

ಕೆರೂರ : ಇಲ್ಲಿನ ಸರ್ಕಾರಿ ಹೆಣ್ಣು ಮಕ್ಕಳ ಶಾಲಾ ಕಾಂಪೌಂಡ್‌ಗೆ ಹೊಂದಿಕೊಂಡಿದ್ದ ಅನಧಿಕೃತ ಶೆಡ್‌ಗಳನ್ನು ಶುಕ್ರವಾರ ಪಟ್ಟಣ ಪಂಚಾಯಿತಿ ಸಿಬ್ಬಂದಿ ತೆರವುಗೊಳಿಸಿದರು.
ಹಲವಾರು ವರ್ಷಗಳಿಂದ ಅನಧಿಕೃತವಾಗಿ ಸರ್ಕಾರಿ ಜಾಗಯಲ್ಲಿ ಶೆಡ್ ನಿರ್ಮಾಣ ಮಾಡಿಕೊಂಡು ವಾಸುತ್ತಿದ್ದರು. ಶಾಲಾ ಕಾಂಪೌಂಡ್‌ಗೆ ಹೊಂದಿಕೊಂಡಿರುವುದರಿಂದ ಮಕ್ಕಳ ಕಲಿಕೆಗೆ ತೊಂದರೆಯಾಗುತ್ತಿತ್ತು. ಶುಕ್ರವಾರ ಪೊಲೀಸ್ ಬಂದೋಬಸ್ತ್‌ನೊಂದಿಗೆ ತೆರವು ಕಾರ್ಯಾಚರಣೆ ನಡೆಯಿತು.
ದೂರು: ಶಾಲೆಯ ಕಾಂಪೌಂಡ್‌ಗೆ ಹೊಂದಿಕೊಂಡಿದ್ದ ಅನಧಿಕೃತ ಶೆಡ್‌ಗಳಲ್ಲಿ ದನ, ಎಮ್ಮೆ, ಕರಗಳನ್ನು ಕಟ್ಟುತ್ತಿದ್ದರು. ಸ್ನಾನದ ನೀರು ಶಾಲಾ ಆವರಣದದಲ್ಲಿ ಹರಿಯುತ್ತಿತ್ತು. ಈ ಕುರಿತು ಜಿಲ್ಲಾಧಿಕಾರಿಗಳಿಗೆ ಶಾಲಾ ಆಡಳಿತ ಮಂಡಳಿ ಲಿಖಿತ ದೂರು ನೀಡಿತ್ತು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ರಮೇಶ ಮಾಡಬಾಳ ಮಾತನಾಡಿ, ಸರ್ಕಾರಿ ಜಾಗದಲ್ಲಿ ಅನಧಿಕೃತವಾಗಿ ಶೆಡ್ ನಿರ್ಮಾಣ ಮಾಡಿಕೊಂಡ ಮಾಲಿಕರಿಗೆ ತೆರವುಗೊಳಿಸುವಂತೆ ಸೂಚಿಸಿದ್ದರೂ ಸ್ಪಂದಿಸಿರಲಿಲ್ಲ. ಈಗ ಮೇಲಧಿಕಾರಿಗಳ ಆದೇಶದಂತೆ ಜೆಸಿಬಿ ಮೂಲಕ ತೆರವುಗೊಳಿಸಲಾಯಿತು ಎಂದರು.
ಕಿಲ್ಲಾಪೇಟೆ ಹೋಗುವ ರಸ್ತೆಯ ಸಾರ್ವಜನಿಕ ಶೌಚಗೃಹದ ಪಕ್ಕದಲ್ಲಿ ಅನಧಿಕೃತ ಶೆಡ್ ನಿರ್ಮಿಸಿರುವುದರಿಂದ ಶೌಚಗೃಹಕ್ಕೆ ಹೋಗುವ ದಾರಿ ಬಂದಾಗಿದೆ. ಅಲ್ಲಿರುವ ಅನಧಿಕೃತ ಶೆಡ್ ತೆರಗೊಳಿಸಿ ಶೌಚಗೃಹ ದುರಸ್ತಿಗೊಳಿಸುವಂತೆ ಸಿಬ್ಬಂದಿಗೆ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸೂಚಿಸಿದರು.
ಸಿಬ್ಬಂದಿ ಎಂ.ಐ. ಹೊಸಮನಿ, ನವೀನ ಮಾಹಜನವರ, ಸಂಗಮೇಶ ಮಾದರ,ಪೌರ ಕಾರ್ಮಿಕರು, ಪೊಲೀಸ್ ಸಿಬ್ಬಂದಿ ಎಸ್.ಎಂ. ಬಗಲಿ, ಪ್ರವೀಣ ಘಾಟಗೆ, ಅಕಳವಾಡಿ ಇದ್ದರು.