ಹನೂರಿನ ಸರ್ಕಾರಿ, ಖಾಸಗಿ ಬಸ್ ನಿಲ್ದಾಣದಲ್ಲಿ ಅಶುಚಿತ್ವ ತಾಂಡವ

ಹನೂರಿನ ಸರ್ಕಾರಿ ಬಸ್ ನಿಲ್ದಾಣದ ಆವರಣದಲ್ಲಿ ಮಲೀನ ನೀರು ಮಡುಗಟ್ಟಿ ನಿಂತಿರುವುದು.
ಹನೂರಿನ ಸರ್ಕಾರಿ ಬಸ್ ನಿಲ್ದಾಣದ ಆವರಣದಲ್ಲಿ ಮಲೀನ ನೀರು ಮಡುಗಟ್ಟಿ ನಿಂತಿರುವುದು.
Published on

ಹನೂರು: ಸಾರ್ವಜನಿಕ ಶೌಚಗೃಹ ಗುಂಡಿ ಭರ್ತಿಯಾಗಿರುವ ಕಾರಣ ಸರ್ಕಾರಿ ಬಸ್ ನಿಲ್ದಾಣದಲ್ಲಿನ ಶೌಚಗೃಹ ದುರ್ನಾತ ಬೀರುತ್ತಿರುವುದು ಒಂದೆಡೆಯಾದರೆ, ಮತ್ತೊಂದೆಡೆ ಖಾಸಗಿ ಬಸ್ ನಿಲ್ದಾಣದಲ್ಲಿನ ಶೌಚಗೃಹ 4 ದಿನಗಳಿಂದ ಬಾಗಿಲು ಮುಚ್ಚಿದ ಪರಿಣಾಮ ಸಾರ್ವಜನಿಕರು ಪರದಾಡುವಂತಾಗಿದೆ.

ಹನೂರು ತಾಲೂಕು ಕೇಂದ್ರ. ಕೆಲಸದ ನಿಮಿತ್ತ ಇಲ್ಲಿಗೆ ಕ್ಷೇತ್ರ ವ್ಯಾಪ್ತಿಯ ವಿವಿಧ ಗ್ರಾಮಗಳ ಜನರು ನಿತ್ಯ ಆಗಮಿಸುತ್ತಾರೆ. ತಹಸಿಲ್ದಾರ್ ಕಚೇರಿ, ತಾಲೂಕು ಪಂಚಾಯಿತಿ, ಪೊಲೀಸ್ ಠಾಣೆ, ಪಶು ವೈದ್ಯಕೀಯ ಆಸ್ಪತ್ರೆ, ರೈತ ಸಂಪರ್ಕ ಕೇಂದ್ರ, ಎಪಿಎಂಸಿ, ಸೆಸ್ಕ್ ಸೇರಿದಂತೆ ಇನ್ನೂ ಕೆಲವು ಇಲಾಖೆಗಳಿವೆ. ಆದರೆ ಇವುಗಳಲ್ಲಿ ಎಲ್ಲಿಯೂ ಸಾರ್ವಜನಿಕ ಶೌಚಗೃಹವಿಲ್ಲ. ತಹಸೀಲ್ದಾರ್ ಕಚೇರಿಯಲ್ಲಿ ಶೌಚಗೃಹವಿದ್ದರೂ ಬಳಕೆಗೆ ಬಾರದಂತಾಗಿದೆ. ಪರಿಣಾಮ ಈ ಕಚೇರಿಗಳಿಗೆ ಆಗಮಿಸುವ ಜನರು ಶೌಚಕ್ಕಾಗಿ ಪಟ್ಟಣದ ಸರ್ಕಾರಿ ಇಲ್ಲವೇ ಖಾಸಗಿ ಬಸ್ ನಿಲ್ದಾಣದಲ್ಲಿರುವ ಶೌಚಗೃಹಕ್ಕೆ ಹೋಗಬೇಕಿದೆ. ಈ ನಡುವೆ ಖಾಸಗಿ ಬಸ್ ನಿಲ್ದಾಣದ ಸಾರ್ವಜನಿಕರ ಶೌಚಗೃಹದ ಗುಂಡಿ ಭರ್ತಿಯಾಗಿದ್ದು, ಇದರಿಂದಾಗಿ 4 ದಿನಗಳಿಂದ ಬಾಗಿಲು ಮುಚ್ಚಿದೆ. ಇದರಿಂದ ಮಹಿಳೆಯರು, ವಯೋವೃದ್ಧರು ಹೆಚ್ಚಿನ ತೊಂದರೆ ಅನುಭವಿಸುವಂತಾಗಿದೆ.

