

ನರಗುಂದ: ಪಟ್ಟಣದ ಸರ್ಕಾರಿ ತಾಲೂಕು ಆಸ್ಪತ್ರೆಯಲ್ಲಿ ಎರಡು ದಿನಗಳಿಂದ ವೈದ್ಯರೇ ಇಲ್ಲ. ರೋಗಿಗಳು ಬೆಳಗ್ಗೆಯಿಂದ ಸಂಜೆವರೆಗೆ ಕಾಯುವಂತಾಗಿದೆ. ನಿಗದಿತ ಸಮಯದಲ್ಲಿ ವೈದ್ಯರು ಸೇವೆ ಸಲ್ಲಿಸುವಂತೆ ಆಗ್ರಹಿಸಿ ರೋಗಿಗಳು ಆಸ್ಪತ್ರೆ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು.
‘ಪಟ್ಟಣ ಸೇರಿ ತಾಲೂಕಿನ ವಿವಿಧ ಗ್ರಾಮಗಳಿಂದ ಆಸ್ಪತ್ರೆಗೆ ನಿತ್ಯ 400ಕ್ಕೂ ಅಧಿಕ ರೋಗಿಗಳು ಚಿಕಿತ್ಸೆಗೆ ಆಗಮಿಸುತ್ತಾರೆ. ಆದರೆ, ಬಹುತೇಕ ವೈದ್ಯರು ಆಸ್ಪತ್ರೆಯಲ್ಲಿ ಇರುವುದಿಲ್ಲ. ಕೆಲವರು ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ. ಕೆಲವರು ತಮಗಿಷ್ಟವಾದಾಗ ಬರುತ್ತಿದ್ದು, ಹಾಜರಿ ಪುಸ್ತಕದಲ್ಲಿ ಮಾತ್ರ ಎಲ್ಲರ ಸಹಿ ಇರುತ್ತದೆ. ಆಸ್ಪತ್ರೆಯಲ್ಲಿ ಎಂಬಿಬಿಎಸ್, ಬಿಎಎಂಸ್ ಸೇರಿ ಒಟ್ಟು 9 ವೈದ್ಯರು ನಿತ್ಯ ಕರ್ತವ್ಯಕ್ಕೆ ಹಾಜರಾಗಬೇಕು. ಆದರೆ, ಗುರುವಾರದಿಂದ ಒಬ್ಬರೇ ವೈದ್ಯರು ಕಾರ್ಯ ನಿರ್ವಹಿಸುತ್ತಿದ್ದಾರೆ. ಈ ಬಗ್ಗೆ ಕೇಳಿದರೆ ಆಸ್ಪತ್ರೆಯ ಸಿಬ್ಬಂದಿಯಿಂದ ಸ್ಪಂದನೆ ದೊರಕುತ್ತಿಲ್ಲ. ರೋಗಿಗಳ ಸಂಬಂಧಿಕರು ಒತ್ತಾಯಪೂರ್ವಕವಾಗಿ ವೈದ್ಯರನ್ನು ಪ್ರಶ್ನಿಸಿದರೆ, ಇಲ್ಲಸಲ್ಲದ ಕಾರಣ ಹೇಳಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸುವಂತಹ ಪರಿಸ್ಥಿತಿ ನಿರ್ಮಿಸಲಾಗುತ್ತಿದೆ ಎಂದು ರೋಗಿಗಳು ದೂರಿದರು.
ಕೆಲ ವೈದ್ಯರು ಸಭೆ, ಮಧ್ಯಾಹ್ನ ಊಟ, ಇತರ ನೆಪವೊಡ್ಡಿ ವಿನಾಕಾರಣ ಕಾಲಹರಣ ಮಾಡುತ್ತಿರುವುದರಿಂದ ರೋಗಿಗಳಿಗೆ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಸಂಬಂಧಪಟ್ಟ ಇಲಾಖೆ ಅಧಿಕಾರಿ, ಜನಪ್ರತಿನಿಧಿಗಳು ಸಮಸ್ಯೆ ಬಗೆಹರಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಲ್ಲವ್ವ ಸೂರಿನ, ವೆಂಕಪ್ಪ ಮಠಪತಿ, ಮಹೇಶ ಕೊತಂಬರಿ, ಮೀನಾಕ್ಷಿ ತುಳಜಮ್ಮನವರ, ಪಾರ್ವತೆವ್ವ ಹಡಪದ, ಮಹೇಶ ಮೂಲಿಮನಿ, ಪಾಂಡುರಂಗ ಚಲವಾದಿ, ಬಿಬಿಜಾನ ಮುಲ್ಲಾ, ರೇಷ್ಮಾ ಕೆ, ಆರೀಫಾ ಮಕಾನದಾರ, ಕಸ್ತೂರಿ ಮುಂದಿನಮನಿ, ತೇಜಾಕ್ಷಿ ಲಮಾಣಿ, ಸುನಿತಾ ಪಾಟೀಲ, ಯಲ್ಲವ್ವ ಮಾರನಬಸರಿ, ಸಿದ್ದಪ್ಪ ಅಕ್ಕಿ, ಇತರರಿದ್ದರು.
ನರಗುಂದ ತಾಲೂಕಿನ ಕಲಕೇರಿ ಗ್ರಾಮದ ಬಳಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದ ಬೈಕ್ ಅಪಘಾತದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಗಂಭೀರವಾಗಿ ಗಾಯಗೊಂಡಿದ್ದ. ಗಾಯಾಳುವನ್ನು ಸಾರ್ವಜನಿಕರು 108 ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಆಸ್ಪತ್ರೆಯಲ್ಲಿ ಒಬ್ಬರೇ ವೈದ್ಯರಿರುವ ಕಾರಣ ಗಾಯಾಳುವನ್ನು ಅನಿವಾರ್ಯವಾಗಿ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಯಿತು.
ಆಸ್ಪತ್ರೆಯಲ್ಲಿ ಕಾಯಂ ವೈದ್ಯರ ಕೊರತೆ ಇದೆ. ನಿತ್ಯ 400ಕ್ಕೂ ಅಧಿಕ ರೋಗಿಗಳು ಚಿಕಿತ್ಸೆಗೆ ಆಗಮಿಸುತ್ತಾರೆ. ಈ ನಡುವೆ ಅನಾರೋಗ್ಯದಿಂದ ಇಬ್ಬರು ಬಿಎಎಂಎಸ್ ವೈದ್ಯರು ಕೆಲಸಕ್ಕೆ ಗೈರಾಗಿದ್ದಾರೆ. ನಾನು ಡಿಎಚ್‌ಒ ಕಚೇರಿಯಲ್ಲಿ ಸಭೆ ನಿಮಿತ್ತ ತೆರಳಿದ್ದರಿಂದ ರೋಗಿಗಳಿಗೆ ಸಮಸ್ಯೆ ಆಗಿರಬಹುದು. ಸೋಮವಾರದಿಂದ ಎಲ್ಲ ಸಮಸ್ಯೆ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು.I ಡಾ.ವರುಣ ಸವದಿ, ತಾಲೂಕು ವೈದ್ಯಾಧಿಕಾರಿ.