ಬಳ್ಳಾರಿ ; ಜಿಲ್ಲಾದ್ಯಂತ ಮುಂಗಾರು ಮಳೆ ಸುರಿಯುತ್ತಿರುವುದು ಒಂದಡೆಯಾದರೆ, ಗ್ರಾಮೀಣ ಪ್ರದೇಶದ ಕುಡಿವ ನೀರಿನ ಕೆರೆಗಳಿಗೆ ಮಳೆ ನೀರು ಸೇರಿ ಕಲುಷಿತಗೊಳ್ಳುತ್ತಿವೆ. ಸೂಕ್ತ ರೀತಿಯಲ್ಲಿ ಶುದ್ಧಿಕರಿಸಿದೆ ಗ್ರಾಮಗಳಿಗೆ ನೀರು ಸರಬರಾಜು ಮಾಡುತ್ತಿದ್ದು, ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ದಟ್ಟವಿದೆ.
ಜಿಲ್ಲೆಯ ಐದು ತಾಲೂಕುಗಳಲ್ಲಿ ಒಟ್ಟು 83 ಕುಡಿವ ನೀರಿನ ಕೆರೆಗಳನ್ನು ನಿರ್ಮಿಸಲಾಗಿದೆ. ಸಿರಗುಪ್ಪ ತಾಲೂಕಿನ ಇಬ್ರಾಹಿಂಪುರ, ಮುದ್ದಟನೂರು, ನಡುವಿ, ದೇಶನೂರು ಹಾಗೂ ಕಂಪ್ಲಿ ತಾಲೂಕಿನ ರಾಮಸಾಗರ, ಬುಕ್ಕಸಾಗರ ಮತ್ತು ಸಣಾಪುರ ಸೇರಿ ಒಟ್ಟು ಏಳೂ ಗ್ರಾಮಗಳಿಗೆ ನೇರವಾಗಿ ನದಿಯಿಂದ ನೀರು ಪಂಪ್ ಮಾಡಿ ಕುಡಿಯಲು ಸರಬರಾಜು ಮಾಡಲಾಗುತ್ತಿದೆ. ಇನ್ನೂ ಎಚ್‌ಎಲ್‌ಸಿ ಕಾಲುವೆಯಿಂದ ಹದಿಮೂರು ಮತ್ತು ಎಲ್‌ಎಲ್‌ಸಿಯಿಂದ ಆರವತ್ತು ಕೆರೆಗಳು ಹಾಗೂ ಸಂಡೂರಿನ ಒಂದು ಕೆರೆಗೆ ನಾರಿಹಳ್ಳದಿಂದ ನೀರು ಹರಿಸಲಾಗುವುದು. ಪ್ರತಿ ಕೆರೆಗಳಲ್ಲಿ ಸ್ಲೊ ಸೆಲ್ಫ್ ಫಿಲ್ಟರ್(ಎಸ್‌ಎಸ್‌ಎಫ್) ಹಾಗೂ ಪ್ರೆಶರ್ ಫಿಲ್ಟರ್ (ಪಿಎಫ್) ಗಳಿಂದ ಶುದ್ಧಿಕರಿಸಿ ಬಿಡಬೇಕು. ಆದರೆ, ಕಳೆದ ಹಲವು ವರ್ಷಗಳ ಹಿಂದಯೇ ಅಳವಡಿಸಿರುವ ಈ ಯಂತ್ರಗಳು ಬಹುತೇಕ ಹಾಳಾಗಿದ್ದು ಕೆಲವು ಕೆಟ್ಟು ನಿಂತಿವೆ. ಆದ್ದರಿಂದ, ಹಲವು ಕೆರೆಗಳಿಂದ ಶುದ್ಧಿಕರಿಸಿದೆ ನೀರು ಹರಿಸುತ್ತಿರುವುದರಿಂದ ಮನೆಯಲ್ಲಿ ಒಂದು ದಿನವರೆಗೆ ಪಾತ್ರೆಗಳಲ್ಲಿ ಸಂಗ್ರಹಿಸುವದರಿಂದ ನೀರು ಹಸಿರು ಬಣ್ಣಕ್ಕೆ ತಿರುಗಿವೆ. ಈ ನೀರನ್ನು ಕುಡಿದ ಮಕ್ಕಳು ಹಾಗೂ ಹಿರಿಯರಿಗೆ ವಿವಿಧ ರೋಗಗಳು ಹರಡುತ್ತಿದೆ ಎಂಬ ಆರೋಪ ಬಲವಾಗಿದೆ.
