

ಹನೂರು: ಪಟ್ಟಣದ 8ನೇ ವಾರ್ಡ್‌ನಲ್ಲಿ ಸಂಗ್ರಹವಾಗಿದ್ದ ಕಸವನ್ನು ವಿಲೇವಾರಿ ಮಾಡದ ಹಿನ್ನೆಲೆ ನಿವಾಸಿಗಳು ಗಣೇಶ ಹಬ್ಬದಂದೇ ಪಪಂ ಕಚೇರಿಯ ಪ್ರವೇಶ ದ್ವಾರದ ಮೆಟ್ಟಿಲುಗಳ ಮೇಲೆ ಕಸ ಸುರಿದು ಆಕ್ರೋಶ ವ್ಯಕ್ತಪಡಿಸಿದರು.
ಪಪಂನ ಅಧಿಕಾರಿಗಳ ನಿರ್ಲಕ್ಷೃದಿಂದ ಪಟ್ಟಣದಲ್ಲಿ ಯಾವುದೇ ಅಭಿವೃದ್ಧಿ ಕೆಲಸ ನಡೆಯುತ್ತಿಲ್ಲ. ಅಧಿಕಾರಿಗಳು ಹಣ ಮಾಡುವುದರಲ್ಲಿ ತೊಡಗಿದ್ದಾರೆ. ಹಸಿ ಹಾಗೂ ಒಣ ಕಸವನ್ನು ಸಂಗ್ರಹಿಸಲು ವಾಹನಗಳು ಹಾಗೂ ಸಿಬ್ಬಂದಿ ಇದ್ದಾರೆ. ಆದರೆ 8ನೇ ವಾರ್ಡ್ ಸೇರಿದಂತೆ ಪಟ್ಟಣದಾದ್ಯಂತ ಬೀದಿಗಳಲ್ಲಿ ಸಂಗ್ರಹವಾಗುವ ಕಸವನ್ನು ವಿಲೇವಾರಿ ಮಾಡುತ್ತಿಲ್ಲ. ಇದರಿಂದ ಕಸದ ರಾಶಿ ಅಲ್ಲಲ್ಲಿ ಕಣ್ಣಿಗೆ ರಾಚುತ್ತದೆ. ಜನರಲ್ಲಿ ರೋಗ ರುಜಿನಗಳ ಭೀತಿ ಆವರಿಸಿದೆ. ಇತ್ತ ಪಟ್ಟಣದ ಕೆಲ ಬಡಾವಣೆಗಳಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಆದರೆ ಕಸದ ರಾಶಿ ಅಲ್ಲಲ್ಲಿ ಬಿದ್ದಿದ್ದು, ಅಶುಚಿತ್ವ ಮನೆ ಮಾಡಿದೆ. ಈ ಬಗ್ಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ತಿಳಿದಿದ್ದರೂ ವಿಲೇವಾರಿಗೆ ನಿರ್ಲಕ್ಷ್ಯ ವಹಿಸಿರುವುದು ಎಷ್ಟರ ಮಟ್ಟಿಗೆ ಸರಿ? ಹೀಗಾಗಿ ಬಡಾವಣೆಯಲ್ಲಿ ಸಂಗ್ರಹವಾಗಿದ್ದ ಕಸವನ್ನು ತಂದು ಕಚೇರಿಗೆ ತೆರಳುವ ಪ್ರವೇಶ ದ್ವಾರದಲ್ಲಿ ಸುರಿಯುತ್ತಿದ್ದೇವೆ. ಪಪಂ ಅಧಿಕಾರಿಗಳು ಇನ್ನಾದರೂ ಎಚ್ಚೆತ್ತು ಪಟ್ಟಣದಲ್ಲಿ ಸಂಗ್ರಹವಾಗುವ ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡುವ ಜತೆಗೆ ಸ್ವಚ್ಛತೆಗೆ ಗಮನ ನೀಡಬೇಕು ಎಂದು 8ನೇ ವಾರ್ಡ್‌ನ ನಿವಾಸಿಗಳು ಒತ್ತಾಯಿಸಿದರು.
ಪಟ್ಟಣದ ಇತರ ವಾರ್ಡ್‌ನ ನಿವಾಸಿಗಳು ಸಹ ಪಪಂ ಅಧಿಕಾರಿಗಳ ಕಾರ್ಯ ವೈಖರಿಗೆ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಪಪಂ ಮಾಜಿ ಉಪಾಧ್ಯಕ್ಷ ಬಸವರಾಜು ಮಾತನಾಡಿ, ಕಸ ವಿಲೇವಾರಿ ವಾಹನದ ಚಾಲಕರು ಬಾರ್, ಹೋಟೆಲ್, ವರ್ಕ್‌ಷಾಪ್ ಹಾಗೂ ಇನ್ನಿತರ ವಾಣಿಜ್ಯ ಮಳಿಗೆಗಳಿಂದ ಹಣ ಪಡೆದು ಅಲ್ಲಿ ಸಂಗ್ರಹವಾಗುವ ಕಸವನ್ನು ನಿತ್ಯ ವಿಲೇವಾರಿ ಮಾಡುತ್ತಾರೆ. ಆದರೆ ಕೆಲವೊಂದು ಬಡಾವಣೆಯಲ್ಲಿ ತಿಂಗಳು ಕಳೆದರೂ ಕಸ ವಿಲೇವಾರಿಯಾತ್ತಿಲ್ಲ. ಇದರಿಂದ ಅಶುಚಿತ್ವ ತಾಂಡವಾಡುತ್ತಿದೆ ಎಂದು ದೂರಿದರು.
ಪಪಂ ಕಚೇರಿಗೆ ತೆರಳುವ ಪ್ರವೇಶ ದ್ವಾರದ ಮೆಟ್ಟಿಲುಗಳ ಮೇಲೆ ಸುರಿದಿರುವ ಕಸದ ಬಗ್ಗೆ ಮಾಹಿತಿ ತಿಳಿದ ತಹಸೀಲ್ದಾರ್ ವೈ.ಕೆ ಗುರುಪ್ರಸಾದ್ ಅವರು ಪಪಂ ಮುಖ್ಯಾಧಿಕಾರಿಗೆ ಅಶೋಕ್ ಅವರಿಗೆ ಕಸವನ್ನು ತೆರವುಗೊಳಿಸುವಂತೆ ಸೂಚಿಸಿದರಲ್ಲದೆ, ಪಟ್ಟಣದಲ್ಲಿ ಸಂಗ್ರಹವಾಗುವ ಕಸವನ್ನು ಸಮರ್ಪಕವಾಗಿ ವಿಲೇವಾರಿ ಮಾಡುವಂತೆ ತಿಳಿಸಿದರು.
ಬಳಿಕ ಸುರಿದಿದ್ದ ಕಸವನ್ನು ತೆರವುಗೊಳಿಸಲಾಯಿತು. ಈ ಬಗ್ಗೆ ನಿವಾಸಿಗಳು ಕಚೇರಿಯಲ್ಲಿ ಸುರಿದಿದ್ದ ಕಸವನ್ನು ತಕ್ಷಣವೇ ವಿಲೇವಾರಿಗೊಳಿಸಲಾಗಿದೆ. ಆದರೆ ಬಡಾವಣೆಗಳಲ್ಲಿ ಬಿದ್ದಿರುವ ಕಸ ವಿಲೇವಾರಿ ಮಾಡಲು ನಿರ್ಲಕ್ಷ್ಯವೇಕೆ? ಎಂದು ಆಕ್ಷೇಪ ವ್ಯಕ್ತಪಡಿಸಿದರು.