

ಪಾಂಡವಪುರ: ರೈತರಿಂದ ಸ್ವಾಧೀನಪಡಿಸಿಕೊಂಡ ಭೂಮಿಗೆ ನ್ಯಾಯಾಲಯದ ಆದೇಶದ ನಡುವೆಯೂ ಹೆಚ್ಚುವರಿ ಪರಿಹಾರ ನೀಡಲು ಅಧಿಕಾರಿಗಳು ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಉಚ್ಚ ನ್ಯಾಯಾಲಯದ ಆದೇಶದಂತೆ ವಿಶೇಷ ಭೂ ಸ್ವಾಧೀನಾಧಿಕಾರಿಗಳಾದ ಪಾಂಡವಪುರ ಉಪವಿಭಾಗಾಧಿಕಾರಿ ಕಚೇರಿಯ ಚರಾಸ್ತಿ ಜಪ್ತಿಗೆ ಮಂಗಳವಾರ ಕೋರ್ಟ್ ಅಮೀನರು ಮುಂದಾಗಿದ್ದರು. ಈ ವೇಳೆ ಇನ್ನೆರಡು ದಿನ ಕಾಲಾವಕಾಶ ನೀಡುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
ಶ್ರೀರಂಗಪಟ್ಟಣ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣವಾದ ರಂಗನತಿಟ್ಟು ಪಕ್ಷಿಧಾಮದ ಅಭಿವೃದ್ಧಿಗಾಗಿ ಬೆಳಗೊಳ ಹೋಬಳಿ ಪಾಲಹಳ್ಳಿ ಗ್ರಾಮದ ರೈತ ಶ್ರೀನಿವಾಸಗೌಡ ಅವರ 1.11 ಎಕರೆ ಜಮೀನನ್ನು 2008ರಲ್ಲಿ ಸರ್ಕಾರ ಸ್ವಾಧೀನಪಡಿಸಿಕೊಂಡು ಪರಿಹಾರ ನೀಡಿತ್ತು. ಪರಿಹಾರದ ಮೊತ್ತ ಮಾರುಕಟ್ಟೆ ದರಕ್ಕಿಂತ ಕಡಿಮೆ ಇದೆ ಎಂಬ ಕಾರಣಕ್ಕೆ ನ್ಯಾಯಾಲಯದ ಮೆಟ್ಟಿಲೇರಿದ ರೈತ ಹೆಚ್ಚುವರಿ ಪರಿಹಾರಕ್ಕಾಗಿ ದಾವೆ ಹೂಡಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಆದೇಶ ನೀಡಿದ ನ್ಯಾಯಾಲಯ ರೈತನಿಗೆ ಬಡ್ಡಿ ಸಮೇತವಾಗಿ 52 ಲಕ್ಷ ರೂ. ಹೆಚ್ಚುವರಿ ಪರಿಹಾರ ನೀಡುವಂತೆ 2016ರಲ್ಲಿ ತೀರ್ಪು ನೀಡಿತ್ತಾದರೂ ಪರಿಹಾರ ನೀಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದರು. ಅಧಿಕಾರಿಗಳ ಬೇಜವಾಬ್ದಾರಿತನವನ್ನು ಕೋರ್ಟ್‌ನಲ್ಲಿ ಪ್ರಶ್ನಿಸಿದ್ದ ರೈತ, ಕಚೇರಿ ಚರಾಸ್ತಿ ಜಪ್ತಿಗೆ ನ್ಯಾಯಾಲಯದಿಂದ ಆದೇಶ ಪಡೆದು ಅದರಂತೆ ಉಪವಿಭಾಗಾಧಿಕಾರಿ ಕಚೇರಿ ಚರಾಸ್ತಿ ಜಪ್ತಿಗೆ ಕೋರ್ಟ್ ಅಮೀನರು ಮುಂದಾಗಿದ್ದರು.
ಕಾಲಾವಕಾಶ ಕೇಳಿದ ಅಧಿಕಾರಿಗಳು:
ನ್ಯಾಯಾಲಯದ ಆದೇಶದಂತೆ ಉಪವಿಭಾಗಾಧಿಕಾರಿ ಕಚೇರಿ ಜಪ್ತಿಗೆ ಮುಂದಾದಾಗ ಇನ್ನೆರಡು ದಿನಗಳಲ್ಲಿ ರೈತನಿಗೆ ನೀಡಬೇಕಾದ ಪರಿಹಾರದ ಹಣವನ್ನು ನ್ಯಾಯಾಲಯಕ್ಕೆ ಜಮೆ ಮಾಡಲಾಗುವುದೆಂದು ಅಧಿಕಾರಿಗಳು ಕಾಲಾವಕಾಶ ಕೇಳಿಕೊಂಡರು. ಜತೆಗೆ, ನ್ಯಾಯಾಲಯಕ್ಕೆ ಜಮೆ ಮಾಡುವ ಚೆಕ್ ನಂಬರ್ ಹಾಗೂ ಅದರ ನಕಲು ಪ್ರತಿಯನ್ನು ನೀಡಿದ ಹಿನ್ನೆಲೆಯಲ್ಲಿ ಕೋರ್ಟ್ ಅಮೀನರು ಜಪ್ತಿಯನ್ನು ಕೈಬಿಟ್ಟರು.
ರೈತ ಸಂಘದ ತಾಲೂಕು ಅಧ್ಯಕ್ಷ ಕೆನ್ನಾಳು ನಾಗರಾಜು, ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್, ಕ್ಯಾತನಹಳ್ಳಿ ಮಹದೇವು, ಕೆ.ಆರ್.ಪೇಟೆ ತಾಲೂಕು ರೈತಸಂಘ ಮಾಜಿ ಅಧ್ಯಕ್ಷ ರಾಜೇಗೌಡ, ಕೋರ್ಟ್ ಅಮೀನ್ ಸೂರ್ಯನಾರಾಯಣ್ ಇತರರು ಇದ್ದರು.