ಕೆರೆಗಳ ನಿರ್ವಹಣೆಯಿಲ್ಲ : ಗ್ರಾಮೀಣ ಪ್ರದೇಶದ ಪ್ರತಿ ಇಂತಿಷ್ಟು ಕುಡಿವ ನೀರಿನ ಕೆರೆಗಳ ನಿರ್ವಹಣೆಗೆ ಜಿಪಂ ವತಿಯಿಂದ ಒಬ್ಬ ಗುತ್ತಿಗೆದಾರರು ನಿರ್ವಹಿಸಬೇಕಿದೆ. ಆದರೆ, ಹಲವು ತಿಂಗಳಿಂದ ಕೆಟ್ಟು ನಿಂತ ಫಿಲ್ಟರ್‌ಗಳನ್ನು ಈವರೆಗೂ ದುರಸ್ತಿಗೊಳಿಸಿಲ್ಲ. ಅಲ್ಲದೆ, ಕುಡಿವ ಕೆರೆಗಳ ಸುತ್ತಲೂ ಬೇಲಿ ಬೆಳೆದು ತ್ಯಾಜ್ಯ ಹರಡಿದರೂ ಸ್ವಚ್ಛತೆಗೊಳಿಸಲು ನಿರ್ಲಕ್ಷೃ ತೋರುತ್ತಿದ್ದಾರೆ. ನರೇಗಾ ಯೋಜನೆಯಡಿ ಗ್ರಾಮದ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು (ಪಿಡಿಒ) ಪ್ರತಿ ವರ್ಷ ಕೆರೆಗಳಲ್ಲಿ ನೀರು ಖಾಲಿಯಾದ ನಂತರ ಮಣ್ಣಿನ ಹೂಳು ತೆಗಿಸಿಲ್ಲ. ಕೆರೆಗಳಿಗೆ ಹೊಂದಿಸಿರುವ ಕಲ್ಲು ಹಾಗೂ ಬಂಡೆಗಳು ಹಾಳಾಗಿದ್ದು ದುರಸ್ತಿಗೊಳಿಸಲು ಮುಂದಾಗಿಲ್ಲ. ಇದರಿಂದ ಕೆರೆಗಳಿಗೆ ನೀರು ಭರ್ತಿಯಾದ ನಂತರ ತ್ಯಾಜ್ಯ ಕಲುಷಿತಗೊಂಡು ರೋಗಗಳು ಉಲ್ಬಣವಾಗುವ ಸಾಧ್ಯತೆ ಹೆಚ್ಚಿದೆ. ಗ್ರಾಮಗಳಲ್ಲಿ ನಿರ್ಮಿಸಿರುವ ಕುಡಿವ ನೀರಿನ ಟ್ಯಾಂಕರ್‌ಗಳ ಸುತ್ತಲೂ ಬೇಲಿ ಬೆಳೆದಿವೆ. ತಡೆ ಗೋಡೆ ನಿರ್ಮಿಸಿ ಸ್ವಚ್ಛತೆ ಕೈಗೊಳ್ಳಬೇಕಾದ ಪಿಡಿಒಗಳು ಜವಾಬ್ದಾರಿ ಮರೆತಿದ್ದಾರೆ. ಕಳೆದ ಕೆಲ ವರ್ಷಗಳ ಹಿಂದಯೇ ಕೋಟ್ಯಾಂತರ ರೂ. ವೆಚ್ಚದಲ್ಲಿ ನಿರ್ಮಿಸಿರುವ ಕುಡಿವ ನೀರಿನ ಬಹುತೇಕ ಟ್ಯಾಂಕರ್‌ಗಳು ಶಿಥಿಲಾಗೊಂಡಿದ್ದು ಕಾಮಗಾರಿಯೂ ಗುಣಮಟ್ಟದಿಂದ ನಡೆದಿಲ್ಲ ಎಂಬುದು ಬಹಿರಂಗವಾಗಿದೆ.
ಬಾಕ್ಸ್ : ಗ್ರಾಮೀಣ ಪ್ರದೇಶದಲ್ಲಿ ಕುಡಿವ ನೀರಿನ ಮೂಲಗಳ ಪರಿ ಶುದ್ಧತೆ ಪರೀಕ್ಷೆ ವೇಳೆಯಲ್ಲಿ ಜಿಲ್ಲಾದ್ಯಂತ ಒಟ್ಟು 5466 ಜಲ ಮೂಲಗಳನ್ನು ಫಿಲ್ಡ್ ಟೆಸ್ಟ್ ಕಿಟ್ (ಎಫ್‌ಟಿಕೆ) ಮೂಲಕ ಪರೀಕ್ಷಿಸಲಾಗಿದೆ. ಇದರಲ್ಲಿ 261 ಕೊಳವೆ ಬಾವಿಗಳಲ್ಲಿ ಕುಡಿಯಲು ಯೋಗ್ಯವಿಲ್ಲದಷ್ಟು ಫ್ಲೋರೈಡ್ ಹೊಂದಿರುವುದು ತಿಳಿದಿದೆ. ನಂತರ ನೀರಿನ ಜಿಲ್ಲೆಯ ಪ್ರಯೋಗಾಲಯದ ಮೂಲಕ 210 ಮರು ಪರೀಕ್ಷೆಗೆ ಒಳಪಡಿಸಿದಾಗ ಯಾವುದೇ ಫ್ಲೋರೈಡ್ ಕಂಡುಬಂದಿಲ್ಲ. ಇನ್ನುಳಿದ ಮೂಲಗಳನ್ನು ಪರೀಕ್ಷಿಸಿ ವರದಿ ಪಡೆಯಬೇಕಿದೆ.
ಕೋಟ್... ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಗ್ರಾಮೀಣ ಪ್ರದೇಶದ ಕುಡಿವ ನೀರಿನ ಕೆರೆಗಳಿಗೆ ಅಶುದ್ಧ ನೀರು ಸೇರುತ್ತಿದೆ. ಶುದ್ಧಿಕರಿಸದೆ ನಂತರವೇ ಕುಡಿಯಲು ಹರಿಸಬೇಕು ಎಂಬುದಾಗಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಎಲ್ಲ ಗ್ರಾಮದ ಕುಡಿವ ನೀರಿನ ಕೆರೆಗಳನ್ನು ಪರೀಕ್ಷಿಸಲು ಕ್ರಮವಹಿಸಲಾಗುವುದು.
- ಇಂದುದರ್, ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್, ಗ್ರಾಮೀಣ ನೀರು ಸರಬಾರಜು ಇಲಾಖೆ, ಬಳ್ಳಾರಿ.