ಆಧುನಿಕ ಕಾಲದಲ್ಲೂ ದಲಿತರ ಮೇಲೆ ನಿಲ್ಲದ ಶೋಷಣೆ

QSSA
Published on

ಸರ್ಜಾಪುರ: ಸಂವಿಧಾನದ ಮೂಲಕ ದೇಶದ ಮಹಿಳೆಯರಿಗೆ ಹಕ್ಕು ಮತ್ತು ಅಧಿಕಾರ ಸಿಕ್ಕಿದೆ. ತಮ್ಮ ಬದುಕನ್ನು ತಾವೇ ನಿರ್ಧರಿಸುವಂತಹ ಹಕ್ಕನ್ನು ಕಲ್ಪಿಸಿಕೊಟ್ಟಿರುವುದು ಡಾ.ಬಿ.ಆರ್.ಅಂಬೇಡ್ಕರ್. ಹಾಗಾಗಿ ಮಹಿಳೆಯರು ಮೌಢ್ಯಕ್ಕೆ ಒತ್ತು ನೀಡದೆ ಜ್ಞಾನದ ಕಡೆಗೆ ಒತ್ತು ನೀಡಬೇಕಿದೆ ಎಂದು ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಮಾವಳ್ಳಿ ಶಂಕರ್ ತಿಳಿಸಿದರು.

ಸರ್ಜಾಪುರ ಸಮೀಪದ ಯಮರೆ ಗ್ರಾಮಪಂಚಾಯತಿ ವ್ಯಾಪ್ತಿಯ ಬಿ.ಹೊಸಹಳ್ಳಿಯಲ್ಲಿ ಭಾನುವಾರ ಡಾ.ಬಿ.ಆರ್.ಅಂಬೇಡ್ಕರ್ ಅವರ ಕಂಚಿನ ಪ್ರತಿಮೆ ಮತ್ತು ಅಂಬೇಡ್ಕರ್ ಭವನ ಉದ್ಘಾಟಿಸಿ ಮಾತನಾಡಿದರು.

ಅಂಬೇಡ್ಕರ್ ಅವರು ಓದಿಗಾಗಿ ತಮ್ಮ ಜೀವನವನ್ನೆ ಮುಡುಪಾಗಿಟ್ಟದ್ದರಿಂದ ಜಗತ್ತಿನಲ್ಲಿಯೇ ಶ್ರೇಷ್ಟವಾದ ಸಂವಿಧಾನ ರಚಿಸಲು ಸಾಧ್ಯವಾಯಿತು. ಭಾರತವು ಆಧುನಿಕತೆಯತ್ತ ಮುಂದುವರೆಯುತ್ತಿದ್ದರೂ ದಲಿತರ ಮೇಲೆ ಶೋಷಣೆ ನಿಂತಿಲ್ಲ. ಆದರೆ, ಯಮರೆ ಪಂಚಾಯತಿ ವ್ಯಾಪ್ತಿಯ ಬಿ.ಹೊಸಹಳ್ಳಿ ಗ್ರಾಮವು ಸಾಮರಸ್ಯಕ್ಕೆ ಮಾದರಿಯಾಗಿದೆ. ಗ್ರಾಮದಲ್ಲಿ ಯಾವ ಭೇದಭಾವವಿಲ್ಲದೆ ಎಲ್ಲ ಸಮುದಾಯದವರು ಒಟ್ಟಿಗೆ ಸೇರಿ ಅಂಬೇಡ್ಕರ್ ಪ್ರತಿಮೆ ನಿರ್ಮಾಣ ಮಾಡಿರುವುದು ಮಾದರಿ ವಿಷಯ ಎಂದರು.

ಭಾರತ ರತ್ನ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಸೇವಾ ಟ್ರಸ್ಟ್ ಅಧ್ಯಕ್ಷ ವೈ.ಶ್ರೀರಾಮುಲು ಮಾತನಾಡಿ, ಡಾ.ಬಿ.ಆರ್.ಅಂಬೇಡ್ಕರ್ ಅವರು ಸಂವಿಧಾನದ ರಚನೆ ಮಾಡಿದ್ದು, ಕೇವಲ ಒಂದು ಜಾತಿಗೆ ಸೀಮಿತಗೊಳಿಸಿಲ್ಲ. ಎಲ್ಲ ಸಮುದಾಯದ ರಕ್ಷಣೆಗೆ ಮತ್ತು ಬದುಕಿಗೆ ಸಂವಿಧಾನದ ಮೂಲಕ ಕಾನೂನನ್ನು ರೂಪಿಸಿದ್ದಾರೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ. ಶಿಕ್ಷಣದಿಂದ ಅಭಿವೃದ್ಧಿ ಸಾಧ್ಯ. ಈ ನಿಟ್ಟಿನಲ್ಲಿ ಸಮುದಾಯದ ಯುವಕರು ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡುವ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಮೂಲಕ ಐಎಎಸ್, ಐಪಿಎಸ್ ಸೇರಿ ಉನ್ನತ ಪಡಿಯಬೇಕೆಂದು ಅವರು ಆಶಿಸಿದರು.

ಯಮರೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಲೋಚನಾ ರವಿ, ಹೋರಾಟಗಾರರಾದ ಡಾ.ವೈ ಚಿನ್ನಪ್ಪ ಚಿಕ್ಕಹಾಗಡೆ, ಕೋಲಾರ ಸಂದೇಶ್, ಎಂ.ಸಿ ಹಳ್ಳಿ ವೇಣು. ರಾವಣ್ಣ, ಮದ್ದೂರಪ್ಪ, ಜಿ.ನಾಗರಾಜು, ಆಯೋಜಕರಾದ ವಿಜಯಕುಮಾರ್, ರವಿ, ರಾಮ್ ಚೇತನ್, ರಮೇಶ್‌ರೆಡ್ಡಿ, ಮುಖಂಡರಾದ ಯಮರೆ ಜಯಶಂಕರ್, ಜಿ.ಮುನಿಯಪ್ಪ, ಎಂ.ಮೂರ್ತಿ ಕುಮಾರ್, ಸತೀಶ್‌ಕುಮಾರ್, ಕೆಂಪಣ್ಣ, ಶಿವಪ್ಪರೆಡ್ಡಿ, ದೇವರಾಜ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net