

ಗೋಕರ್ಣ: ಕಳೆದ ಕೆಲವು ದಿನಗಳಿಂದ ನೀರು ಪೂರೈಕೆ ಸ್ಥಗಿತಗೊಳಿಸಿ ಜಲ ಶುದ್ಧೀಕರಣ ಘಟಕಕ್ಕೆ ಬೀಗ ಹಾಕಿದ್ದನ್ನು ವಿರೋಧಿಸಿ ವಿವಿಧ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿದರು.
ಗೋಕರ್ಣ ಮತ್ತು ಸುತ್ತಲಿನ 7 ಗ್ರಾಪಂ ಹಾಗೂ ಅಂಕೋಲಾ ತಾಲೂಕಿನ 3 ಗ್ರಾಪಂಗಳಿಗೆ ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ನೀರು ಪೂರೈಸಲಾಗುತ್ತಿದೆ. ನೀರು ಪೂರೈಕೆ ಟೆಂಡರ್ ಪಡೆದವರ ಕಾಲಮಿತಿ ಇತ್ತೀಚೆಗೆ ಮುಗಿದ ಹಿನ್ನೆಲೆಯಲ್ಲಿ ಇಲಾಖೆ ಹೊಸ ಗುತ್ತಿಗೆದಾರರನ್ನು ಗೊತ್ತುಪಡಿಸಿ ಕಾರ್ಯ ನಿರ್ವಹಿಸಲು ಆದೇಶಿಸಿತ್ತು. ಆದರೆ, ಗುತ್ತಿಗೆದಾರರು ಕಾರ್ಯ ನಿರ್ವಹಿಸಲು ಸಾಧ್ಯವಾಗದಂತೆ ಹಿಂದಿನ ಗುತ್ತಿಗೆದಾರರು ಕಳೆದ ಮಂಗಳವಾರ ಜಲ ಶುದ್ಧೀಕರಣ ಘಟಕಕ್ಕೆ ಬೀಗ ಜಡಿದಿದ್ದರು. ಆಕ್ರೋಶಗೊಂಡ ಗ್ರಾಮಸ್ಥರು ಇಲಾಖೆಯ ಕಾರ್ಯ ನಿರ್ವಾಹಕ ಇಂಜನಿಯರ್‌ಗೆ ದೂರು ಸಲ್ಲಿಸಿದ್ದರು.
ಗ್ರಾಮಸ್ಥರ ದೂರಿನ ಮೇರೆಗೆ ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ಇಲಾಖೆ ಕಾರ್ಯ ನಿರ್ವಾಹಕ ಇಂಜಿನಿಯರ್ ತಕ್ಷಣ ಬೀಗ ತೆರವು ಮಾಡಿ ನೀರು ಪೂರೈಸುವಂತೆ ನಿರ್ದೇಶನ ನೀಡಿದ್ದರು. ಇದನ್ನು ಅನುಸರಿಸಿ ಸೋಮವಾರ ವಿವಿಧ ಗ್ರಾಮಗಳಿಂದ ಬಂದ ನೂರಾರು ಜನ ಪೊಲೀಸ್ ನೆರವಿನೊಂದಿಗೆ ಆಂದ್ಲೆಯಲ್ಲಿನ ಜಲ ಶುದ್ಧೀಕರಣ ಘಟಕದ ಬೀಗ ತೆರವು ಮಾಡಿಸಿದರು.
ಅಂಕೋಲಾ ತಾಪಂ ಕಾನಿ ಅಧಿಕಾರಿ ಸುನೀಲ್ ಎಂ. ಮತ್ತು ಪಿಎಸ್‌ಐ ಉದ್ದೆಪ್ಪ ದರೆಪ್ಪನವರ್ ಸ್ಥಳದಲ್ಲಿದ್ದು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಅಧಿಕೃತ ಗುತ್ತಿಗೆದಾರ ರಾಜು ನಾಯಕ ಸಗಡಗೇರಿ ಅವರಿಗೆ ನೀರು ಬಿಡುವಂತೆ ತಿಳಿಸಿ ಸಮಸ್ಯೆಯನ್ನು ಬಗೆಹರಿಸಿದರು.
ಮೊಗಟಾ ಗ್ರಾಪಂ ಅಧ್ಯಕ್ಷೆ ಸುಮನಾ ನಾಯಕ, ಸಗಡಗೇರಿ ಅಧ್ಯಕ್ಷ ಶ್ರವಣ ನಾಯ್ಕ, ತಾಪಂ ಮಾಜಿ ಅಧ್ಯಕ್ಷೆ ಸುಜಾತಾ ಗಾಂವಕರ, ಗ್ರಾಪಂ ಸದಸ್ಯರಾದ ಸುಬ್ಬಯ್ಯ ನಾಯಕ, ಮಹೇಶ ನಾಯಕ, ದೇವಾನಂದ ನಾಯಕ, ಪ್ರಮುಖರಾದ ರಾಮು ಕೆಂಚನ್ ಹಿರೇಗುತ್ತಿ,ನಾಗರಾಜ ನಾಯಕ ಹಿರೇಗುತ್ತಿ, ಕುಮಾರ ಕವರಿ, ಶಂಕರ ಗೌಡ ಹೆಗ್ರೆ, ಸಂದೀಪ ನಾಯಕ ಕಾರೇಬೈಲು ಇತರರಿದ್ದರು.