ಅಧಿಕಾರಿಗಳ ನಿರ್ಲಕ್ಷೃ: ಖಾಸಗಿ ಬಸ್ ನಿಲ್ದಾಣಕ್ಕೆ ಹೊಂದುಕೊಂಡಂತಿರುವ ಶೌಚಗೃಹಕ್ಕೆ ಪಪಂ ವತಿಯಿಂದ ನಿರ್ಮಿಸಿರುವ ಅಂಗಡಿ ಮಳಿಗೆಗಳಿವೆ. ಜತೆಗೆ ಬಸ್ ನಿಲ್ದಾಣದ ಆಸುಪಾಸಿನ ಬಹುತೇಕ ಅಂಗಡಿಗಳ ಕೂಲಿ ಕಾರ್ಮಿಕರು, ಮಾಲೀಕರು ಹಾಗೂ ಪಟ್ಟಣಕ್ಕೆ ಆಗಮಿಸುವ ಸಾರ್ವಜನಿಕರು ಈ ಶೌಚಗೃಹವನ್ನೇ ಅವಲಂಬಿಸಿದ್ದಾರೆ. 4 ದಿನಗಳಿಂದ ಬಾಗಿಲು ಮುಚ್ಚಿರುವುದರಿಂದ ವಿಧಿಯಿಲ್ಲದೇ ಜನರು ಶೌಚಗೃಹದ ಹಿಂಭಾಗದಲ್ಲಿಯೇ ಮೂತ್ರ ವಿಸರ್ಜಿಸುತ್ತಿದ್ದಾರೆ. ಇದರಿಂದ ಬಸ್ ನಿಲ್ದಾಣದ ಸುತ್ತಮುತ್ತ ಅನೈರ್ಮಲ್ಯ ನಿರ್ಮಾಣವಾಗಿದ್ದು, ಸಾರ್ವಜನಿಕರು ಮೂಗು ಮುಚ್ಚಿಕೊಂಡು ಸಂಚರಿಸುವ ಸ್ಥಿತಿ ನಿರ್ಮಾಣವಾಗಿದೆ. ಅಂಗಡಿಯವರು ದುರ್ವಾಸನೆ ನಡುವೆಯೇ ವ್ಯಾಪಾರ ಮಾಡಬೇಕಿದೆ. ಈ ಬಗ್ಗೆ ಪಪಂ ಅಧಿಕಾರಿಗಳಿಗೆ ತಿಳಿದಿದೆಯಾದರೂ ಯಾವುದೇ ಕ್ರಮಕೈಗೊಳ್ಳದೇ ನಿರ್ಲಕ್ಷೃ ವಹಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಸಾಂಕ್ರಾಮಿಕ ರೋಗಗಳ ಭೀತಿ: ಇನ್ನು ಸರ್ಕಾರಿ ಬಸ್ ನಿಲ್ದಾಣದ ಸಾರ್ವಜನಿಕ ಶೌಚಗೃಹದ ಗುಂಡಿಯೂ ಭರ್ತಿಯಾಗಿದ್ದು, ಮಲ, ಮೂತ್ರ ನೀರು ನಿಲ್ದಾಣದ ಆವರಣದಲ್ಲಿ ಮಡುಗಟ್ಟಿ ನಿಂತು ವಿಪರೀತ ದುರ್ವಾಸನೆ ಬೀರುತ್ತಿದೆ. ಪರಿಣಾಮ ಸೊಳ್ಳೆಗಳ ಅವಾಸ ಸ್ಥಾನವಾಗಿ ಮಾರ್ಪಟ್ಟಿದೆ. ಇತ್ತ ಶೌಚಗೃಹದಲ್ಲಿ ನೀರು ಹೊರಗೊಗಲು ಸಾಧ್ಯವಾಗದೆ ಗಬ್ಬೆದ್ದು ನಾರುತ್ತಿದೆ. ಇದರಿಂದ ಸಾರ್ವಜನಿಕರು ಅದರಲ್ಲೂ ಮ.ಬೆಟ್ಟಕ್ಕೆ ತೆರಳಲು ಬರುವ ಬೆಂಗಳೂರು, ರಾಮನಗರ, ಚನ್ನಪಟ್ಟಣ, ಮಂಡ್ಯ, ಮೈಸೂರು ಹಾಗೂ ಇತರ ಕಡೆಗಳಂದ ಬರುವವರು ಇಲ್ಲಿನ ಶೌಚಗೃಹ ಅವ್ಯವಸ್ಥೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ನಡುವೆ ಡೆಂಘೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಶೌಚಗೃಹಗಳಲ್ಲಿ ಅಶುಚಿತ್ವ ಮನ ಮಾಡಿದ್ದು, ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ ನೀಡುತ್ತಿದೆ. ಇದರಿಂದ ಸಾಂಕ್ರಾಮಿಕ ರೋಗಗಳ ಭೀತಿ ಜನರಲ್ಲಿ ಆವರಿಸಿದೆ. ಆದರೂ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಅಗತ್ಯ ಕ್ರಮ ವಹಿಸದಿರುವುದು ನಿಜಕ್ಕೂ ವಿಪರ್ಯಾಸ.

