

ವಿರಾಜಪೇಟೆ: ಇಲ್ಲಿನ ಸರ್ಕಾರಿ ಬಸ್ ನಿಲ್ದಾಣದ ಹೊರಾಂಗಣದಲ್ಲಿ ಅಶುಚಿತ್ವ ತಾಂಡವವಾಡುತ್ತಿದ್ದು, ಇದರಿಂದ ಸಾಂಕ್ರಾಮಿಕ ರೋಗ ಹರಡುವ ಭೀತಿ ಹೆಚ್ಚಾಗಿದೆ.
ನಿತ್ಯ ಸಾವಿರಾರು ಪ್ರಯಾಣಿಕರ ಸಂಚರಿಸುವ ಪ್ರದೇಶ ಇದಾಗಿದ್ದು, ಎಲ್ಲೆಂದರಲ್ಲಿ ಎಸೆದಿರುವ ತಿಂಡಿ ತಿನಿಸುಗಳ ಕವರ್‌ಗಳು, ಕೊಳಚೆ ನೀರು ಶೇಖರಣೆಗೊಂಡು ಇಡೀ ಪ್ರದೇಶ ಗಬ್ಬೆದ್ದು ನಾರುತ್ತಿದೆ.
ನಗರದ ಸರ್ಕಾರಿ ಬಸ್ ನಿಲ್ದಾಣದಿಂದ ನಿತ್ಯ ಸಾವಿರಾರು ಪ್ರಯಾಣಿಕರು ಮೈಸೂರು, ಬೆಂಗಳೂರು, ಕೇರಳ ಹಾಗೂ ಸ್ಥಳೀಯ ಊರುಗಳಿಗೆ ತೆರಳುತ್ತಾರೆ. ಆದರೆ ಇಲ್ಲಿನ ಹೊರ ಆವರಣದ ಮೂರೂ ದಿಕ್ಕುಗಳಲ್ಲಿ ನಿರ್ಮಿಸಲಾದ ಚರಂಡಿಗಳಲ್ಲಿ ಅನೈರ್ಮಲ್ಯ ತಾಂಡವವಾಡುತ್ತಿದೆ. ನಿಲ್ದಾಣದ ಬಲ ಹಾಗೂ ಎಡಭಾಗದಲ್ಲಿರುವ ಚರಂಡಿಗೆ ಸಮೀಪದ ಅಂಗಡಿ, ಹೋಟೆಲ್, ಮನೆಗಳ ತ್ಯಾಜ್ಯ ನೀರು ಸೇರುತ್ತಿದೆ. ಈ ನಡುವೆ ಚರಂಡಿಗಳಲ್ಲಿ ಕಸ, ಮರದ ಎಲೆ ಸಂಗ್ರಹವಾಗಿ ತ್ಯಾಜ್ಯ ನೀರು ಸರಾಗವಾಗಿ ಹರಿಯಲು ಸಾಧ್ಯವಾಗದೆ ಅಲ್ಲೇ ಶೇಖರಣೆಯಾಗಿದೆ. ಪರಿಣಾಮ ಸೊಳ್ಳೆ, ನೊಣಗಳ ಕಾಟ ಹೆಚ್ಚಾಗಿ ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ.
ಕಸದ ಬುಟ್ಟಿಯಂತಾದ ಚರಂಡಿ: ಮಳೆ ಹಾಗೂ ಕೊಳಚೆ ನೀರು ಹರಿದು ಹೋಗಬೇಕೆಂಬ ಕಾರಣಕ್ಕೆ ನಿರ್ಮಿಸಲಾದ ಚರಂಡಿ ಇದೀಗ ಕಸದ ಬುಟ್ಟಿಯಂತಾಗಿದೆ. ಕಸದ ಬುಟ್ಟಿಗೆ ಹಾಕಬೇಕಾದ ನೀರು, ತಂಪು ಪಾನೀಯ ಬಾಟಲಿ, ತಿಂಡಿ ತಿನಿಸುಗಳ ಕವರ್‌ಗಳು, ಐಸ್‌ಕ್ರೀಮ್ ಡಬ್ಬಗಳು, ಮದ್ಯದ ಬಾಟಲಿ, ಟೆಟ್ರಾ ಪ್ಯಾಕ್‌ಗಳು ಹಳೆಯ ಚಪ್ಪಲಿ, ಪಾರ್ಸಲ್ ತಂದ ಊಟದ ಕವರ್‌ಗಳು, ಎಲೆ, ಸಿಗರೇಟ್ ಪ್ಯಾಕ್‌ಗಳು ಚರಂಡಿಗಳಲ್ಲಿ ಶೇಖರಣೆಯಾಗಿದೆ. ಪರಿಣಾಮ ತ್ಯಾಜ್ಯ ನೀರಿನ ಮೇಲ್ಭಾಗದಲ್ಲಿ ತೇಲುವಂತಾಗಿದೆ.
