ಮುಚ್ಚಿರುವ ಬಸಿಗಾಲುವೆ ಮುಕ್ತಗೊಳಿಸಿ

18sgr2
ಮನೆಘಟ್ಟ ಗ್ರಾಮದಲ್ಲಿ ಕೆರೆ ಬಸಿಗಾಲುವೆ ಮುಕ್ತಗೊಳಿಸಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ಎಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ರಮೇಶ್ ಕೆಳದಿ, ದೇವೇಂದ್ರಪ್ಪ, ಕನ್ನಪ್ಪ, ಮಹಾಬಲ, ಗಾಯತ್ರಿ, ಕವಿತಾ, ಯಶೋದಾ ಇತರರಿದ್ದರು.
Published on

ಸಾಗರ: ತಾಲೂಕಿನ ಕಸಬಾ ಹೋಬಳಿಯ ಮಾಸೂರು ಗ್ರಾಪಂ ವ್ಯಾಪ್ತಿಯ ಮನೆಘಟ್ಟ ಗ್ರಾಮದಲ್ಲಿ ಕೆರೆ ಬಸಿಗಾಲುವೆಗೆ ಹಾಕಿರುವ ಮಣ್ಣನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಗ್ರಾಮಸ್ಥರು ಉಪವಿಭಾಗಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

ಮನೆಘಟ್ಟ ಗ್ರಾಮದ ಸರ್ವೇ ನಂ.169ರ ತೋಟದ ಮೇಲಿನ ಕೆರೆಯಿಂದ ಜಮೀನಿಗೆ ನೀರು ಹರಿಯುತ್ತಿದ್ದ ಬಸಿಗಾಲುವೆಯನ್ನು ಕೆಲವರು ಮುಚ್ಚಿದ್ದಾರೆ. ಮುಚ್ಚಿರುವ ಬಸಿಗಾಲುವೆಯನ್ನು ಮುಕ್ತಗೊಳಿಸುವಂತೆ ಕಳೆದ ತಿಂಗಳು ತಹಸೀಲ್ದಾರ್‌ಗೆ ಮನವಿ ಸಲ್ಲಿಸಲಾಗಿತ್ತು. ಆದರೆ ಯಾವ ಅಧಿಕಾರಿಗಳೂ ಸ್ಥಳಕ್ಕೆ ಬಂದು ಪರಿಶೀಲಿಸಿಲ್ಲ ಎಂದು ತಾಲೂಕು ಪ್ರಗತಿಪರ ಯುವ ಒಕ್ಕೂಟದ ಅಧ್ಯಕ್ಷ ರಮೇಶ್ ಇ. ಕೆಳದಿ ದೂರಿದರು.
ಈ ಭಾಗದಲ್ಲಿ ಸುಮಾರು 80 ಕುಟುಂಬಗಳು ವಾಸಿಸುತ್ತಿವೆ. 150ಕ್ಕೂ ಹೆಚ್ಚು ಎಕರೆ ಜಮೀನಿಗೆ ಈ ಬಸಿಗಾಲುವೆ ನೀರಿನ ಮೂಲ. ತಕ್ಷಣ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಮುಚ್ಚಿರುವ ಬಸಿಗಾಲುವೆಯನ್ನು ಮುಕ್ತಗೊಳಿಸಿ ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸಬೇಕು. ಇಲ್ಲವಾದಲ್ಲಿ ಪ್ರತಿಭಟನೆ ತೀವ್ರಗೊಳಿಸುತ್ತೇವೆ ಎಂದು ಎಚ್ಚರಿಸಿದರು.
ದೇವೇಂದ್ರಪ್ಪ ಯಲಕುಂದ್ಲಿ ಮಾತನಾಡಿ, ಗ್ರಾಮಸ್ಥರಿಗೆ ಯಾರು ತೊಂದರೆ ಕೊಡುತ್ತಾರೋ ಅವರಿಗೆ ತಿಳಿವಳಿಕೆ ಮೂಡಿಸಿ ಶಾಸಕರ ಗಮನಕ್ಕೆ ವಿಷಯ ತಂದು ಸಮಸ್ಯೆ ಇತ್ಯರ್ಥಪಡಿಸಬೇಕು ಎಂದು ಮನವಿ ಮಾಡಿದರು.
ರವಿ ಕುಗ್ವೆ, ಕನ್ನಪ್ಪ ಬೆಳಲಮಕ್ಕಿ, ಮಹಾಬಲ, ಛಾಯಪ್ಪ, ಕೃಷ್ಣಪ್ಪ, ವೀರಭದ್ರ, ದೇವೇಂದ್ರ, ಸುರೇಂದ್ರ, ಕಮಲಾಕರ, ಅಣ್ಣಪ್ಪ, ಗಾಯತ್ರಿ, ಕವಿತಾ, ಯಶೋದಾ, ನೇತ್ರಾವತಿ, ಕಲಾವತಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net