ಪರ್ಯಾಯ ವ್ಯವಸ್ಥೆಯೂ ಇಲ್ಲ: ಪಟ್ಟಣದಲ್ಲಿ ಕೆಶಿಪ್ ಯೋಜನೆಯಡಿ ರಸ್ತೆ ಹಾಗೂ ಚರಂಡಿ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ. ಇದರಿಂದ ಈ 2 ಶೌಚಗೃಹಗಳ ಮಲೀನ ನೀರು ಹೊರಗೊಗಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಪರ್ಯಾಯ ವ್ಯವಸ್ಥೆಯ ಮೂಲಕ ಗುಂಡಿಯಲ್ಲಿನ ತ್ಯಾಜ್ಯವನ್ನು ವಿಲೇವಾರಿಗೊಳಿಸಬೇಕಿದೆ. ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ್ಯ ವಹಿಸಿರುವ ಕಾರಣ ಸರ್ಕಾರಿ ಬಸ್ ನಿಲ್ದಾಣದ ಶೌಚಗೃಹದಲ್ಲಿ ಅನೈರ್ಮಲ್ಯ ಮನೆ ಮಾಡಿದೆ. ಆದ್ದರಿಂದ ಗುಂಡಿಯಲ್ಲಿ ಸಂಗ್ರಹವಾಗಿರುವ ತ್ಯಾಜ್ಯವನ್ನು ವಿಲೇವಾರಿಗೊಳಿಸುವುದರ ಮೂಲಕ ಸಾರ್ವಜನಿಕರಿಗೆ ಶೌಚಗೃಹ ಸೌಕರ್ಯದ ಅನುಕೂಲ ಕಲ್ಪಿಸಬೇಕು ಎಂಬುದು ಸ್ಥಳೀಯರ ಒತ್ತಾಯ.

ಪಟ್ಟಣದ ಖಾಸಗಿ ಬಸ್ ನಿಲ್ದಾಣದಲ್ಲಿನ ಶೌಚಗೃಹ 4 ದಿನಗಳಿಂದ ಮುಚ್ಚಿದೆ. ಇತ್ತ ಸರ್ಕಾರಿ ಬಸ್ ನಿಲ್ದಾಣದಲ್ಲಿನ ಶೌಚಗೃಹ ಗಬ್ಬೆದ್ದು ನಾರುತ್ತಿದ್ದು, ಅನೈರ್ಮಲ್ಯ ತಾಂಡವವಾಡುತ್ತಿದೆ. ಇದೀಗ ಡೆಂಘೆ ಆತಂಕ ಹೆಚ್ಚಿದೆ. ಇಂತಹ ಸಂದರ್ಭದಲ್ಲಿ ಪಟ್ಟಣದ ಶೌಚಗೃಹಗಳ ವ್ಯವಸ್ಥೆ ಹೀಗಿರುವುದು ಎಷ್ಟರ ಮಟ್ಟಿಗೆ ಸರಿ? ಇದರಿಂದ ಸಾರ್ವಜನಿಕರು ಶೌಚಕ್ಕಾಗಿ ಕಷ್ಟ ಪಡುವಂತಾಗಿದೆ. ಆದ್ದರಿಂದ ಪಪಂ ಅಧಿಕಾರಿಗಳು ಈ ಬಗ್ಗೆ ಗಮನಹರಿಸಿಬೇಕು.
ಬಸವರಾಜು, ಮಾಜಿ ಉಪಾಧ್ಯಕ್ಷ ಹನೂರು ಪಪಂ

ಕೆಶಿಪ್ ಯೋಜನೆಯಡಿ ಕೈಗೊಂಡಿರುವ ಚರಂಡಿ ನಿರ್ಮಾಣ ಕಾಮಗಾರಿಯಿಂದಾಗಿ ಶೌಚಗೃಹದ ಮಲೀನ ನೀರು ಹೊರಗೊಗಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಭರ್ತಿಗೊಂಡಿದೆ. ಆದ್ದರಿಂದ ಸೆಕ್ಕಿಂಗ್ ಯಂತ್ರದಿಂದ ಗುಂಡಿಯಲ್ಲಿ ಸಂಗ್ರಹವಾಗಿರುವ ತ್ಯಾಜ್ಯವನ್ನು ವಿಲೇವಾರಿಗೊಳಿಸಿ ಶೌಚಗೃಹವನ್ನು ಸಾರ್ವಜನಿಕರ ಬಳಕೆಗೆ ನೀಡಲು ಅಗತ್ಯ ಕ್ರಮವಹಿಸಲಾಗುವುದು.
ಅಶೋಕ್, ಮುಖ್ಯಾಧಿಕಾರಿ ಹನೂರು ಪಪಂ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net