡಿ ಕ್ರಮ ಕೈಗೊಳ್ಳಲಾಗಿದೆ. ಹೆಬ್ಬಾಲೆ, ವಡ್ಡರಹಳ್ಳಿ, ಬೈಚನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಕಾಮಗಾರಿ ಈಗ ಶುರುವಾಗಿದ್ದು ತಡವಾಗಲಿದೆ. ಬಹುತೇಕ ಗ್ರಾಪಂ ವ್ಯಾಪ್ತಿಯಲ್ಲಿ ಮಾರ್ಚ್ ವೇಳೆಗೆ ಕಾಮಗಾರಿ ಮುಗಿಸಲಾಗುವುದು.

ನವೀನ್, ಸಹಾಯಕ ಕಾರ್ಯಪಾಲಕ ಇಂಜಿನಿಯರ್, ಜೆಜೆಎಂ, ಅರಕಲಗೂಡು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net