ನಿಲ್ದಾಣದ ಹೊರವಲಯದಲ್ಲಿ ಮದ್ಯದ ಬಾಟಲಿಗಳು: ಸರ್ಕಾರಿ ಬಸ್ ನಿಲ್ದಾಣದ ಹಿಂಭಾಗ ಹಾಗೂ ಎಡ ಭಾಗದ ಚರಂಡಿಗಳಲ್ಲಿ ಮದ್ಯದ ಬಾಟಲಿ ಹಾಗೂ ಟೆಟ್ರಾಪ್ಯಾಕ್‌ಗಳು ಹೇರಳವಾಗಿ ಕಾಣಸಿಗುತ್ತದೆ. ಇದರೊಂದಿಗೆ ಸಿಗರೇಟ್ ಪ್ಯಾಕ್ ಹಾಗೂ ಸೇದಿ ಬಿಸಾಡಿದ ಸಿಗರೇಟ್ ತುಂಡುಗಳೂ ಹೆಚ್ಚಾಗಿವೆ. ಅದರಲ್ಲೂ ಕೆಲವು ಕಡೆ ಕಿಡಿಗೇಡಿಗಳು ಮದ್ಯ ಸೇವನೆ ಮಾಡಿ ಬಿಸಾಡಿದ ಗಾಜಿನ ಬಾಟಲಿಗಳನ್ನು ಒಡೆದು ಹಾಕಿ ವಿಕೃತಿ ಮೆರೆಯಲಾಗಿದೆ.
ಬಳಕೆಯಾಗದ ಕಸದ ಬುಟ್ಟಿಗಳು: ನಿಲ್ದಾಣದ ಆವರಣದಲ್ಲಿ ಹಲವು ಕಡೆ ಕಸದ ಬುಟ್ಟಿಗಳನ್ನು ಇರಿಸಲಾಗಿದೆಯಾದರೂ ಜನರು ಕಸವನ್ನು ಅದಕ್ಕೆ ಹಾಕುತ್ತಿಲ್ಲ. ಬದಲಾಗಿ ಚರಂಡಿ ಹಾಗೂ ಪಕ್ಕದ ಖಾಲಿ ಸ್ಥಳಗಳಿಗೆ ಎಸೆಯುತ್ತಿದ್ದಾರೆ. ಇದು ಅನೈರ್ಮಲ್ಯಕ್ಕೆ ಮುಖ್ಯ ಕಾರಣವಾಗಿದೆ. ಇದರೊಂದಿಗೆ ಸಾರ್ವಜನಿಕ ಸ್ಥಳವಾದ ಬಸ್ ನಿಲ್ದಾಣದಲ್ಲಿ ಧೂಮಪಾನ ಹಾಗೂ ಮದ್ಯಪಾನವನ್ನೂ ಮಾಡಲಾಗುತ್ತಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
ಸ್ವಚ್ಛಗೊಳಿಸಿದರೂ ಅದೇ ಸ್ಥಿತಿ: ಅದೆಷ್ಟೋ ಬಾರಿ ಪುರಸಭೆಯಿಂದ ಚರಂಡಿಗಳಲ್ಲಿನ ಕಸ ತೆಗೆದು ಶುಚಿಗೊಳಿಸಲಾಯಿತಾದರೂ ಪ್ರಯಾಣಿಕರು ಮತ್ತೆ ಚರಂಡಿಗಳಿಗೆ ತಿಂಡಿ ತಿನಿಸುಗಳ ಕವರ್ ಹಾಗೂ ಬಾಟಲಿಗಳನ್ನು ಎಸೆಯುತ್ತಿದ್ದಾರೆ. ಇಂತಹ ಮನಸ್ಥಿತಿ ಜನರು ಹೊರಬರಬೇಕಾಗಿದ್ದು, ಪೌರಕಾರ್ಮಿಕರೂ ನಮ್ಮಂತೆ ಮನುಷ್ಯರು ಎಂಬುದನ್ನು ಮೊದಲು ಅರಿಯಬೇಕಿದೆ.
