

ಬೂದಿಕೋಟೆ: ಸರ್ಕಾರಿ ಶಾಲೆಯ ಕಟ್ಟಡವನ್ನು ಅನಧಿಕೃತವಾಗಿ ವಾಸ್ತವ್ಯಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದು, ಎರಡು ದಿನಗಳ ಒಳಗೆ ತೆರವುಗೊಳಿಸಿ ಅಂಗನವಾಡಿ ಕೇಂದ್ರಕ್ಕೆ ನೀಡಲಾಗುತ್ತದೆ ಎಂದು ಬಿಇಒ ಜಿ.ಗುರುಮೂರ್ತಿ ತಿಳಿಸಿದರು.
ಬಂಗಾರಪೇಟೆ ತಾಲೂಕಿನ ಬೂದಿಕೋಟೆಯ ಸರ್ಕಾರಿ ಉರ್ದು ಶಾಲೆಯಲ್ಲಿ ಶುಕ್ರವಾರ ಮಾತನಾಡಿ, ಗ್ರಾಮದ ಸರ್ಕಾರಿ ಉರ್ದು ಶಾಲೆಯ ಕಟ್ಟಡವನ್ನು ಅತಿಕ್ರಮಿಸಿದ್ದಾರೆ ಎಂದು ಗ್ರಾಮಸ್ಥರಿಂದ ದೂರು ಬಂದ ಕಾರಣ ಶಾಲೆಗೆ ಭೇಟಿ ಮಾಡಿ ಪರಿಶೀಲನೆ ಮಾಡಲಾಗಿದೆ. ಈ ಹಿಂದೆ ಇಲ್ಲಿ ಸರ್ಕಾರಿ ಉರ್ದು ಶಾಲೆ ಇದ್ದರೂ, ಮಕ್ಕಳ ಸಂಖ್ಯೆ ಕಡಿಮೆ ಇದ್ದ ಕಾರಣ ಶಾಲೆ ಮುಚ್ಚಲಾಗಿತ್ತು. ಈಗ ಯಾವುದೇ ಸೂಚನೆ ಪಡೆಯದೇ ಕಟ್ಟಡ ರಿಪೇರಿ ಮಾಡಿ ಸುಣ್ಣಬಣ್ಣ ಬಳಿಯಲಾಗಿದೆ. ಜತೆಗೆ ಇಲ್ಲಿ ಹಜರತ್ ನಡೆಸಲಾಗುತ್ತ್ತಿದೆ ಎಂದು ಹೇಳುತ್ತಿದ್ದು, ಕಟ್ಟಡದಲ್ಲಿ ಸಂಸಾರವೂ ಇದೆ.
ಕಟ್ಟಡಕ್ಕೆ ಸಂಬಂಧಿಸಿದಂತೆ ಈ ಸ್ವತ್ತು ಸರ್ಕಾರಿ ಉರ್ದು ಪ್ರಾಥಮಿಕ ಶಾಲೆಯ ಹೆಸರಿಗೆ ಇದೆ. ಆದ್ದರಿಂದ ಇದನ್ನು ಸರ್ಕಾರಿ ಶಾಲಾ ಕಟ್ಟಡ ಎಂದು ಪರಿಗಣಿಸಲಾಗುತ್ತದೆ. ಕಟ್ಟಡದಲ್ಲಿ ಅಳವಡಿಸಿದ್ದ ಶಾಲೆಯ ನಾಮಫಲಕ ಅನಧಿಕೃತವಾಗಿ ತೆಗೆದು ಸಂಸಾರಕ್ಕೆ ಬಳಕೆ ಮಾಡಲಾಗುತ್ತಿರುವುದು ಕಾನೂನು ಬಾಹಿರ ಎಂದರು.
ಹಜರತ್ ಸದಸ್ಯರು ಗ್ರಾಪಂಗೆ ತಮ್ಮಲ್ಲಿ ಇರುವ ದಾಖಲೆಗಳನ್ನು ಒದಗಿಸಿ, ಕಟ್ಟಡ ಅವರದ್ದೇ ಆಗಿದ್ದರೆ ಕೇಳಿ ಪಡೆಯಬಹುದು ಎಂದು ಸೂಚಿಸಿದರು. ಕೆಲ ಮುಸ್ಲಿಂ ಸಮುದಾಯದ ಯುವಕರು ಇದು ವಕ್ಫ್ ಆಸ್ತಿಯಾಗಿರುವ ಕಾರಣ ಮದರಸಾ ನಡೆಸಲಾಗುತ್ತಿದೆ ಎಂದು ತಗಾದೆ ತೆಗೆದರು.
ಅಂಗನವಾಡಿ ಕೇಂದ್ರಕ್ಕೆ ಹಸ್ತಾಂತರ
ಸಮೀಪದಲ್ಲಿ ಅಂಗನವಾಡಿ ಕೇಂದ್ರವಿದ್ದು, ಅದೂ ಶಿಥಿಲಗೊಂಡಿರುವ ಕಾರಣ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಉರ್ದು ಶಾಲಾ ಕಟ್ಟಡವನ್ನು ಬಳಕೆಗೆ ನೀಡಲು ಮನವಿ ಮಾಡಿದ್ದಾರೆ. ಅದರಂತೆ ಮಹಜರ್ ನಡೆಸಿ ಮೇಲಾಧಿಕಾರಿಗಳಿಗೆ ವರದಿ ನೀಡಲಾಗುತ್ತದೆ. ಮುಂದಿನ ಎರಡು ದಿನಗಳ ಒಳಗೆ ಕಟ್ಟಡದಲ್ಲಿನ ಸಂಸಾರ ತೆರೆವುಗೊಳಿಸಿ ಅಂಗನವಾಡಿ ಕೇಂದ್ರಕ್ಕೆ ಹಸ್ತಾಂತರ ಮಾಡಲಾಗುತ್ತದೆ ಎಂದು ಬಿಇಒ ತಿಳಿಸಿದರು.