ಇನ್ನು ನಿಲ್ದಾಣದಲ್ಲಿರುವ ಶೌಚಗೃಹ ನೀರನ್ನು ಚರಂಡಿಗಳ ಮೂಲಕ ಹರಿಬಿಡಲಾಗುತ್ತಿದೆ. ಇದರಿಂದಾಗಿ ಆಸುಪಾಸಿನ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ. ಈ ಕುರಿತು ವಿರಾಜಪೇಟೆ ಪುರಸಭೆಯಿಂದ ಮಂಗಳೂರು ವಿಭಾಗದ ಅಧಿಕಾರಿಗಳಿಗೆ ಹಲವು ಬಾರಿ ಪತ್ರ ಬರೆದು ವಿಷಯ ಮುಟ್ಟಿಸುವ ಕೆಲಸ ಮಾಡಿದರೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎನ್ನುತ್ತಾರೆ ಸ್ಥಳೀಯ ಪುರಸಭಾ ಸದಸ್ಯ.
ನಿಗಮ ವ್ಯಾಪ್ತಿಯ ಪ್ರದೇಶವನ್ನು ಪ್ರತಿದಿನ ಸ್ವಚ್ಛಗೊಳಿಸಲಾಗುತ್ತಿದೆ. ರಾತ್ರಿ 10 ಗಂಟೆ ನಂತರ ಇಲ್ಲಿ ಸಿಬ್ಬಂದಿ ಇಲ್ಲದ ಕಾರಣ ರಾತ್ರಿ ಸಮಯದಲ್ಲಿ ಸಂಚರಿಸುವ ಪ್ರಯಾಣಿಕರು ಹಾಗೂ ಸಂಸ್ಥೆಯ ಕೆಲವು ಸಿಬ್ಬಂದಿ ಊಟದ ಪಾರ್ಸಲ್ ಕವರ್ ಹಾಗೂ ಇತರ ಕಸವನ್ನು ಇಲ್ಲಿ ಎಸೆಯುತ್ತಿದ್ದು, ಇದನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಸಾರ್ವಜನಿಕರು ಹಾಗೂ ಸಿಬ್ಬಂದಿ ತಮ್ಮ ಜವಾಬ್ದಾರಿ ಅರಿತು ಕಸದ ಬುಟ್ಟಿಯನ್ನು ಬಳಸಿಕೊಳ್ಳುವ ಮೂಲಕ ಸ್ವಚ್ಛತೆಗೆ ಆದ್ಯತೆ ನೀಡಬೇಕಿದೆ.
ಬಿ.ಎನ್.ಬಾಲಕೃಷ್ಣ ಸಂಚಾರ ನಿಯಂತ್ರಕರು, ಕ.ರಾ.ರ.ಸಾ.ನಿ, ವಿರಾಜಪೇಟೆ
ಈ ನಿಲ್ದಾಣ ನಿಗಮ ವ್ಯಾಪ್ತಿಯಲ್ಲಿರುವುದರಿಂದ ಈ ಸ್ಥಳದ ಸ್ವಚ್ಛತೆಯನ್ನು ನಿಗಮದವರೇ ಕಾಪಾಡಿಕೊಳ್ಳಬೇಕಾಗಿದೆ. ಆದರೂ ಹಲವು ಬಾರಿ ಪೌರಕಾರ್ಮಿಕರಿಂದ ಚರಂಡಿ ಹಾಗೂ ಸುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಲಾಗಿದ್ದು, ಮೇಲಿಂದ ಮೇಲೆ ಈ ಸಮಸ್ಯೆ ಪುನರಾವರ್ತನೆಯಾಗುತ್ತಿದೆ. ಆದ್ದರಿಂದ ನಿಗಮದ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಪೌರಕಾರ್ಮಿಕರ ಸಮಸ್ಯೆ ಇದ್ದು, ಆದಷ್ಟು ಬೇಗ ಪ್ರದೇಶವನ್ನು ಸ್ವಚ್ಛಗೊಳಿಸಲಾಗುವುದು.
ರಜನಿಕಾಂತ್ ಪುರಸಭಾ ಸದಸ್ಯ, ವಿರಾಜಪೇಟೆ